
ಮತದಾರ ಪ್ರಭುವಿಗೆ ಅಂಜಿದಂತೆ ಮಾಡಿ ಚುನಾವಣೆ ಮುಗಿಯುತ್ತಿದ್ದಂತೆ ಕೇಂದ್ರ ಸರಕಾರ ಪೆಟ್ರೋಲ್ ಬೆಲೆಯನ್ನು ಸಿಕ್ಕಾಪಟ್ಟೆ ಏರಿಸಿಬಿಟ್ಟಿದೆ. ಮತ್ತೊಂದು ಆತಂಕದ ವಿಷಯವೆಂದರೆ ಈಗ 5 ರುಪಾಯಿ ಹೆಚ್ಚಿಸಿದ್ದರೂ ತೈಲ ಕಂಪನಿಗಳು ಲೀಟರ್ ಗೆ 6 ರುಪಾಯಿ ನಷ್ಟ ಅನುಭವಿಸುತ್ತಿವೆ. ಇದರಿಂದ ಪಾರಾಗಲು ಮತ್ತೊಮ್ಮೆ ಸದ್ಯದಲ್ಲೇ ಮತ್ತೆ ಪೆಟ್ರೋಲ್ ಬೆಲೆ ಹೆಚ್ಚಳವಾಗುವುದು ಖಚಿತವೆನ್ನಲಾಗಿದೆ.
ಈಗಾಗಲೇ ಸತತವಾಗಿ ಬೆಲೆ ಹೆಚ್ಚಳಗಳಿಂದ ಬಸವಳಿದಿರುವ ಶ್ರೀಸಾಮಾನ್ಯನ ದೈನಂದಿನ ಬದುಕು ಆ ಭಗವಂತನಿಗೇ ಪ್ರೀತಿ ಎನ್ನುವಂತಾಗಿದೆ. ಸಮಾಧಾನಕರ ವಿಷಯವೆಂದರೆ ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ಹೆಚ್ಚಿಸಿಲ್ಲ. ಆದರೆ ಅಡುಗೆ ಅನಿಲದ ದರ ಸಿಡಿಲು ಯಾವುದೇ ಕ್ಷಣ ಅಡುಗೆ ಮನೆಗೆ ಬೆಂಕಿಹಚ್ಚುವ ಸಾಧ್ಯತೆಗಳು ದಿಟ್ಟವಾಗಿವೆ.

ಶನಿವಾರ ಮಧ್ಯರಾತ್ರಿಯಿಂದ (May 14) ಲೀಟರ್ ಪೆಟ್ರೋಲ್ ಬೆಲೆ 5 ರುಪಾಯಿ ಹೆಚ್ಚಾಗಿದೆ. ಇದರಿಂದ ಬೆಂಗಳೂರಿನಲ್ಲಿ ಪೆಟ್ರೋಲ್ ದರ 71 ರುಪಾಯಿ ಆಗಿದೆ. ಈ ಮಾಸಾಂತ್ಯಕ್ಕೇ ಡೀಸೆಲ್ ಬೆಲೆ 4 ರು. ಏರಲಿದ್ದರೆ ಅಡುಗೆ ಅನಿಲ ಬೆಲೆ 25 ರುಪಾಯಿ ಹೆಚ್ಚಾಗಲಿದೆ. ಆಗ ಪೆಟ್ರೋಲ್ ದರವನ್ನು ಮತ್ತೂ ಒಮ್ಮೆ ಹೆಚ್ಚಿಸುವ ಇರಾದೆಯಿದೆ.
ಅತ್ತ ಪೆಟ್ರೋಲ್ ಮಾರಾಟ ದರ ನಿಯಂತ್ರಣವನ್ನು ಕೇಂದ್ರ ಸರಕಾರ ತನ್ನ ಹಿಡಿತದಿಂದ ಮುಕ್ತಗೊಳಿಸಿದ್ದೇ ಬಂತು ತೈಲ ಕಂಪನಿಗಳು ಬಳಕೆದಾರರ ಮೇಲೆ ಮುರುಕೊಂಡು ಬಿದ್ದಿವೆ. ಶ್ರೀಸಾಮಾನ್ಯನ ಬದುಕಿಗೆ ಸವಾಲೊಡ್ಡುವಂತೆ ಕಳೆದ 11 ತಿಂಗಗಳಲ್ಲಿ 9 ಬಾರಿ ಪೆಟ್ರೋಲ್ ದರಕ್ಕೆ ಕಿಚ್ಚು ಹಚ್ಚಿವೆ