Keblinger

Keblinger

ಪುರಸಭೆಗಳ ಚುನಾವಣೆ-2013

| 12 March 2013


ಹಾಸನ ಸುದ್ದಿ : ೦೩
ಸಕಲೇಶಪುರ ಪುರಸಭೆಗೆ ನಡೆದ ಚುನಾವಣೆಯಲ್ಲಿ ಜೆ.ಡಿ.ಎಸ್ ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳನ್ನು ಗಳಿಸಿದರು ಸಹ ೨ ಪಕ್ಷೇತರರ ನೆರವಿನಿಂದ ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಒಟ್ಟು ೨೩ ವಾರ್ಡ್‌ಗಳಲ್ಲಿ ೧೧(ಜೆ.ಡಿ.ಎಸ್), ೬(ಕಾಂಗ್ರೆಸ್), ೨(ಬಿ.ಜೆ.ಪಿ), ೨(ಕೆ.ಜೆ.ಪಿ), ೨(ಪಕ್ಷೇತರ) ಅಭ್ಯರ್ಥಿಗಳು ಜಯಶೀಲರಾಗಿರುತ್ತಾರೆ. ವಾರ್ಡ್‌ವಾರು ವಿಜೇತರ ಪಟ್ಟಿ ಇಂತಿದೆ.
ಸಕಲೇಶಪುರ : ೧ನೇ ವಾರ್ಡ್ :ಸತ್ಯವತಿ(ಬಿಜೆಪಿ), ೨ನೇ ವಾರ್ಡ್ :ಮಹೇಶ್(ಬಿಜೆಪಿ), ೩ನೇ ವಾರ್ಡ್ :ನಿರ್ವಾಣಯ್ಯ(ಜೆಡಿಎಸ್), ೪ನೇ ವಾರ್ಡ್ :ಮುಖೇಶ್ ಶೆಟ್ಟಿ (ಜೆಡಿಎಸ್), ೫ನೇವಾರ್ಡ್ :ವೆಂಕಟೇಶ್ (ಜೆಡಿಎಸ್), ೬ನೇವಾರ್ಡ್ :ಸಂತೋಷ್ ಜೈನ್(ಜೆಡಿಎಸ್), ೭ನೇವಾರ್ಡ್ :ಕಾಳಿಂಗಪ್ಪ(ಕಾಂಗ್ರೆಸ್), ೮ನೇವಾರ್ಡ್ :ಶೋಭ(ಕಾಂಗ್ರೆಸ್), ೯ನೇ ವಾರ್ಡ್ :ಸಯ್ಯದ್‌ಮುಫೀಜ್(ಕಾಂಗ್ರೆಸ್), ೧೦ನೇವಾರ್ಡ್ :ಪದ್ಮ (ಕಾಂಗ್ರೆಸ್), ೧೦ನೇವಾರ್ಡ್ :ಸುಮಿತ್ರ(ಕಾಂಗ್ರೆಸ್), ೧೨ನೇ ವಾರ್ಡ್ :ಎಸ್.ಕೆ.ಸೂರ್ಯ(ಪಕ್ಷೇತರ), ೧೩ನೇವಾರ್ಡ್ :ರುದ್ದಕುಮಾರ್(ಕೆಜೆಪಿ), ೧೪ನೇ ವಾರ್ಡ್ :ರೇಖಾ(ಕೆಜೆಪಿ), ೧೫ನೇವಾರ್ಡ್ :ಭಾಗ್ಯ(ಜೆಡಿಎಸ್), ೧೬ನೇ ವಾರ್ಡ್ :ಸಮೀರ್(ಜೆಡಿಎಸ್), ೧೭ನೇ ವಾರ್ಡ್ :ಸತೀಶ್(ಜೆಡಿಎಸ್), ೧೮ನೇವಾರ್ಡ್ :ಎಂ.ಎಸ್.ಗಿರೀಶ್(ಪಕ್ಷೇತರ), ೧೯ನೇ ವಾರ್ಡ್ :ಲಲಿತಮ್ಮ(ಜೆಡಿಎಸ್), ೨೦ನೇ ವಾರ್ಡ್ :ತಾಜುನೀಸ್ (ಜೆಡಿಎಸ್), ೨೧ನೇ ವಾರ್ಡ್ :ಜೆ.ಬಿ.ಡಿಸೋಜಾ(ಕಾಂಗ್ರೆಸ್), ೨೨ನೇ ವಾರ್ಡ್ :ಪುಷ್ಟವತಿ (ಜೆಡಿಎಸ್), ೨೩ನೇ ವಾರ್ಡ್ :ಉಮೇಶ್ (ಜೆಡಿಎಸ್), ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಅರಸೀಕರೆ ಸುದ್ದಿ : ೧ನೇ ವಾರ್ಡ್ ಪಂಚಾಕ್ಷರಿ (ಜೆ.ಡಿಎಸ್), ೨ನೇವಾರ್ಡ್ ಪಿ. ಬಾಲಮುರುಗನ್(ಕಾಂಗ್ರೆಸ್), ೩ನೇವಾರ್ಡ್ ಸಯ್ಯದ್ ಗಯಾಸುದ್ದೀನ್ (ಜೆ.ಡಿಎಸ್), ೪ನೇವಾರ್ಡ್ ಮಂಜುನಾಥ (ಜೆ.ಡಿಎಸ್), ೫ನೇ ವಾರ್ಡ್ ಸುರೇಶ್ ಆರ್ (ಜೆಡಿಎಸ್), ೬ನೇ ವಾರ್ಡ್ ಅನ್ನಪೂರ್ಣ (ಜೆಡಿಎಸ್), ೭ನೇ ವಾರ್ಡ್ ವೈ.ಜೆ.ಹಾಜಿವಲಿ(ಕಾಂಗ್ರೆಸ್), ೮ನೇ ವಾರ್ಡ್ ಭಾಗ್ಯಲತಾ ಮಂಜು(ಜೆಡಿಎಸ್), ೯ನೇ ವಾರ್ಡ್ ಮಂಜುಳ ಮಂಜುನಾಥ (ಕಾಂಗ್ರೆಸ್), ೧೦ನೇವಾರ್ಡ್ ಜಿ.ಗೌರಮ್ಮ (ಕಾಂಗ್ರೆಸ್), ೧೧ನೇ ವಾರ್ಡ್ ಖುಷಿ ಬಾಬು ಎಂ.ವಿ.(ಜೆಡಿಎಸ್), ೧೨ನೇ ವಾರ್ಡ್ ಗೀತಾ(ಕಾಂಗ್ರೆಸ್), ೧೩ನೇ ವಾರ್ಡ್ ಮಾಲಾಬಾಯಿ (ಕಾಂಗ್ರೆಸ್), ೧೪ನೇ ವಾರ್ಡ್ ಜೆ.ವಿ.ರಂಗನಾಥ (ಕಾಂಗ್ರೆಸ್), ೧೫ನೇ ವಾರ್ಡ್ ಎ.ಎಂ.ಶ್ರೀನಿವಾಸ (ಕಾಂಗ್ರೆಸ್), ೧೬ನೇ ವಾರ್ಡ್ ಪೈರೋಸ್ (ಜೆಡಿಎಸ್), ೧೭ನೇ ವಾರ್ಡ್ ಎಸ್.ಎಸ್.ಶೈಲೇಂದ್ರ ಕುಮಾರ್ (ಕೆಜೆಪಿ), ೧೮ನೇ ವಾರ್ಡ್ ಕಾಂತೇಶ್ (ಕಾಂಗ್ರೆಸ್), ೧೯ನೇ ವಾರ್ಡ್ ರೇಷ ಬಾನು (ಕಾಂಗ್ರೆಸ್), ೨೦ನೇ ವಾರ್ಡ್ ಕೆ.ಪಿ.ಬಬ್ರುವಾಹನರಾವ್ (ಪಕ್ಷೇತರ), ೨೧ನೇ ವಾರ್ಡ್ ವಿದ್ಯಾಧರ ಬಿ.ಎನ್ (ಪಕ್ಷೇತರ) ೨೨ನೇ ವಾರ್ಡ್ ಕೆ ಜೆ ಪಾರ್ಥಸಾರಥಿ (ಜೆಡಿಎಸ್), ೨೩ನೇ ವಾರ್ಡ್ ಎಂ ಸಮೀವುಲ್ಲಾ (ಜೆಡಿಎಸ್), ೨೪ನೇ ವಾರ್ಡ್ ಯುನಸ್ (ಪಕ್ಷೇತರ), ೨೫ನೇ ವಾರ್ಡ್ ಎ ಎಸ್ ಕೆ ನಸೀಮಾ ಭಾನು (ಜೆಡಿಎಸ್) ೨೬ನೇ ವಾರ್ಡ್ ಬಿ. ಗೀತಾ ವಿಶ್ವನಾಥ (ಕಾಂಗ್ರೆಸ್), ೨೭ನೇ ವಾರ್ಡ್ ಮೋಹನಕುಮಾರ ಕೆ.ಎನ್.(ಪಕ್ಷೇತರ)ಅಭ್ಯರ್ಥಿಗಳು ಜಯಗಳಿಸಿದರೆ ಇನ್ನೂ
ಹೊಳೆನರಸೀಪುರ ಸುದ್ದಿ : ೧ನೇ ವಾರ್ಡ್ ಶೋಭ (ಕಾಂಗ್ರೆಸ್), ೨ನೇವಾರ್ಡ್ ರಂಗನಾಥ (ಪಕ್ಷೇತರ), ೩ನೇವಾರ್ಡ್ ಜಿಕ್ರಿಯಾ ಅಹಮದ್ ಷರೀಫ್ (ಜೆಡಿಎಸ್), ೫ನೇವಾರ್ಡ್ ಪೈರೋಸ್ ಖಾನ್ (ಜೆಡಿಎಸ್), ೬ನೇವಾರ್ಡ್ ಮುಫಿದ್ ಅಲಿ (ಜೆಡಿಎಸ್), ೭ನೇವಾರ್ಡ್ ೬ನೇವಾರ್ಡ್ ಮುಫಿದ್ ಅಲಿ (ಜೆಡಿಎಸ್), ೮ನೇವಾರ್ಡ್ ಹೆಚ್.ಆರ್.ಕಲಾವತಿ (ಜೆಡಿಎಸ್), ೧೦ನೇವಾರ್ಡ್ ಎ.ಆರ್.ರವಿಕುಮಾರ (ಜೆಡಿಎಸ್), ೧೧ನೇವಾರ್ಡ್ ಸರಸ್ವತಿ (ಪಕ್ಷೇತರ), ೧೨ನೇವಾರ್ಡ್ ಕೆ.ಆರ್.ಸುಬ್ರಹ್ಮಣ್ಯ (ಜೆಡಿಎಸ್), ೧೩ನೇವಾರ್ಡ್ ಹೆಚ್.ಎಸ್.ಸ್ವಾಮಿ(ಜೆಡಿಎಸ್), ೧೪ನೇವಾರ್ಡ್ ಹೆಚ್.ಸಿ.ಬಸವರಾಜು (ಜೆಡಿಎಸ್), ೧೫ನೇವಾರ್ಡ್ ಎನ್.ಲಕ್ಷ್ಮೀ (ಜೆಡಿಎಸ್), ೧೬ನೇವಾರ್ಡ್ ತುಳಸಿ ಹೆಚ್.ಜೆ.ಕುಮಾರ (ಜೆಡಿಎಸ್), ೧೭ನೇವಾರ್ಡ್ ಹೆಚ್.ವಿ.ಪುಟ್ಟರಾಜು(ಜೆಡಿಎಸ್), ೧೮ನೇವಾರ್ಡ್ ಎ.ಶ್ರೀಧರ(ಜೆಡಿಎಸ್), ೧೯ನೇವಾರ್ಡ್ ಚೈತ್ರ ಯು.ಆರ್. (ಕಾಂಗ್ರೆಸ್), ೨೦ನೇವಾರ್ಡ್ ಕೆ.ಎಸ್. ಸುಮಿತ್ರದೇವಿ (ಕಾಂಗ್ರೆಸ್), ೨೧ನೇವಾರ್ಡ್ ಹೆಚ್.ಎನ್.ರಾಘವೇಂದ್ರ(ಕಾಂಗ್ರೆಸ್) ೨೨ನೇವಾರ್ಡ್ ಜಯಕಾಂತಮ್ಮ(ಕಾಂಗ್ರೆಸ್), ೨೩ನೇವಾರ್ಡ್ ಹೆಚ್.ಕೆ.ರಘುರಾಮ (ಜೆಡಿಎಸ್) ಅಭ್ಯರ್ಥಿಗಳು ಜಯಶೀಲರಾಗಿದ್ದಾರೆ.
ಚನ್ನರಾಯಪಟ್ಟಣ ಸುದ್ದಿ : ೧ನೇ ವಾರ್ಡ್ ತಾರಾ (ಜೆಡಿಎಸ್), ೨ನೇವಾರ್ಡ್ ಭಾರತಿರಂಗಸ್ವಾಮಿ (ಜೆಡಿಎಸ್), ೩ನೇವಾರ್ಡ್ ಬಿ.ನಾಗರಾಜ್ (ಕಾಂಗ್ರೆಸ್), ೪ನೇವಾರ್ಡ್ ಸಿ.ಜಿ.ನಟರಾಜ (ಜೆಡಿಎಸ್), ೫ನೇವಾರ್ಡ್ ಸಿ.ಕೆ.ಗೋಪಾಲಕೃಷ್ಣ (ಜೆಡಿಎಸ್), ೬ನೇವಾರ್ಡ್ ಕಲ್ಪನಾಸುರೇಶ್ (ಜೆಡಿಎಸ್), ೭ನೇವಾರ್ಡ್ ಜಿ.ಗೀತಾ (ಜೆಡಿಎಸ್), ೮ನೇವಾರ್ಡ್ ಸಿ.ಎನ್.ಶಶಿಧರ (ಜೆಡಿಎಸ್), ೯ನೇವಾರ್ಡ್ ಪರಶುರಾಮ್(ಕಾಂಗ್ರೆಸ್), ೧೦ನೇವಾರ್ಡ್ ಕೆ.ಜೆ.ಸುರೇಶ್ (ಜೆಡಿಎಸ್), ೧೧ನೇವಾರ್ಡ್ ಹೆಚ್.ಎನ್.ನವೀನ್ (ಪಕ್ಷೇತರ), ೧೨ನೇವಾರ್ಡ್ ಹೆಚ್.ವಿ.ಪ್ರವೀಣ್‌ಕುಮಾರ್ (ಜೆಡಿಎಸ್), ೧೩ನೇವಾರ್ಡ್ ಶೋಭಾ (ಕಾಂಗ್ರೆಸ್), ೧೪ನೇವಾರ್ಡ್ ನಾಗರತ್ನ (ಪಕ್ಷೇತರ), ೧೫ನೇವಾರ್ಡ್ ಮಂಜುನಾಥ್ (ಕಾಂಗ್ರೆಸ್), ೧೬ನೇವಾರ್ಡ್ ಸರವಣಕುಮಾರ್ (ಕಾಂಗ್ರೆಸ್), ೧೭ನೇವಾರ್ಡ್ ಅನ್ಸರ್‌ಪಾಷ (ಕಾಂಗ್ರೆಸ್), ೧೮ನೇವಾರ್ಡ್ ಭಾಗ್ಯಮ್ಮ (ಪಕ್ಷೇತರ), ೧೯ನೇವಾರ್ಡ್ ಮಂಜುಳ (ಜೆಡಿಎಸ್), ೨೦ನೇವಾರ್ಡ್ ಅನ್ಸರ್‌ಬೇಗ್ (ಜೆಡಿಎಸ್), ೨೧ನೇವಾರ್ಡ್ ಸಿ.ಜಿ.ಮಂಜಣ್ಣ (ಜೆಡಿಎಸ್) ೨೨ನೇವಾರ್ಡ್ ಸುಧಾ (ಕಾಂಗ್ರೆಸ್), ೨೩ನೇವಾರ್ಡ್ ಸಿ.ಎಸ್.ಪ್ರಕಾಶ್ (ಕಾಂಗ್ರೆಸ್) ಅಭ್ಯರ್ಥಿಗಳು ಜಯಶೀಲರಾಗಿದ್ದಾರೆ

ಹಾಸನ ನಗರಸಭೆ ಚುನಾವಣೆ-2013

|

ಹಾಸನ ಸುದ್ದಿ : ೦೧
ಅಂತೂ ಎಲ್ಲಾರ ಕುತೂಹಲ ಕೆರಳಿಸಿದ್ದ ಸ್ಥಳೀಯ ಸ್ಥಂಸ್ಥೆಗಳ ಚುನಾವಣೆಯು ಮುಗಿದಿದ್ದು, ಜಿಲ್ಲೆಯ ೫ ಪುರಸಭೆ, ೨ ಪಟ್ಟಣ ಪಂಚಾಯ್ತಿ ಮತ್ತು ೧ ನಗರ ಸಭೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ.

೮ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಚನ್ನರಾಯಪಟ್ಟಣ, ಹೊಳೆನರಸೀಪುರ, ಬೇಲೂರು ಹಾಗೂ ಸಕಲೇಶಪುರ ಪುರಸಭೆ ಹಾಗೂ ಹಾಸನ ನಗರಸಭೆ ಸೇರಿದಂತೆ ೫ ಸ್ಥಾನವನ್ನು ಜೆಡಿಎಸ್ ಪಾಲಾದರೆ, ಆಲೂರು ಪ.ಪಂಚಾಯ್ತಿ ಕೆಜೆಪಿ ಪಾಲಾಗಿದೆ. ಉಳಿದಂತೆ ಅರಸೀಕರೆ ಪುರಸಭೆ ತಲಾ ಕಾಂಗ್ರೆಸ್ ಹಾಗೂ ಜೆಡಿಸ್ ೧೧-೧೧ ಸ್ಥಾನಗಳನ್ನು ಹಾಗೂ ೧ ಪಕ್ಷೇತ್‌ಹಾಗೂ ಅರಕಲಗೂಡು ಪುರಸಭೆಗಳು ಅಂತಂತ್ರ ಸ್ಥಿತಿ ನಿರ್ಮಾಣ ವಾಗಿದ್ದು, ಇದೇ ರೀತಿ ಅರಕಲಗೂಡು ಪ.ಪಂ.ಯಲ್ಲಿ ಕಾಂಗ್ರೆಸ್ ೭ಸ್ಥಾನವನ್ನು ಗಳಿಸಿದರೆ, ೫ ಸ್ಥಾನವನ್ನು ಜೆಡಿಎಸ್ ಗಳಿದ್ದು, ಉಳಿದ ೩ ಸ್ಥಾನಗಳು ಪಕ್ಷೇತರರ ಪಾಲಾಗಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಇನ್ನೂ ಹಾಸನ ನಗರಸಭೆಯ ೩೫ವಾರ್ಡ್‌ಗಳಲ್ಲಿ ೧೯ ಸ್ಥಾನವನ್ನು ಜೆಡಿಎಸ್ ಪಡೆದಕೊಂಡು ಈಬಾರಿಯೂ ಅಧಿಕಾರದ ಗದ್ದುಗೆಯನ್ನು ತನ್ನದಾಗಿಸಿದಕೊಂಡಿದೆ. ಉಳಿದಂತೆ ೯ ಸ್ಥಾನವನ್ನು ಕಾಂಗ್ರೆಸ್, ೧ ಸ್ಥಾನವನ್ನು ಬಿಜೆಪಿ ಪಡೆದರೆ ಕೆಜೆಪಿಯೂ ಕೂಡಾ ಒಂದು ಸ್ಥಾನವನ್ನು ಪಡೆದು ತನ್ನ ಖಾತೆಯನ್ನು ತೆರೆದಿದ್ದು, ಉಳಿದ ೫ ವಾರ್ಡ್‌ಗಳು ಪಕ್ಷೇತರರ ಪಾಲಾಗಿದೆ. 
ಹಾಗೇ ಚನ್ನರಾಯಪಟ್ಟಣದಲ್ಲಿಯೂ ಕೂಡಾ ಜೆಡಿಎಸ್(೧೨), ಕಾಂಗ್ರೇಸ್(೮) ಪಕ್ಷೇತರ(೧) ಬಂಡಾಯ ಕಾಂಗ್ರೇಸ್(೨) ಸ್ಥಾನಗಳಿಸಿದೆ.
ಹೊಳೆನರಸೀಪುರದಲ್ಲಿ ಒಟ್ಟು ಜೆಡಿಎಸ್ (೧೬), ಕಾಂಗ್ರೆಸ್ (೫) ಪಕ್ಷೇತರ(೨) ಸ್ಥಾನಗಳನ್ನು ಪಡೆದಿವೆ. ಆದರೆ ಚುನಾವಣೆಯಲ್ಲಿ ಜೆಡಿಎಸ್ ೧೪ ಸ್ಥಾನಗಳನ್ನು ಪಡೆದಿದ್ದು, ಉಳಿದ ೨ಸ್ಥಾನಗಳು ಚುನಾವಣೆಗೂ ಮುನ್ನವೇ ಅವಿರೋಧವಾಗಿ ಆಯ್ಕೆಯಾಗಿದ್ದರು. 
ಹಾಗೂ ಸಕಲೇಶಪುರದಲ್ಲಿ ಈಬಾರಿ ೧೧ ಸ್ಥಾನವನ್ನು ಪಡೆದು ಮೊದಲ ಸ್ಥಾನದಲ್ಲಿದ್ದರೆ ೬ಸ್ಥಾನಗಳನ್ನು ಪಡೆದು ಕಾಂಗ್ರೆಸ್ ನಂತರದ ಸ್ಥಾನದಲ್ಲಿದ್ದೆ. ಜೊತೆಗೆ ಬಿಜೆಪಿ-೨, ಕೆಜೆಪಿ-೨, ಹಾಗೂ ಪಕ್ಷೇತರರರು ೨ಸ್ಥಾನವನ್ನು ಪಡೆದಿದ್ದಾರೆ. 
ಉಳಿದ ಬೇಲೂರು ಪುರಸಭೆಯಲ್ಲಿ ೧೨ಸ್ಥಾನವನ್ನು ಜೆಡಿಎಸ್, ೯ಸ್ಥಾನವನ್ನು ಕಾಂಗ್ರೆಸ್ ಹಾಗೂ ೨ಸ್ಥಾನಗಳು ಪಕ್ಷೇತರರ ಪಾಲಾಗಿದ್ದು,  ಜೆಡಿಎಸ್ ಮತ್ತೊಮ್ಮೆ ಪುರಸಭೆಯ ಅಧಿಕಾರದ ಗದ್ದುಗೆಯನ್ನು ತನ್ನದಾಗಿಸಿದಕೊಂಡಿದ್ದು, ಜೆಡಿಎಸ್ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಹಾಸನ ಜಿಲ್ಲೆ ಮತ್ತೆ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದ ಗದ್ದುಗೆಯನ್ನೇರುವುದರ ಮೂಲಕ ಮತ್ತೆ ತನ್ನ ಪಾರುಪತ್ಯವನ್ನು ಮೆರೆಯಲಿದೆ.  

ಹಾಸನ ಸುದ್ದಿ : ೦೨
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಯಗಳಿದ ಅಭ್ಯರ್ಥಿಗಳ ವಿವರಗಳು ಇಂತಿದೆ. 
ಹಾಸಸನ ನಗರಸಭೆ: 
೧ನೇ ವಾರ್ಡ್ ಸಿ.ಎಂ. ಭಾನು ಪ್ರಕಾಶ್ (ಜೆಡಿಎಸ್), ೨ನೇ ವಾರ್ಡ್-ಶೋಭಾ ಗಣೇಶ್(ಕಾಂಗ್ರೆಸ್), ೩ನೇವಾರ್ಡ್-ಸುರೇಶ್‌ಕುಮಾರ್(ಪಕ್ಷೇತರ ಅಭ್ಯರ್ಥಿ), ೪ನೇ ವಾರ್ಡ್-ಲೀಲಾವತಿ ವಾಸು (ಜೆ.ಡಿ.ಸ್), ೫ನೇವಾರ್ಡ್-ಆರ್.ಅಂಬಿಕಾ ರವಿಶಂಕರ್ (ಜೆಡಿಎಸ್),೬ನೇವಾರ್ಡ್-ಪ್ರಸನ್ನಕೃಷ್ಣಮೂರ್ತಿ(ಜೆ.ಡಿ.ಸ್),೭ನೇವಾರ್ಡ್-ಎಂ.ಎ.ಇಂದುಮತಿ(ಕಾಂಗ್ರೆಸ್),೮ನೇವಾರ್ಡ್-ನೇತ್ರಾವತಿ ಗಿರೀಶ್ (ಜೆಡಿಎಸ್), ೯ನೇವಾರ್ಡ್-ಡಾ: ಹೆಚ್.ಎಸ್.ಅನಿಲ್ (ಜೆಡಿಎಸ್), ೧೦ನೇವಾರ್ಡ್-ಹೆಚ್.ಎಂ.ಯಶವಂತ್(ಕಾಂಗ್ರೆಸ್), ೧೧ನೇವಾರ್ಡ್-ಕುಮಾರ್(ಕಾಂಗ್ರೆಸ್), ೧೨ನೇವಾರ್ಡ್ ಹೆಚ್.ಎಸ್. ಪ್ರಸನ್ನ ಕುಮಾರ್(ಪಕ್ಷೇತರ), ೧೩ನೇವಾರ್ಡ್-ಪಾರ್ವತಿ(ಪಕ್ಷೇತರ), ೧೪ನೇವಾರ್ಡ್- ಬಿ.ಎಸ್. ಉಷಾ (ಕೆ.ಜೆ.ಪಿ.), ೧೫ನೇವಾರ್ಡ್- ಮಹೇಶ್ ಕೆ.ಆರ್. (ಜೆಡಿಎಸ್), ೧೬ನೇವಾರ್ಡ್- ಹೆಚ್.ಎಲ್. ವಿಜಯಕುಮಾರ್ (ಜೆಡಿಎಸ್), ೧೭ನೇವಾರ್ಡ್- ಅಜಾಜ್ ಪಾಷಾ(ಜೆ.ಡಿ.ಸ್), ೧೮ನೇವಾರ್ಡ್-ಆರೀಫ್ ಖಾನ್(ಕಾಂಗ್ರೆಸ್), ೧೯ನೇವಾರ್ಡ್-ಜಿ.ಆರ್.ರಮೇಶ್(ಬಿ.ಜೆ.ಪಿ.), ೨೦ನೇವಾರ್ಡ್-ಅಮೀರ್ ಜಾನ್(ಪಕ್ಷೇತರ), ೨೧ನೇವಾರ್ಡ್-ಇಶ್ರಾದ್ ಪಾಷಾ (ಜೆಡಿಎಸ್), ೨೨ನೇವಾರ್ಡ್- ಅಬ್ದುಲ್ ಕಯುಮ್ (ಕಾಂಗ್ರೆಸ್), ೨೩ನೇವಾರ್ಡ್-ಶಾರದಮ್ಮ (ಜೆಡಿಎಸ್), ೨೪ನೇವಾರ್ಡ್- ಹೆಚ್.ಆರ್.ಪ್ರಸನ್ನ ಕುಮಾರ್(ಅಪ್ಪು), (ಜೆಡಿಎಸ್), ೨೫ನೇವಾರ್ಡ್- ಹೆಚ್.ಬಿ. ಗೋಪಾಲ (ಜೆಡಿಎಸ್), ೨೬ನೇವಾರ್ಡ್- ಟಿ. ನಿರ್ಮಲ ಯೋಗೀಶ್ (ಜೆಡಿಎಸ್), ೨೭ನೇವಾರ್ಡ್-ಸೀತಮ್ಮ (ಜೆಡಿಎಸ್), ೨೮ನೇವಾರ್ಡ್-ಸಯ್ಯದ್ ತಲಹ (ಕಾಂಗ್ರೆಸ್), ೨೯ನೇವಾರ್ಡ್-ಎಂ.ಕೆ. ರಾಜೇಶ್(ಬಾಬಿ), (ಕಾಂಗ್ರೆಸ್), ೩೦ನೇವಾರ್ಡ್-ಸಿ. ಶುಭ (ಜೆಡಿಎಸ್), ೩೧ನೇವಾರ್ಡ್- ಹೆಚ್.ಹೆಚ್. ಶ್ರೀವಿದ್ಯಾ, (ಜೆಡಿಎಸ್), ೩೨ನೇವಾರ್ಡ್- ಹೆಚ್.ಎಸ್. ಶಂಕರ್ (ಜೆಡಿಎಸ್), ೩೩ನೇವಾರ್ಡ್-ಸಮೀರ್ ಮೊಹಿದ್ದೀನ್ (ಪಕ್ಷೇತರ), ೩೪ನೇವಾರ್ಡ್-ಸಿ.ಟಿ.ಕುಮಾರ(ಕಾಂಗ್ರೆಸ್), ೩೫ನೇವಾರ್ಡ್- ಹೇಮಾವತಿ (ಜೆಡಿಎಸ್) ಜಯಗಳಿಸಿದ್ದಾರೆ. 

ನೀಚ ಪತ್ರಕರ್ತರು ಹೆಚ್ಚಾಗುತ್ತಲೇ ಇದ್ದಾರೆ

| 09 March 2013




ಇಂದಿಗೆ ನವೀನ್ ಸೂರಿಂಜೆ ಜೈಲಿಗೆ ಹೋಗಿ ನಾಲ್ಕು ತಿಂಗಳಾಯಿತು. ಒಬ್ಬ ಅಯೋಗ್ಯ ಮತ್ತು ನ್ಯಾಯಪ್ರಜ್ಞೆ ಇಲ್ಲದ ಮುಖ್ಯಮಂತ್ರಿಯ ಕಾರಣದಿಂದಾಗಿ ಸೂರಿಂಜೆ ಇನ್ನೂ ಬಿಡುಗಡೆ ಆಗಿಲ್ಲ. ಅಮೇಧ್ಯದಲ್ಲಿ ಅಧಿಕಾರ ಮತ್ತು ದುಡ್ಡು ಸಿಕ್ಕರೂ ಅದನ್ನು ನಾಲಿಗೆಯಲ್ಲಿ ನೆಕ್ಕಿ ಬಾಚಿಕೊಳ್ಳುವವರೆಲ್ಲ ನಮ್ಮ ರಾಜಕೀಯ ನಾಯಕರಾಗಿರುವಾಗ ಬಹುಶಃ ಇದಕ್ಕಿಂತ ಬೇರೆಯದನ್ನು ನಿರೀಕ್ಷಿಸುವುದು ಅಸಮಂಜಸವೇನೊ.
ಇದೇ ಸಮಯದಲ್ಲಿ ರಾಜ್ಯದ ಪತ್ರಕರ್ತರ ಸಂಘಟನೆಗಳೂ ಮಾಡಬೇಕಾದಷ್ಟು ಮಾಡಲೇ ಇಲ್ಲ. naveen-soorinjeನಾಯಕತ್ವ ತೆಗೆದುಕೊಳ್ಳುವುದಕ್ಕೆ ಸಿದ್ದರಿಲ್ಲದವರೇ ಅಲ್ಲಿ ತುಂಬಿಕೊಂಡಿರುವಾಗ ಇನ್ನೇನನ್ನು ನಿರೀಕ್ಷಿಸಬಹುದು? ಹಾಗೆಂದು ಇವರ್ಯಾರಿಗೂ ಅಧಿಕಾರ ಇಲ್ಲವೆಂದಾಗಲಿ, ಸಂಪರ್ಕಜಾಲ ಇಲ್ಲವೆಂದಾಗಲಿ ಅಲ್ಲ. ಈ ಸಂಘಟನೆಗಳ ಅಧಿಕಾರ ಸ್ಥಾನದಲ್ಲಿರುವ ಬಹುತೇಕರು ಬಹಳ ಶಕ್ತಿಶಾಲಿಗಳು, ನೇರವಾಗಿ ಒಬ್ಬ ಮಂತ್ರಿ ಅಥವ ಮುಖ್ಯಮಂತ್ರಿಯ ಬಳಿಗೆ ಹೋಗಿ ತಮಗೆ ಬೇಕಾದ ಕೆಲಸ ಮಾಡಿಸಿಕೊಂಡು ಬರುವವರು. ಆದರೆ, ತಮ್ಮವನೇ ಆದ ಒಬ್ಬ ಪತ್ರಕರ್ತ ನಿರಪರಾಧಿಯಾಗಿದ್ದರೂ ಜೈಲಿನಲ್ಲಿ ಕೊಳೆಯುತ್ತಿರುವಾಗ, ಆತನ ಮೇಲಿನ ಸುಳ್ಳು ಆರೋಪಗಳನ್ನು ಕ್ಯಾಬಿನೆಟ್ ಕೈಬಿಡುವ ನಿರ್ಧಾರ ಮಾಡಿದ ಮೇಲೂ ಮುಖ್ಯಮಂತ್ರಿ ಅದಕ್ಕೆ ನಾಮಕಾವಸ್ಥೆ ಸಹಿ ಮಾಡುವುದನ್ನು ಮಾಡದೇ ಇರುವಾಗ ಈ ಸಂಘಟನೆಗಳಿಗೆ ಮುಖ್ಯಮಂತ್ರಿಯ ಮೇಲೆ ಒತ್ತಡ ತರಲಾಗುವುದಿಲ್ಲ ಎಂದರೆ, ಅದು ಅವರಿಗೆ ಬೇಕಾಗಿಲ್ಲ ಎಂದೇ ಅರ್ಥ. ನಮ್ಮ ಸಮಾಜದಲ್ಲಿ ರಾಜಕೀಯ ಕ್ಷೇತ್ರ ಮಾತ್ರವೇ ಕೆಟ್ಟಿಲ್ಲ. ಸಮಾಜದ ಪ್ರತಿಯೊಂದು ವಿಭಾಗದಲ್ಲೂ ಅರ್ಬುದ ರೋಗ ಒಳಗಿನಿಂದಲೇ ಕೊಲ್ಲುತ್ತಿದೆ.
ಹಾಸನದ “ದಿ ಹಿಂದೂ” ಪತ್ರಿಕೆಯ ವರದಿಗಾರರಾದ ಸತೀಶ ಜಿ.ಟಿ. ನನಗೆ ವೈಯಕ್ತಿವಾಗಿಯೂ ಪರಿಚಿತರು. ಸಾಮಾಜಿಕ ಕಳಕಳಿಯುಳ್ಳ ಪ್ರಾಮಾಣಿಕ ಮತ್ತು ಆದರ್ಶವಾದಿ ಪತ್ರಕರ್ತ. ಈ ಹಿಂದೆ ಅವರು ಡೆಕ್ಕನ್ ಹೆರಾಲ್ಡ್‌ನಲ್ಲಿದ್ದಾಗ ಬಿಡಿಎದ ಅಕ್ರಮ ಜಿ-ಕೆಟಗರಿ ಸೈಟುಗಳ ಬಗ್ಗೆ, ಮನೆ-ಸೈಟು ಇರುವ ಶಾಸಕ-ಸಂಸದರೆಲ್ಲ ನಮಗೆ ಬೆಂಗಳೂರಿನಲ್ಲಿ ಮನೆ-ಸೈಟಿಗೆ ಗತಿ ಇಲ್ಲ ಎಂದು ಅಕ್ರಮ ಅಫಿಡವಿಟ್ ಸಲ್ಲಿಸಿ ನಾಲ್ಕೈದು ಕೋಟಿ ರೂಪಾಯಿ ಬೆಲೆಯ ಸೈಟುಗಳನ್ನು ಏಳೆಂಟು ಲಕ್ಷಗಳಿಗೆ ಹೊಡೆದುಕೊಂಡಿದ್ದರ ಬಗ್ಗೆ ವಿಸ್ತೃತವಾಗಿ ವರದಿ ಮಾಡಿದ್ದರು. ನಾಲ್ಕು ವರ್ಷದ ಹಿಂದೆ ಉತ್ತರ ಕರ್ನಾಟಕದಲ್ಲಿ ಅಸಾಮಾನ್ಯವಾದ ಮಳೆ ಬಂದು ಪ್ರವಾಹ ಉಕ್ಕೇರಿ ಜನರ ಬದುಕುಗಳು ನೆರೆಯಲ್ಲಿ ಕೊಚ್ಚಿ ಹೋದಾಗ ಅದರ ಬಗ್ಗೆ ವಾರಗಟ್ಟಲೆ ಪ್ರವಾಸ ಮಾಡಿ ವರದಿ ಮಾಡಿದ್ದರು. ಈಗ ಸುಮಾರು ಎರಡು ವರ್ಷಗಳಿಂದ ಈ ಪ್ರತಿಭಾವಂತ ಪತ್ರಕರ್ತ ಹಾಸನದಲ್ಲಿದ್ದಾರೆ. ಇಂತಹ ಒಬ್ಬ ಪತ್ರಕರ್ತ ತಮ್ಮ ನಡುವೆ ಇರುವುದೇ ಒಂದು ಹೆಮ್ಮೆ ಎಂದು ಭಾವಿಸದ ಅಲ್ಲಿನ ಪತ್ರಕರ್ತರ ಸಂಘ ಮತ್ತು ಅದರ ಅಧ್ಯಕ್ಷರು ಸತೀಶ್ ತಮ್ಮ ವಿರುದ್ದ ಸಕಾರಣವಾಗಿ ನೀಡಿದ ದೂರಿನ ಕಾರಣಕ್ಕೆ ವೈಯಕ್ತಿಕ ದ್ವೇಷದಿಂದ ಸಂಘವನ್ನು ದುರುಪಯೋಗಪಡಿಸಿಕೊಂಡು ನೋಟಿಸ್ ಕೊಡುತ್ತಾರೆ. ಸತ್ಯ ಹೇಳಿದ್ದಕ್ಕೆ ಬೇಷರತ್ತಾಗಿ ಕ್ಷಮೆ ಕೇಳಬೇಕು ಎನ್ನುತ್ತಾರೆ. Satish_GTಒಬ್ಬ ಪತ್ರಕರ್ತನಿಗೆ ಪತ್ರಿಕಾಗೋಷ್ಟಿಗೆ ಬರಬೇಡಿ ಎನ್ನುವ ಅಹಂಕಾರ ಮತ್ತು ದರ್ಪ ತೋರಿಸುತ್ತಾರೆ. ಬಹಿಷ್ಕಾರದ ಮಾತನ್ನಾಡುತ್ತಾರೆ. ಇವರೆಂತಹ ಪತ್ರಕರ್ತರು? ಈ ಮನೋಭಾವವೊಂದೇ ಸಾಕು ಈ ಅಧ್ಯಕ್ಷೆ ಪ್ಯಾಕೇಜ್-ನ್ಯೂಸ್, ಪೇಯ್ಡ್ ನ್ಯೂಸ್‌ನಲ್ಲಿ ಮುಂದಿದ್ದಾರೆ ಎಂದು ಭಾವಿಸಿಕೊಳ್ಳಲು. ಅಷ್ಟೇ ಅಲ್ಲ, ಇವರಿಗೆ ಕನಿಷ್ಟ ಸಾಮಾನ್ಯ ಜ್ಞಾನವೂ ಇದ್ದಂತಿಲ್ಲ. ತಪ್ಪು ಮಾಡಿ ಸಿಕ್ಕಿಹಾಕಿಕೊಂಡಾಗ ಅದನ್ನು ಮತ್ತಷ್ಟು ಬಯಲುಗೊಳಿಸಿಕೊಳ್ಳದೇ ಪಶ್ಚಾತ್ತಾಪದ ಮೂಲಕವೇ ಸರಿಪಡಿಸಿಕೊಳ್ಳೋಣ ಎನ್ನುವ ಜ್ಞಾನವಿಲ್ಲದ ಮತಿಹೀನರೆಲ್ಲ ಸಂಘಗಳ ಮುಖ್ಯಸ್ಥರಾಗಿಬಿಡುತ್ತಾರೆ, ಪದಾಧಿಕಾರಿಗಳಾಗಿಬಿಡುತ್ತಾರೆ.
ಇನ್ನು ಈ ಹಾಸನದ ಪತ್ರಕರ್ತರ ಸಂಘದ ಉಳಿದ ಪದಾಧಿಕಾರಿಗಳಾದರೂ ಎಂತಹವರು? ಅವರೂ ತಮ್ಮ ಅಧ್ಯಕ್ಷೆಯ ಅಭಿಪ್ರಾಯವನ್ನು ಅನುಮೋದಿಸುವವರೇ ಆದರೆ, ಅವರೂ ನಾಚಿಕೆಪಟ್ಟುಕೊಳ್ಳಬೇಕು. ಹಾಗೆಯೇ, ಆ ಸಂಘದ ಸದಸ್ಯರು ಕಟು ಪ್ರತಿಭಟನೆಯ ಮೂಲಕ ಸಂಘದ ಅಯೋಗ್ಯ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಂದ ರಾಜೀನಾಮೆ ಕೊಡಿಸಿ ತಮ್ಮ ಪ್ರಾಮಾಣಿಕತೆ, ವೃತ್ತಿಪರತೆ, ನ್ಯಾಯಪರತೆಯನ್ನು ನಿರೂಪಿಸಬೇಕು. ಆ ಜವಾಬ್ದಾರಿ ಅಲ್ಲಿಯ ಸಂಘದ ಸದಸ್ಯರ ಮೇಲೆಯೇ ಇದೆ.
ಇನ್ನು, ವಿಷುಯಲ್ ಮೀಡಿಯಾದ ಪತ್ರಕರ್ತರ ಬಗ್ಗೆ. ನಮ್ಮ ಭಾಷೆಯ ಅನೇಕ ಟಿವಿ ನಿರೂಪಕರು ಅಹಂಕಾರಿಗಳು, ಅಜ್ಞಾನಿಗಳು, ಭ್ರಷ್ಟರು. ಇದು ಬಹುತೇಕರಿಗೆ ಗೊತ್ತಿರುವ ವಿಚಾರವೇ. ಆದರೆ ಇದಿಷ್ಟೇ ಅಲ್ಲ. ಇವರಲ್ಲಿ ಕೆಲವರು ಕೊಲೆ ಮಾಡಿಸಲು ಸುಪಾರಿ ಕೊಡುವಂತಹ ಕ್ರಿಮಿನಲ್‌ಗಳೂ ಇದ್ದಾರೆ. ಈ ವಿಚಾರ ನೆನ್ನೆಯ “ದಿ ಹಿಂದೂ” ಪತ್ರಿಕೆಯಲ್ಲಿ ಬಂದಿದೆ. ಅವರು ಆ ವ್ಯಕ್ತಿಯ ಹೆಸರು ಮತ್ತು ಆತ ಕೆಲಸ ಮಾಡುತ್ತಿದ್ದ ಚಾನಲ್‌ನ ಬಗ್ಗೆ ಹೇಳಿಲ್ಲ. ಆದರೆ ಈ ವಿಷಯ ಬಹುಶಃ ಕನ್ನಡದ ಯಾವುದೇ ಪತ್ರಿಕೆಯಲ್ಲಿ ಬಂದ ಹಾಗೆ ಕಾಣುವುದಿಲ್ಲ. ನಮ್ಮ ಕನ್ನಡ ಪತ್ರಿಕೆಗಳಿಗೆ ಏಕಿಷ್ಟು ಭಯವೋ ಅರ್ಥವಾಗುತ್ತಿಲ್ಲ.
ನನಗೆ ಗೊತ್ತಾದ ಹಾಗೆ ಆ ಕ್ರಿಮಿನಲ್ ಪತ್ರಕರ್ತನ ಕ್ರೌರ್ಯದ ಕೈಗಳು ಬಹಳ ಉದ್ದವಿವೆ. ಆತನಿಗೆ ಮಾಜಿ ಮುಖ್ಯಮಂತ್ರಿ, ಹಾಲಿ ಮಂತ್ರಿಗಳೆಲ್ಲ ಆಪ್ತರಂತೆ. ಈತನ ಅಪ್ಪನಿಗೆ ಈ ಪತ್ರಕರ್ತ ತಮ್ಮ ಚೇಲಾ ಎಂಬ ಕಾರಣಕ್ಕೆ, ತನ್ನ ಜಾತಿಯವ ಎನ್ನುವ ಕಾರಣಕ್ಕೆ ಮಾಜಿ hindu_tv_anchor_060313ಮುಖ್ಯಮಂತ್ರಿ ಜಿ-ಕೆಟಗರಿ ಸೈಟು ಕೊಟ್ಟು ಪುರಸ್ಕರಿಸಿದ್ದಾರಂತೆ. ಇಲ್ಲೆಲ್ಲ ನಾನು “ಅಂತೆ” ಎಂದು ಬರೆಯುತ್ತಿದ್ದರೂ ಇವೆಲ್ಲ ಅಂತೆಕಂತೆಗಳೇನೂ ಅಲ್ಲ. ಇಂತಹ ಕ್ರಿಮಿನಲ್ ಪತ್ರಕರ್ತ ನಮ್ಮ ರಾಜ್ಯದ ನಂಬರ್ ಒನ್ ಚಾನಲ್‌ನಲ್ಲಿ ಮುಖ್ಯ ನಿರೂಪಕನಾಗಿ ಕಾಣಿಸಿಕೊಳ್ಳುತ್ತಾನೆ ಎಂದರೆ ಅದು ನಮ್ಮ ಮಾಧ್ಯಮಲೋಕದ ಅಧೋಗತಿಗೆ ಸಾಕ್ಷಿ. ಈತ ಇಷ್ಟರಲ್ಲೇ ಸೆರೆ ಆಗಬಹುದು ಎನ್ನುತ್ತವೆ ಮೂಲಗಳು. ಆದರೆ ಆತ ಬಚಾವಾಗಲೂಬಹುದು, ಅಷ್ಟು ಪ್ರಭಾವಶಾಲಿ ಎನ್ನುತ್ತಾರೆ ನನಗೆ ತಿಳಿದವರು.
ನಮ್ಮ ರಾಜಕೀಯ ಕ್ಷೇತ್ರದ ಬಹುಶಃ ಇನ್ನೊಂದು ಐದು-ಹತ್ತು ವರ್ಷಗಳಲ್ಲಿ ಶುದ್ಧವಾಗಬಹುದು ಎನ್ನುವ ನಂಬಿಕೆ ನನಗಿದೆ. ಆದರೆ, ರಾಜ್ಯದ ಮಾಧ್ಯಮಲೋಕ ಶುದ್ದವಾಗುತ್ತದೆ ಎನ್ನುವ ನಂಬಿಕೆ ಇಲ್ಲ. ಬಹುಶಃ ಇಲ್ಲಿಯೇ ವರ್ತಮಾನ.ಕಾಮ್‌ನ ಹೆಚ್ಚುವರಿ ಜವಾಬ್ದಾರಿ ಇದೆ ಎನ್ನಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಮಾಧ್ಯಮ ಲೋಕದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ನಮ್ಮಷ್ಟು ಕನ್ನಡಿ ಹಿಡಿದವರು ಯಾರೂ ಇರಲಿಕ್ಕಿಲ್ಲ. ಪ್ರಾಮಾಣಿಕ ಪತ್ರಕರ್ತರು ಸಾಂಘಿಕವಾಗಿ ಈ ಕೆಲಸಕ್ಕೆ ಕೈಜೋಡಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ. ನೀಚ ಪತ್ರಕರ್ತರನ್ನು ವ್ಯವಸ್ಥೆಯಿಂದ ನಿವಾರಿಸಿಕೊಳ್ಳುವ ಅನಿವಾರ್ಯತೆ ಈ ಸಮಾಜಕ್ಕೆ ಸೃಷ್ಟಿಯಾಗಿದೆ.

ಲೇಖಕಿ ರೂಪಾ ಹಾಸನ ಅವರು ಜೈನ ಸಮಾಜದ ಕ್ಷಮೆ ಕೇಳಬೇಕಂತೆ!

|

ಲೇಖಕಿ ರೂಪಾ ಹಾಸನ ಅವರು ಜೈನ ಸಮಾಜದ ಕ್ಷಮೆ ಕೇಳಬೇಕಂತೆ!

roopa-hassan
ಹಾಸನದ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದ ಆವರಣದಲ್ಲಿ ದಿನಾಂಕ ಫೆ.24 ರಂದು ಜಾನಪದ ಪರಿಷತ್ತು “ಜಾನಪದ ಆಹಾರ ಮೇಳ” ಏರ್ಪಡಿಸಿತ್ತು. ಮೇಳದ ಪ್ರಯುಕ್ತ ಜೋಳದ ರೊಟ್ಟಿ, ಹೋಳಿಗೆ, ವಿವಿಧ ಕಾಳಿನ ಸಾರು, ಚಿಕನ್, ಮಟನ್, ಹಂದಿ ಮಾಂಸದ ವಿವಿಧ ಖಾದ್ಯಗಳು ಪ್ರದರ್ಶನದಲ್ಲಿದ್ದವು. ಕಾರ್ಯಕ್ರಮದಲ್ಲಿ ಭಾಗವಹಿಸಿದವರು ತಮ್ಮ ಇಚ್ಚೆಗನುಗುಣವಾಗಿ ಆಹಾರ ಪದಾರ್ಥ ಸೇವಿಸಿದರು, ಕೊಂಡು ಹೋದರು.
ಸದ್ಯ ಆಹಾರ ಮೇಳದ ಹಿನ್ನೆಲೆಯಲ್ಲಿ ಹಾಸನದಲ್ಲಿ ವಿವಾದ ಎದ್ದಿದೆ. ಕವಿ, ಲೇಖಕಿ ಹಾಗೂ ಸಮಾನ ಶಿಕ್ಷಣಕ್ಕಾಗಿ, ಶೋಷಣೆ ಮುಕ್ತ ಸಮಾಜಕ್ಕಾಗಿ ನಡೆಯುವ ಹೋರಾಟಗಳಲ್ಲಿ ಭಾಗಿಯಾಗಿರುವ ರೂಪಾ ಹಾಸನ ಅವರು ಜೈನ ಸಮಾಜದ ಮುಖಂಡರಿಂದ ವಿರೋಧ, ಕ್ಷಮಾಪಣೆಗೆ ಆಗ್ರಹಗಳನ್ನು ಎದುರಿಸಬೇಕಾಗಿದೆ.
ಈ ಎಲ್ಲಾ ಬೆಳವಣಿಗೆಗಳಿಗೆ ಒಂದಿಷ್ಟು ಹಿನ್ನೆಲೆ ಇಲ್ಲಿದೆ. ಆಹಾರ ಮೇಳದ ಕಾರ್ಯಕ್ರಮದ ದಿನವೇ ಹಾಸನದ ಪತ್ರಿಕೆ ‘ಜನಮಿತ್ರ’ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಹಂದಿಮಾಂಸ ಪದಾರ್ಥಗಳ ವ್ಯವಸ್ಥೆ ಮಾಡುವ ಕ್ರಮವನ್ನು ಪ್ರಶ್ನಿಸಿ ಒಂದು ಸುದ್ದಿಯನ್ನು ಪ್ರಮುಖವಾಗಿ ಪ್ರಕಟಿಸಿತ್ತು. ಸುದ್ದಿ ಬರೆದ ಪತ್ರಿಕೆಯ ಮುಖ್ಯ ಸಂಪಾದಕ ಕೆ.ಪಿ.ಎಸ್. ಪ್ರಮೋದ್, ಪರಿಷತ್ತಿನ ಆವರಣದಲ್ಲಿ ಹಂದಿಮಾಂಸ ಸೇವನೆ, ಮಾರಾಟವನ್ನು ಟೀಕಿಸಿದ್ದರು. ನಂತರ ಅನೇಕರು ಪತ್ರಿಕೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ವಾದದ ಸರಣಿಯಲ್ಲಿ ಕೆಲ ಪ್ರಜ್ಞಾವಂತರು ಜಾನಪದ ಆಹಾರ ಮೇಲ್ವರ್ಗದವರ ಖಾದ್ಯಗಳಿಗಷ್ಟೇ ಸೀಮಿತವಾದದ್ದು ಸರಿಯಲ್ಲ ಎಂದರು. ಜಾನಪದ ಪರಿಷತ್ತು ದನದ ಮಾಂಸವನ್ನು ‘ಆಹಾರ’ ಎಂದು ಏಕೆ ಗ್ರಹಿಸಲಿಲ್ಲ ಎಂದು ಸರಿಯಾಗಿಯೇ ಪ್ರಶ್ನೆ ಮಾಡಿದ್ದರು.
ಜಿಲ್ಲಾ ಜಾನಪದ ಪರಿಷತ್ತಿನ ನೂತನ ಅಧ್ಯಕ್ಷ ಡಾ.ಹಂಪನಹಳ್ಳಿ ತಿಮ್ಮೇಗೌಡರು ಇನ್ನೊಂದು ಪ್ರಮುಖ ದಿನಪತ್ರಿಕೆ ‘ಜನತಾ ಮಾಧ್ಯಮ’ದಲ್ಲಿ ಲೇಖನವೊಂದನ್ನು ಬರೆದು ಆಹಾರ ಮೇಳದಲ್ಲಿ ಮಾಂಸಾಹಾರದ ಪ್ರಸ್ತುತತೆಯನ್ನು ಪ್ರಶ್ನಿಸಿದವರನ್ನು ಖಾರವಾಗಿಯೇ ಟೀಕಿಸಿದರು. ‘ಮಾಂಸಾಹಾರದ ವ್ಯವಸ್ಥೆ ಮಾಡಿದ್ದು ತಪ್ಪಲ್ಲ, ಸಾಹಿತ್ಯ ಪರಿಷತ್ತೇನು ಶಂಕರ ಮಠ ಅಲ್ಲ’ ಎಂದು ಉತ್ತರಿಸಿದರು. ಮುಂದಿನ ಆಹಾರ ಮೇಳಗಳಲ್ಲಿ ದನದ ಮಾಂಸವನ್ನೂ ಸೇರಿಸುವ ಮಾತುಗಳನ್ನಾಡಿದರು.
ವಿಜಯವಾಣಿ ದಿನಪತ್ರಿಕೆಯ ಹಾಸನ ವರದಿಗಾರರು ತಮ್ಮ ವಾರದ ಅಂಕಣ ‘ಲೌಡ್ ಸ್ಪೀಕರ್’ ಗೆ ಚರ್ಚಾ ವಿಶೇಷವಾಗಿ ಇದೇ ವಿವಾದವನ್ನು ಆಯ್ದುಕೊಂಡು ದಿನಾಂಕ ಮಾ.5 ರಂದು ಕೆಲವರ ಅಭಿಪ್ರಾಯ ಪ್ರಕಟಿಸಿದರು. ಹೀಗೆ ಪತ್ರಿಕೆಯ ಕೋರಿಕೆ ಮೇರೆಗೆ ಪ್ರತಿಕ್ರಿಯಿಸಿದವರಲ್ಲಿ ರೂಪಾ ಹಾಸನ ಕೂಡಾ ಒಬ್ಬರು. ಅವರ ಅಭಿಪ್ರಾಯ ಹೀಗಿತ್ತು -”ಆಹಾರದಲ್ಲಿ ಅದು ಪವಿತ್ರ, ಇದು ಅಪವಿತ್ರ ಎನ್ನುವ ಭಾವನೆ ಸರಿಯಲ್ಲ. ಆಹಾರಕ್ಕೆ ಯಾವ ದೋಷವೂ ಇಲ್ಲ. ಸಾಹಿತ್ಯ ಪರಿಷತ್ ಭವನದಲ್ಲಿ ಮಾಂಸಾಹಾರ 
reaction
ಮಾರಾಟ ಮಾಡಿದ್ದರಲ್ಲಿ ನನಗೆ ಯಾವ ತಪ್ಪೂ ಕಾಣಿಸುತ್ತಿಲ್ಲ.” ಅಭಿಪ್ರಾಯದ ಕೊನೆಯಲ್ಲಿ ರೂಪಾ ಹಾಸನ ಅವರನ್ನು ‘ಲೇಖಕಿ’ ಎಂದು ಗುರುತಿಸಲಾಗಿತ್ತು.

ತಲೆ ಸರಿಯಿರುವ, ಸಮಚಿತ್ತದಿಂದ ಎಲ್ಲಾ ತೆರನ ಅಭಿಪ್ರಾಯಗಳನ್ನು ಸ್ವೀಕರಿಸುವ ಮನಸ್ಥಿತಿಯಿರುವ ಯಾರಿಗೇ ಆಗಲಿ, ರೂಪಾ ಹಾಸನ ಅವರ ಮಾತುಗಳಲ್ಲಿ ಯಾವ ತಪ್ಪೂ ಕಾಣುವುದಿಲ್ಲ, ವಿವಾದವನ್ನಾಗಿ ಲಂಬಿಸಬಲ್ಲ ಯಾವ ಅಂಶವೂ ಸಿಗುವುದಿಲ್ಲ. ಆದರೆ ‘ಜನಮಿತ್ರ’ ಪತ್ರಿಕೆಗೆ ಅವರ ಹೇಳಿಕೆ ‘ಜೈನ ಧರ್ಮದ ಅವಹೇಳನವಾಗಿ’ ಕಂಡಿತ್ತು.
ರೂಪಾ ಹಾಸನ ಅವರ ಪರಿಚಯ ಇರುವ ಅನೇಕರಿಗೆ ಅವರು ಜೈನ ಧರ್ಮದಲ್ಲಿ ಹುಟ್ಟಿದವರು ಎಂದು ಗೊತ್ತಿರಲಿಕ್ಕಿಲ್ಲ. ವಿಜಯವಾಣಿ ಪತ್ರಿಕೆ ಸಿಬ್ಬಂದಿ ಕೂಡಾ ಅವರನ್ನು ಜೈನ ಧರ್ಮದವರು ಎಂಬ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ಕೇಳಿಲ್ಲ. ಅವರು ಲೇಖಕಿ ಎಂಬ ಕಾರಣಕ್ಕೆ ಅಭಿಪ್ರಾಯ ಕೇಳಿದ್ದಾರೆ.
“ಜನಮಿತ್ರ” ಪತ್ರಿಕೆ ತನ್ನ ಮಾ.6 ರ ಸಂಚಿಕೆಯಲ್ಲಿ ‘ಜೈನಧರ್ಮ ಮಾಂಸಾಹಾರವನ್ನು ಪ್ರಚೋದಿಸುತ್ತದೆಯೇ?’ ಎಂಬ ತಲೆಬರಹದಡಿಯಲ್ಲಿ ರೂಪಾ ಹಾಸನ ಅವರು ಮತ್ತೊಂದು ಪತ್ರಿಕೆಗೆ ನೀಡಿದ ಅಭಿಪ್ರಾಯವನ್ನು ಟೀಕಿಸುವ ಲೇಖನವನ್ನು ಪ್ರಕಟಿಸಿತು. ಅದನ್ನು ಬರೆದವರೂ ಪತ್ರಿಕೆಯ ಮುಖ್ಯ ಸಂಪಾದಕ ಪ್ರಮೋದ್ ಅವರೆ.
ಲೇಖನದ ಕೆಲ ವಾಕ್ಯಗಳಂತೂ ಅದರ ಹಿಂದೆ ಯಾವುದೋ ದುರುದ್ದೇಶ ಇದೆ ಎಂಬುದನ್ನು ಒತ್ತಿ ಹೇಳುತ್ತಿದ್ದವು. ಅಹಿಂಸೆ ತತ್ವವನ್ನು ತಲತಲಾಂತರದಿಂದ ಪ್ರತಿಪಾದಿಸಿಕೊಂಡು ಬಂದಂತಹ ಜೈನ ಸಮುದಾಯ ಮಾಂಸಾಹಾರವನ್ನು ಪ್ರಚೋದಿಸುತ್ತಾರೆಯೇ ಎಂದು ಪ್ರಶ್ನಿಸಿದರೆ ಖಂಡಿತ ಇಲ್ಲ ಎಂದು ಹೇಳಿಬಿಡಬಹುದು. ಆದರೆ ಅದೇ ಜೈನ ಸಮುದಾಯಕ್ಕೆ ಸೇರಿದ ಲೇಖಕಿ ಪ್ರಖ್ಯಾತ ಸಾಹಿತಿ ರೂಪಾ ಹಾಸನ ಮಾತ್ರ ಮಾಂಸಾಹಾರ ಸೇವನೆಯೇ ಸರಿ ಎಂದು ಪ್ರತಿಪಾದಿಸಲು ಹೊರಟಿದ್ದಾರೆ… – ಹೀಗೆ ಆರಂಭವಾಗುತ್ತದೆ ಪತ್ರಿಕೆಯ ಬರಹ.
ಜೈನ ಧರ್ಮದಲ್ಲಿ ಹುಟ್ಟಿರುವ ಕಾರಣಕ್ಕೆ, ಆ ಧರ್ಮದ ಎಲ್ಲರಿಗೂ ಮಾಂಸಾಹಾರ ಅಪವಿತ್ರವಾಗಿ ಕಾಣಬೇಕು ಎಂಬ ದನಿ ಈ ಲೇಖನದಲ್ಲಿದೆ. ಹಾಗಾದರೆ ಪತ್ರಿಕೆಯ ಎಲ್ಲಾ ಸಂಪಾದಕೀಯ ಬರಹಗಳನ್ನು, ಸುದ್ದಿ ವಿಶ್ಲೇಷಣೆಗಳನು ಆ ಮಾಲೀಕರ ಜಾತಿ, ಧರ್ಮಕ್ಕೆ ಸೀಮಿತವಾಗಿ ಗ್ರಹಿಸಲು ಸಾಧ್ಯವೇ?
ಲೇಖಕಿಯವರ ಎರಡು ಸಾಲಿನ ಅಭಿಪ್ರಾಯಕ್ಕೆ (ಅದೂ ಮತ್ತೊಂದು ಪತ್ರಿಕೆಯಲ್ಲಿ ಪ್ರಕಟವಾದದ್ದಕ್ಕೆ) ಧರ್ಮದ ಲೇಪ ಹಚ್ಚಿ ಟೀಕೆ ಮಾಡುವುದು ಅದ್ಯಾವ ಪತ್ರಿಕಾ ಧರ್ಮ? ರೂಪ ಅವರು ಜೈನಧರ್ಮೀಯರಾಗಿ ಪ್ರತಿಕ್ರಿಯೆ ನೀಡಿದ್ದಾರೆಯೆ? ಅಷ್ಟನ್ನೂ ಗ್ರಹಿಸಲಾಗದವರು ಒಂದು ಸುದೀರ್ಘ ಇತಿಹಾಸ ಇರುವ ಘನ ಪತ್ರಿಕೆಯ ಮುಖ್ಯ ಸಂಪಾದಕರಾಗಿಬಿಟ್ಟರೆ?
ಈ ಅಪ್ರತಿಮ ಪತ್ರಕರ್ತರ ಬುದ್ಧಿವಂತಿಕೆ ಅಲ್ಲಿಗೆ ನಿಲ್ಲುವುದಿಲ್ಲ.

ರೂಪ ಅವರ ಅಭಿಪ್ರಾಯ ಸ್ಪಷ್ಟ ಕನ್ನಡದಲ್ಲಿದೆ. ಕನ್ನಡ ಓದಬಲ್ಲ ಯಾರೇ ಆಗಲಿ, ಅದರಲ್ಲಿ ಅವರು ಎಲ್ಲಿಯಾದರೂ ಪರಿಷತ್ತು ಭವನ ಮಾಂಸಾಹಾರಕ್ಕೆ ಸೂಕ್ತ ಎಂದು ಹೇಳಿದ್ದಾರೆಯೆ? ಅಥವಾ ಅವರು ತಾನು ಜೈನ ಧರ್ಮೀಯಳಾಗಿ ಹೀಗೆ ಅಭಿಪ್ರಾಯ ಪಟ್ಟಿದ್ದೇನೆ ಎಂದು ಹೇಳಿದ್ದಾರೆಯೆ? ಅವರ ಮಾತು ಜೈನ ಧರ್ಮದ ಅಭಿಪ್ರಾಯವಾಗಲು ರೂಪಾ ಹಾಸನರೇನು ಜೈನ ಧರ್ಮದ ಪೀಠಾಧ್ಯಕ್ಷರೇನು? ಇಡೀ ಜೈನ ಸಮುದಾಯವನ್ನು ಅವಮಾನಗೊಳಿಸುವ ಸಂಗತಿ ಅದರಲ್ಲೇನಿದೆ? ಕಿಡಿ ಹತ್ತಿಸಿ ತಮಾಷೆ ನೋಡುವ ಅಥವಾ ಬೆಂಕಿ ಕಾಯಿಸಿಕೊಳ್ಳುವ ಕುತ್ಸಿತ ಮನಸ್ಸು ಈ ಮುಖ್ಯ ಸಂಪಾದಕರಿಗೇಕೆ?
ಇವರು ಕಿಡಿ ಹಚ್ಚಿದ್ದುದರ ಪರಿಣಾಮ ಹಾಸನದ ಜೈನ ಸಂಘದ ಸದಸ್ಯರು ದಿನಾಂಕ 6 ರಂದು ಸಭೆ ಸೇರಿ, 
ಪತ್ರಿಕೆಯಲ್ಲಿ ವ್ಯಕ್ತವಾಗಿರುವ ಅಭಿಪ್ರಾಯದಂತೆಯೇ, ಲೇಖಕಿಯ ಹೇಳಿಕೆಯನ್ನು ಖಂಡಿಸಿದ್ದಾರೆ. ರೂಪಾ ಹಾಸನ ಅವರು ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದು ಅಂತಹ ಹೇಳಿಕೆ ನೀಡಿದಕ್ಕಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.

ಈ ಬೆಳವಣಿಗೆಯ ನಂತರ ಜನಮಿತ್ರದ ಪತ್ರಕರ್ತ ಶಿರೋಮಣಿಗಳು ‘ಜನಮಿತ್ರ ಫಲಶೃತಿ’ ಎಂದು ಲೇಬಲ್ ಹಾಕಿಕೊಂಡು ಆ ಸುದ್ದಿಯನ್ನೂ ಪ್ರಕಟಿಸಿ ಕಾಲರ್ ಹಾರಿಸಿದರೂ ಅಚ್ಚರಿ ಪಡಬೇಕಿಲ್ಲ.
ಸಮಾಜದ ಮುಖಂಡರಿಗೇನು ಕನ್ನಡ ಅರ್ಥವಾಗುವುದಿಲ್ಲವೇ? ಅವರ ಹೇಳಿಕೆಯಲ್ಲಿ ಧರ್ಮದ ಪ್ರತಿನಿಧಿಯಾಗಿ ಹೇಳುತ್ತಿದ್ದೇನೆ ಎಂದು ಎಲ್ಲಿಯಾದರೂ ಮತನಾಡಿದ್ದಾರ ಎನ್ನುವುದನ್ನು ತೆರೆದ ಮನಸ್ಸಿನಿಂದ ಗ್ರಹಿಸುವಷ್ಟೂ ಪ್ರೌಢಿಮೆ ಅವರಿಗಿಲ್ಲವೆ?
ಹಾಸನದ ಗಲ್ಲಿಗಳಲ್ಲಿ ಸದ್ಯ ಹಬ್ಬಿರುವ ಗುಲ್ಲೆಂದರೆ ಇಡೀ ಪ್ರಕರಣದ ಹಿಂದೆ ಕೀಳು ಮಟ್ಟದ ರಾಜಕೀಯ ಇದೆ. ಈ ಲೇಖನಗಳನ್ನು ಬರೆದವರು ಮುಖ್ಯ ಸಂಪಾದಕರಲ್ಲ. ಅವರಿಗೆ ಹೀಗೆಲ್ಲಾ ಬರೆದು ಅಭ್ಯಾಸವಿಲ್ಲ. ಕನ್ನಡದ ಅನೇಕ ಸಂಪಾದಕರಂತೆ ಅವರು ‘ಬರೆಯುವ ಸಂಪಾದಕರಲ್ಲ’. ಆದರೆ ಅದೇ ಪತ್ರಿಕೆಯಲ್ಲಿ ಸಂಪಾದಕ ಹುದ್ದೆಯಲ್ಲಿರುವ ಎಚ್. ಬಿ. ಮದನ್ ಗೌಡ ಅವರ ದುರುದ್ದೇಶ ಪೂರಿತ ಪ್ರಲಾಪಗಳಿವು.
ಈ ಹಿಂದಿನ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿದ್ದವರು ಇದೇ ಮದನ್ ಗೌಡ. ಅವರ ಕಾಲಾನುಕ್ರಮದಲ್ಲಿ ಪರಿಷತ್‍ನ ಕಾರ್ಯಚಟುವಟಿಕೆಗಳನ್ನು ನಡೆಸುವಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳಲಿಲ್ಲ ಮತ್ತು ಮೇಲಾಗಿ ಅವರ ಕಾಲಾವಧಿ ಮೂರು ವರ್ಷ ಮುಗಿದಿದ್ದ ಕಾರಣ, ಹಂಪನಹಳ್ಳಿ ತಿಮ್ಮೇಗೌಡರನ್ನು ಪರಿಷತ್‍ನ ರಾಜ್ಯ ಘಟಕ ನೇಮಿಸಿದೆ. ಆದರೆ ಹೀಗೆ ನೇಮಕ ಮಾಡುವಾಗ ಮದನ್ ಗೌಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಆ ಕಾರಣಕ್ಕಾಗಿಯೇ ಆಹಾರ ಮೇಳದ ಬಗ್ಗೆ ವಿವಾದ ಹುಟ್ಟು ಹಾಕಿದರು. ಅದನ್ನು ಮುಂದುವರಿಸುತ್ತಾ ರೂಪಾ ಹಾಸನ ಅವರ ಅಭಿಪ್ರಾಯವನ್ನು ವಿವಾದವನ್ನಾಗಿ ಪರಿವರ್ತಿಸಿ ಜೈನ ಸಮಾಜವನ್ನು ಎತ್ತಿಕಟ್ಟಿ ತಮಾಷೆ ನೋಡುವ ವಿಕೃತ ಮನಸ್ಸು ಇಲ್ಲಿ ಕೆಲಸ ಮಾಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಅಂತಾರಾಷ್ಟ್ರೀಯ ಮಹಿಳಾ ದಿನದ ಮುನ್ನಾದಿನ (ಗುರುವಾರ) ಒಬ್ಬ ಕವಿ, ಲೇಖಕಿಗೆ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿ ಒಂದು ಧರ್ಮದವರು ಕ್ಷಮಾಪಣೆಗೆ ಆಗ್ರಹಿಸಿದ್ದಾರೆ. ಇದೆಲ್ಲದರ ಹಿಂದೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯಬೇಕಿರುವ ಪತ್ರಿಕಾ ಮಾಧ್ಯಮದ ಕೆಲ ಕೊಳಕು ಮನಸುಗಳು ಕಾರಣವಾಗಿರುವುದು ವಿಪರ್ಯಾಸ. ಇಂದು ಮಹಿಳಾ ದಿನ. ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಸದಾ ದನಿ ಎತ್ತುವ ರೂಪಾ ಹಾಸನ ಅವರ ಬೆಂಬಲಕ್ಕೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಉಳಿವಿಗಾಗಿ ಎಲ್ಲಾ ಪ್ರಜ್ಞಾವಂತ ಮನಸುಗಳು ಅವರೊಂದಿಗೆ ನಿಲ್ಲಬೇಕಿದೆ.

Satish G.T. The hindu, correspondent

|

ಇದು ನನ್ನ ಮಟ್ಟಿಗಂತೂ ಬೆಚ್ಚಿಬೀಳಿಸುವ ಸುದ್ದಿ.

ಪ್ರಾಮಾಣಿಕ ಪತ್ರಕರ್ತನಿಗೆ ಪತ್ರಕರ್ತರ ಸಂಘದಿಂದ ಬಹಿಷ್ಕಾರ !?


ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ದಿ ಹಿಂದೂ ಪತ್ರಿಕೆಯ ಹಿರಿಯ ವರದಿಗಾರ ಸತೀಶ್ ಜಿ.ಟಿ.ಯವರಿಗೆ ನೋಟೀಸೊಂದು ಹೋಗಿದೆ. ನಿಮ್ಮನ್ನು ಸಂಘದ ಸದಸ್ಯತ್ವದಿಂದ ಉಚ್ಛಾಟಿಸಲಾಗುವುದು, ಯಾವುದೇ ಪತ್ರಿಕಾಗೋಷ್ಠಿ ವರದಿಗೆ ಕರೆಯಲಾಗುವುದಿಲ್ಲ ಮತ್ತು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತನಾಗಿ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂಬುದು ಈ ನೋಟೀಸಿನ ಒಟ್ಟು ತಾತ್ಪರ್ಯ.

ದಿ ಹಿಂದೂ ಪತ್ರಿಕೆ ರಾಷ್ಟ್ರಮಟ್ಟದಲ್ಲಿ ಪತ್ರಿಕಾಮೌಲ್ಯವನ್ನು ಉಳಿಸಿಕೊಂಡು ಬಂದಿರುವ ಕೆಲವೇ ಪತ್ರಿಕೆಗಳಲ್ಲಿ ಒಂದು. ಈ ಪತ್ರಿಕೆಯ ಬಹುತೇಕ ವರದಿಗಾರರು ಶುದ್ಧಹಸ್ತರಾಗಿಯೇ ಇರುತ್ತಾರೆ. ಸತೀಶ್ ಹಿಂದೆ ಡೆಕ್ಕನ್ ಹೆರಾಲ್ಡ್‌ನಲ್ಲಿ ಕೆಲಸ ಮಾಡಿದವರು. ಗ್ರಾಮೀಣ ಭಾಗದ ವರದಿಗಾರಿಕೆಯ ಆಸಕ್ತಿಯಿಂದಾಗಿ ಈಗ ಹಾಸನ-ಚಿಕ್ಕಮಗಳೂರು ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಳ್ಳಿಯಿಂದ ನಗರಕ್ಕೆ ಬರುವ ಪತ್ರಕರ್ತರೇ ಹೆಚ್ಚಿರುವ ಸಂದರ್ಭದಲ್ಲಿ ಸತೀಶ್ ಬೆಂಗಳೂರೆಂಬ ಮಾಯಾನಗರಿ ಬಿಟ್ಟು ಹಾಸನಕ್ಕೆ ತೆರಳಿದವರು. ಹಾಸನ-ಚಿಕ್ಕಮಗಳೂರು ಜಿಲ್ಲಾ ವರದಿಗಾರಿಕೆ ಆರಂಭಿಸಿದಾಗಿನಿಂದ ಆ ಎರಡೂ ಜಿಲ್ಲೆಗಳ ನಿಜವಾದ ಸಮಸ್ಯೆಗಳ ಬಗ್ಗೆ ಗಮನ ಸೆಳೆದಂತೆ ಬರೆದಿದ್ದಾರೆ. ಯಾರಿಗೂ ಅಂಜದೆ, ಅಳುಕದೆ ತಮ್ಮ ವೃತ್ತಿಧರ್ಮವನ್ನು ಪಾಲಿಸುತ್ತ ಬಂದಿದ್ದಾರೆ.

ಇಂಥ ಸತೀಶ್ ವಿರುದ್ಧ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಯಾಕಾದರೂ ನೋಟೀಸು ಕೊಟ್ಟಿದೆ? ಇದರ ಹಿನ್ನೆಲೆ ಏನು ಎಂಬುದಕ್ಕೆ ನೋಟೀಸಿನಲ್ಲೇ ಸ್ಪಷ್ಟ ಉತ್ತರವಿದೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಯೊಬ್ಬರ ವಿರುದ್ಧ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ದೂರು ನೀಡಿ ಅಪಮಾನಗೊಳಿಸಲಾಗಿದೆ ಎಂಬುದು ನೋಟೀಸಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಸತೀಶ್ ಯಾಕಾಗಿ ಈ ದೂರನ್ನು ನೀಡಿದರು? ಆ ದೂರಿನಲ್ಲಿ ಏನಿದೆ ಎಂಬುದಕ್ಕೆ ಸತೀಶ್ ಕೊಟ್ಟ ದೂರೇ ಎಲ್ಲ ಉತ್ತರ ಹೇಳುತ್ತದೆ. ಸತೀಶ್ ನೀಡಿದ ದೂರು ಈ ಕೆಳಕಂಡಂತಿದೆ. 



ಇಂದ.
ಸತೀಶ್ ಜಿ.ಟಿ. ವರದಿಗಾರ, 
ದಿ ಹಿಂದು, ಹಾಸನ.

ಗೆ.
ಅಧ್ಯಕ್ಷರು,
ಕರ್ನಾಟಕ ವೃತ್ತಿನಿರತ ಪತ್ರಕರ್ತರ ಸಂಘ, ಬೆಂಗಳೂರು.

ಅಧ್ಯಕ್ಷರೆ,

ವಿಷಯ: ಹಾಸನದಲ್ಲಿ ಬೆಳಕಿಗೆ ಬಂದ ‘ಪ್ಯಾಕೆಜ್ ಸಂಸ್ಕೃತಿ’ ಮತ್ತು ಸಂಘದ ಪದಾಧಿಕಾರಿಯೊಬ್ಬರಿಂದ ಮುಖ್ಯವಾಹಿನಿ ಪತ್ರಿಕೆಗಳ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ನಿಮಗೆ ದೂರು ಸಲ್ಲಿಸುವುದು.

‘ಭ್ರಷ್ಟರಿಂದ ಪತ್ರಿಕೋದ್ಯಮವನ್ನು ಮುಕ್ತ ಗೊಳಿಸುವುದು’ - ಈ ಸಂಘದ ಆಶಯಗಳಲ್ಲಿ ಒಂದು ಎಂದು ಭಾವಿಸಿ ಹಾಗೂ ನಾನು ಕೆಲಸ ಮಾಡುತ್ತಿರುವ ದಿ ಹಿಂದು ಪತ್ರಿಕೆಯ ಮ್ಯಾನೇಜ್‌ಮೆಂಟ್ ನವರ ಸೂಚನೆ ಮೇರೆಗೆ ಈ ಪತ್ರವನ್ನು ನಿಮಗೆ ಬರೆಯುತ್ತಿದ್ದೇನೆ.

ದಿನಾಂಕ ಅಕ್ಟೋಬರ್ ೩ ರಂದು ಹಾಸನ ನಗರದಲ್ಲಿ ಕಾಂಗ್ರೆಸ್ ಪಕ್ಷ ಮಹಿಳಾ ಸಮಾವೇಶ ಆಯೋಜಿಸಿತ್ತು. ಸಮಾವೇಶದ ಬಗ್ಗೆ ಹಾಸನ ಜಿಲ್ಲೆಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಶಿವರಾಂ ಕೆಲವೇ ದಿನಗಳ ಹಿಂದೆ ಪತ್ರಿಕಾ ಗೋಷ್ಟಿ ನಡೆಸಿ ಪತ್ರಕರ್ತರಿಗೆ ಮಾಹಿತಿ ನೀಡಿದ್ದರು.

ಸಮಾವೇಶದ ದಿನ (ಅಕ್ಟೋಬರ್ ೩ರಂದು) ಬೆಳಗ್ಗೆ ೧೧.೦೧ ಗಂಟೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಲೀಲಾವತಿಯವರು ದೂರವಾಣಿ ಮೂಲಕ (ಅವರ ದೂರವಾಣಿ ಸಂಖ್ಯೆ ೯೪೪೮೬ ೫೫೦೪೩) ನನ್ನನ್ನು ಸಂಪರ್ಕಿಸಿ ‘ನೀವು ದಯಮಾಡಿ ಕಾರ್ಯಕ್ರಮಕ್ಕೆ ಬನ್ನಿ’ ಎಂದರು. ಅದಕ್ಕೂ ಮೊದಲು “ಕಾಂಗ್ರೆಸ್ ನವರು ನನಗೆ ಮತ್ತು ಕೆಲ ಸ್ಥಳೀಯ ಪತ್ರಿಕೆಗಳಿಗೆ ಜಾಹೀರಾತು ನೀಡಿದ್ದಾರಷ್ಟೆ. ಆದರೆ ಸುದ್ದಿವಾಹಿನಿಯ ವರದಿಗಾರರು ಈ ಬಗ್ಗೆ ಏನೇನೋ ಮಾತನಾಡುತ್ತಿದ್ದಾರೆ?” ? ಹೀಗೆ ಹೇಳಿದರು. ಅವರ ಮಾತಿನ ಹಿನ್ನೆಲೆ ಗ್ರಹಿಸಲಾಗಲಿಲ್ಲ. ಆದರೆ ಕಾರ್ಯಕ್ರಮಕ್ಕೆ ದಯಮಾಡಿ ಬನ್ನಿ ಎಂದು ಹೇಳಿದ್ದು ಮಾತ್ರ ಸ್ಪಷ್ಟ.

ಇದೇ ರೀತಿ ಇನ್ನೊಂದು ಇಂಗ್ಲಿಷ್ ಪತ್ರಿಕೆ ವರದಿಗಾರನಿಗೂ ದೂರವಾಣಿ ಕರೆ ಮಾಡಿ, ಆ ವರದಿಗಾರ ರಜೆಯ ಮೇಲೆ ಊರಿಗೆ ತೆರಳಿದ್ದರೂ, “ಹೇಗಾದರೂ ಮಾಡಿ ಒಂದೇ ಒಂದು ಸಾಲಿನಷ್ಟಾದರೂ ಈ ಕಾರ್ಯಕ್ರಮದ ವರದಿ ನಿಮ್ಮ ಪತ್ರಿಕೆಯಲ್ಲಿ ಬರುವಂತೆ ಮಾಡು, ಬೇಕಾದರೆ ನಿನ್ನ ಕಾಲಿಗೆ ಬೀಳುತ್ತೇನೆ..” ಎಂದು ಲೀಲಾವತಿಯವರು ಗೋಗರೆದಿದ್ದರು. ವರದಿಗಾರ ಮಿತ್ರ ಈ ಸಂಗತಿಯನ್ನು ಆಪ್ತರ ಬಳಿ ಹಂಚಿಕೊಂಡಿದ್ದಾನೆ.

ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕೆ ಹೀಗೆ ಇವರು ಆಹ್ವಾನ ನೀಡಿದ್ದು ಮತ್ತು ಗೋಗರೆದಿದ್ದು ತೀರಾ ವಿಚಿತ್ರ ಎನಿಸಿತು. ಕೆಲವೇ ನಿಮಿಷಗಳ ನಂತರ ಈ ವರ್ತನೆ ಮೂಲ ಉದ್ದೇಶ ಸ್ಪಷ್ಟವಾಯಿತು.

ಸುದ್ದಿ ವಾಹಿನಿಯೊಂದರ ವರದಿಗಾರ ಮಿತ್ರನಿಗೆ, ಬಿ.ಶಿವರಾಂ ಪತ್ರಿಕಾಗೋಷ್ಟಿಗೆ ತಡವಾಗಿ ಬಂದಿದ್ದರ ಕಾರಣ, ಕಾಂಗ್ರೆಸ್ ಸಮಾವೇಶದ ಬಗ್ಗೆ ಮಾಹಿತಿ ಇರಲಿಲ್ಲ. ಸಮಾವೇಶದ ದಿನ ಹೈಸ್ಕೂಲ್ ಆವರಣದಲ್ಲಿ ಶಾಮಿಯಾನ ಹಾಕಿದ್ದನ್ನು ನೋಡಿ, ಅಲ್ಲಿಯೇ ಇದ್ದ ಹಾಸನ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಲಲಿತಮ್ಮನವರನ್ನು ವಿಚಾರಿಸಿದ್ದಾರೆ. ಆಗ ಅವರಿಂದ ಬಂದ ಉತ್ತರ, “ಯಾಕ್ರಿ ಕಾರ್ಯಕ್ರಮದ ಬಗ್ಗೆ ಗೊತ್ತಿಲ್ಲವಾ? ನಿಮಗೆ ಕೊಡಬೇಕಾದ ಪ್ಯಾಕೇಜನ್ನೆಲ್ಲಾ ನಿಮ್ಮ ಸಂಘದ ಅಧ್ಯಕ್ಷೆ ಲೀಲಾವತಿಯವರಿಗೆ ಕೊಟ್ಟಿದ್ದೇವಲ್ಲ, ಅವರು ಹೇಳಲಿಲ್ಲವಾ? ಇನ್ನು ನಿಮಗೆ ಕೊಡಬೇಕಾದ್ದು ಏನಾದರೂ ಇದ್ದರೆ, ಬನ್ನಿ ತಗೊಂಡು ಹೋಗಿ ಸುದ್ದಿ ಮಾಡಿ..” ಎಂದು ದರ್ಪದಿಂದಲೇ ಮಾತನಾಡಿದ್ದಾರೆ.

ಯಾವ ಸುದ್ದಿಗೂ ಯಾವ ದಿನವೂ ಯಾರ ಬಳಿಯೂ ಪುಡಿಕಾಸು ಕೇಳದ ನಾವು ಪಕ್ಷವೊಂದರ ಸಮಾವೇಶಲ್ಲಿ ಸಾರ್ವಜನಿಕವಾಗಿ ಹೀಗೆ ಅನ್ನಿಸಿಕೊಳ್ಳಬೇಕಾಯಿತಲ್ಲ ಎಂದು ಕ್ರುದ್ಧನಾದ ವರದಿಗಾರ ತಕ್ಷಣ ಲೀಲಾವತಿಯವರಿಗೆ ದೂರವಾಣಿ ಕರೆ ಮಾಡಿ ಏನಿದರ ಮರ್ಮ ಎಂದು ಕೇಳಿದ್ದಾನೆ. ತಾನು ಕೆಲಸ ಮಾಡುತ್ತಿರುವ ಸುದ್ದಿ ಸಂಸ್ಥೆ ಹೆಸರಿನಲ್ಲಿ ‘ಪ್ಯಾಕೇಜ್’ ಕೇಳುವ ಮತ್ತು ಆ ಮೂಲಕ ಚಾನೆಲ್ ಗೆ ಮಸಿ ಬಳಿಯುತ್ತಿರುವ ಬಗ್ಗೆ ತನ್ನ ಸಿಟ್ಟು ವ್ಯಕ್ತ ಪಡಿಸಿದ್ದಾನೆ.

ಈ ಘಟನೆಯಿಂದ ವಿಚಲಿತನಾದ ವರದಿಗಾರ ಇತರೆ ಮಿತ್ರರೊಂದಿಗೆ ತನ್ನ ನೋವನ್ನು ಹಂಚಿಕೊಂಡಾಗ ಲೀಲಾವತಿಯವರು ಫೋನ್ ಮಾಡಿದ್ದರ ಹಿಂದಿನ ಉದ್ದೇಶ ಅರ್ಥವಾಯಿತು. ವರದಿಗಾರನೊಂದಿಗೆ ಸಂಭಾಷಣೆ ನಂತರ ಕಾಂಗ್ರೆಸ್ ನಾಯಕಿ ಶ್ರೀಮತಿ ಲಲಿತಮ್ಮನವರು ಪತ್ರಕರ್ತರ ಸಂಘದ ಅಧ್ಯಕ್ಷರಾದ ಲೀಲಾವತಿಯವರಿಗೆ ದೂರವಾಣಿ ಕರೆ ಮಾಡಿ ಯಾಕ್ರಿ ಯಾರಿಗೂ ನೀವು ಕಾರ್ಯಕ್ರಮದ ಬಗ್ಗೆ ಹೇಳಿಲ್ಲವೇ ಎಂದು ಕೇಳಿದ್ದಾರೆ. ಆ ನಂತರ ನನಗೂ ಮತ್ತು ಇನ್ನಿತರೆ ಮಿತ್ರರಿಗೂ ಲೀಲಾವತಿಯವರು ದೂರವಾಣಿ ಕರೆ ಮಾಡಿ ಕಾರ್ಯಕ್ರಮಕ್ಕೆ ಬನ್ನಿ ಎಂದು ಗೋಗರೆದಿದ್ದಾರೆ.

ಈ ಸನ್ನಿವೇಶಗಳನ್ನು ಗಮನಿಸಿದಾಗ ನಮ್ಮ (ದಿ ಹಿಂದು) ಪತ್ರಿಕೆಯನ್ನೂ ಸೇರಿದಂತೆ ಮುಖ್ಯವಾಹಿನಿಯ ಪತ್ರಿಕೆಗಳ ಹೆಸರುಗಳನ್ನು ಬಳಸಿಕೊಂಡು ಈ ಘನ ಸಂಘದ ಜಿಲ್ಲಾಧ್ಯಕ್ಷರು ‘ಪ್ಯಾಕೇಜ್’ ಸ್ವೀಕರಿಸಿರುವ ಅನುಮಾನ ಬರುತ್ತದೆ. ಅನುಮಾನಕ್ಕೆ ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು.

೧. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಲಿಲತಮ್ಮನವರು ಸಮಾವೇಶದ ಸ್ಥಳದಲ್ಲಿ ಸುದ್ದಿ ವಾಹಿನಿಯ ವರದಿಗಾರನಿಗೆ ಹೇಳಿರುವ ಮಾತುಗಳು - ‘ಎಲ್ಲರಿಗೂ ಸೇರಿ ಪ್ಯಾಕೇಜನ್ನು ಈಗಾಗಲೇ ನಿಮ್ಮ ಅಧ್ಯಕ್ಷರಿಗೆ ನೀಡಿದ್ದೇವಲ್ಲ, ನಿಮಗೂ ಮತ್ತೇನಾದರೂ ಬೇಕಿದ್ದರೆ ತಗೊಂಡು ಹೋಗಿ ಸುದ್ದಿ ಮಾಡಿ..’ ಈ ಮಾತುಗಳನ್ನು ಕೇಳಿಸಿಕೊಂಡ ವರದಿಗಾರನ ಜೊತೆ ಕೆಮಾರಮನ್ ಕೂಡಾ ಇದ್ದರು. ರಾಷ್ಟೀಯ ಪಕ್ಷವೊಂದರ ಜವಾಬ್ದಾರಿ ಸ್ಥಾನದಲ್ಲಿರುವವರ ಹೇಳಿರುವ ಮಾತನ್ನು ಅಲ್ಲಗಳೆಯಲಾದೀತೆ?

೨. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಶ್ರೀಮತಿ ಲೀಲಾವತಿಯವರು ನನಗೆ ಮತ್ತು ಇತರೆ ಪತ್ರಕರ್ತರಿಗೆ ದೂರವಾಣಿ ಕರೆಮಾಡಿ ಕಾಂಗ್ರೆಸ್ ಸಮಾವೇಶಕ್ಕೆ ಬರುವಂತೆ ಆಹ್ವಾನಿಸಿದ್ದು. (ಇವರು ಪ್ಯಾಕೇಜ್ ಲಾಭ ಪಡೆಯದಿದ್ದರೆ ನಮಗೆ ಫೋನ್ ಮಾಡಿ ಆಹ್ವಾನಿಸಲು ಇವರ್ಯಾರು? ಅಥವಾ ಇವರೇನು ಕಾಂಗ್ರೆಸ್ ಕಾರ್ಯಕರ್ತರೆ?)

೩. “ಕಾರ್ಯಕ್ರಮದ ವರದಿ ಒಂದು ಸಾಲಿನಷ್ಟಾದರೂ ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗುವಂತೆ ನೋಡಿಕೋ, ಬೇಕಾದರೆ ನಿನ್ನ ಕಾಲಿಗೆ ಬೀಳುತ್ತೇನೆ..” ಎಂದು ಸಂಘದ ಅಧ್ಯಕ್ಷರು ಕೋರುತ್ತಾರೆಂದರೆ ಅದರ ಹಿಂದಿನ ಮರ್ಮವೇನು? ಪತ್ರಕರ್ತರ ಸಂಘದ ಅಧ್ಯಕ್ಷರು ಕಾಂಗ್ರೆಸ್ ಕಾರ್ಯಕ್ರಮ ಪ್ರಮುಖ ಪತ್ರಿಕೆಗಳಲ್ಲಿ ವರದಿಯಾಗುವಂತೆ ನೋಡಿಕೊಳ್ಳುತ್ತೇನೆಂದು ಪಕ್ಷದ ನೇತಾರರಿಗೆ ಭರವಸೆ ನೀಡಿದ್ದರೆ?

ರಾಷ್ಟ್ರಮಟ್ಟದಲ್ಲಿ ‘ಪೇಯ್ಡ್ ನ್ಯೂಸ್’ ವಿರುದ್ಧ ದನಿ ಎತ್ತಿರುವವರ ಪೈಕೆ ದಿ ಹಿಂದು ಪತ್ರಿಕೆ ಪ್ರಮುಖವಾದದ್ದು. ಪ್ರಸ್ತುತ ಘಟನೆಯಲ್ಲಿ ನಮ್ಮ ಪತ್ರಿಕೆಯ ಹೆಸರನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿರುವ ಸಂಶಯಗಳಿವೆ. ಈ ಬಗ್ಗೆ ನಮ್ಮ ಸಂಸ್ಥೆಗೂ ಮಾಹಿತಿ ನೀಡಿದ್ದೇನೆ. ಅವರ ಸೂಚನೆ ಮೇರೆಗೆ ಈ ದೂರನ್ನು ನಿಮಗೆ ಸಲ್ಲಿಸುತ್ತಿದ್ದೇನೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೀರೆಂದು ನಿರೀಕ್ಷಿಸುತ್ತೇನೆ.

ಇತಿ,
ಸತೀಶ್ ಜಿ.ಟಿ
ಹಾಸನ
೦೫-೧೦-೨೦೧೨


? ದೂರು ನೀಡುತ್ತಿರುವುದು ನಮ್ಮ ಸಂಸ್ಥೆಯ ಸೂಚನೆ ಮೇರೆಗೆ. ಮಿತ್ರರು ಪ್ರತಿನಿಧಿಸುವ ಸಂಸ್ಥೆಗಳು ದೂರು ನೀಡುವ ನಿರ್ಧಾರದ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದು ಗೊತ್ತಿಲ್ಲ. ಹಾಗಾಗಿ ನಾನು ಈ ಪತ್ರದಲ್ಲಿ ಉಲ್ಲೇಖಿಸಿರುವ ವರದಿಗಾರ ಮಿತ್ರರನ್ನು ಮತ್ತು ಅವರು ಪ್ರತಿನಿಧಿಸುವ ಸುದ್ದಿ ಸಂಸ್ಥೆಗಳನ್ನು ಹೆಸರಿಸಿಲ್ಲ.

ಈ ದೂರಿನ ಪ್ರತಿಯನ್ನು ಹಾಸನ ಜಿಲ್ಲಾ ಸಂಘದ ಉಪಾಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಯವರಿಗೂ ಕಳುಹಿಸುತ್ತಿದ್ದೇನೆ. ಅಧ್ಯಕ್ಷರ ಮೇಲೆಯೇ ಆರೋಪ ಇರುವುದರಿಂದ, ಅವರಿಗೆ ಪ್ರತಿ ಕಳುಹಿಸುವುದು ಅರ್ಥಹೀನ ಎಂಬುದು ನನ್ನ ಅನಿಸಿಕೆ.
******

ಈ ದೂರನ್ನು ನೀಡಿರುವುದು ೨೦೧೨ರ ಅಕ್ಟೋಬರ್ ೫ರಂದು. ದಿ ಹಿಂದೂ ನಂಥ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವ ಯಾವುದೇ ಪತ್ರಕರ್ತ ತಮ್ಮ ಹೆಸರಲ್ಲಿ, ತಮ್ಮ ಸಂಸ್ಥೆ ವಿಷಯದಲ್ಲಿ ಸುದ್ದಿಗಾಗಿ ಕಾಸು ಎತ್ತುತ್ತಿರುವುದು ಕಂಡುಬಂದರೆ ಏನನ್ನು ಮಾಡಬಹುದೋ ಅದನ್ನೇ ಸತೀಶ್ ಮಾಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದಾದ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಕ್ರಮ ಕೈಗೊಳ್ಳುವುದಿರಲಿ, ದೂರು ತಲುಪಿರುವ ಕುರಿತು ಒಂದು ಸಾಲಿನ ಪ್ರತಿಕ್ರಿಯೆಯನ್ನೂ ಸತೀಶ್ ಅವರಿಗೆ ನೀಡಿಲ್ಲ. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಚಟುವಟಿಕೆಗಳನ್ನು ಗಮನಿಸಿದರೆ ಇಂಥ ಪ್ರತಿಕ್ರಿಯೆ, ಕ್ರಮ ಕೈಗೊಳ್ಳುವ ಸಾಧ್ಯತೆಗಳು ತೀರಾ ಕಡಿಮೆ. ಅದು ಬೇರೆಯ ವಿಷಯ.

ತಮಾಶೆಯೆಂದರೆ ಈಗ ನಾಲ್ಕು ತಿಂಗಳ ಬಳಿಕ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸತೀಶ್ ಅವರ ಸದಸ್ಯತ್ವ ರದ್ದುಗೊಳಿಸುವುದಾಗಿ ಗುಟುರು ಹಾಕುತ್ತಿದೆ. ಪತ್ರಿಕಾಗೋಷ್ಠಿಗಳಿಗೆ ಸೇರಿಸುವುದಿಲ್ಲ ಎಂದು ಯಜಮಾನಿಕೆ ದರ್ಪ ಪ್ರದರ್ಶಿಸಿದೆ.

ಹಾಸನ ಜಿಲ್ಲೆಯ ಪತ್ರಿಕಾರಂಗದ ಇತಿಹಾಸ ದೊಡ್ಡದು. ಇಲ್ಲಿ ತಮ್ಮ ಇಡೀ ಜೀವನವನ್ನೇ ಪತ್ರಿಕಾವೃತ್ತಿಗೆ ಸಮರ್ಪಿಸಿದ ಕೃ.ನ,ಮೂರ್ತಿಯಂಥವರಿದ್ದರು. ಪತ್ರಿಕಾವೃತ್ತಿಯನ್ನೇ ಒಂದು ಚಳವಳಿಯನ್ನಾಗಿಸಿಕೊಂಡ ಆರ್.ಪಿ.ವೆಂಕಟೇಶ್ ಮೂರ್ತಿ, ಮಂಜುನಾಥ ದತ್ತ ಅಂಥವರಿದ್ದಾರೆ. ಹಾಸನ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿ ನಂತರ ಬೆಂಗಳೂರು ಸೇರಿದಂತೆ ಬೇರೆಬೇರೆ ಕಡೆ ಪ್ರತಿಷ್ಠಿತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವರಿದ್ದಾರೆ. ಶೇಷಾದ್ರಿ, ರಂಗನಾಥ್, ಎಚ್.ಬಿ.ಮದನ್‌ಗೌಡ, ವೈ.ಪಿ.ರಾಜೇಗೌಡ, ಬಿ.ಜೆ.ಮಣಿ, ಮಂಜುನಾಥ್, ಕೆಂಚೇಗೌಡ, ಪ್ರಸನ್ನ ಕುಮಾರ್, ಬಾಳ್ಳು ಗೋಪಾಲ್, ಡಿ.ಜಿ.ರಾಜೇಶ್, ರವಿ ನಾಕಲಗೋಡು, ವೇಣು, ವೆಂಕಟೇಶ್, ರವಿಕುಮಾರ್, ಹರೀಶ್, ಬಿ.ಮಂಜು ಹೀಗೆ ನೆನಪಿಸಿಕೊಳ್ಳಲು ಹಾಸನದಲ್ಲಿ ಹತ್ತು ಹಲವಾರು ಹೆಸರುಗಳಿವೆ. 

ಹೀಗಿರುವಾಗ ಇಂಥ ಅನೈತಿಕವಾದ, ಮುಖೇಡಿಯಾದ ತೀರ್ಮಾನವನ್ನು ಜಿಲ್ಲಾ ಪತ್ರಕರ್ತರ ಸಂಘ ತೆಗೆದುಕೊಳ್ಳುತ್ತದೆ ಎಂದು ನಂಬುವುದಾದರೂ ಹೇಗೆ? ಅಷ್ಟಕ್ಕೂ ಸಂಘದಿಂದ ಉಚ್ಛಾಟಿಸಿದ ಮಾತ್ರಕ್ಕೆ, ಪತ್ರಿಕಾಗೋಷ್ಠಿ ವರದಿಗಾರಿಕೆಗೆ ನಿರ್ಬಂಧಿಸಿದ ಮಾತ್ರಕ್ಕೆ ಸತೀಶ್ ಅವರ ವೃತ್ತಿಜೀವನವನ್ನು ಕಸಿದುಕೊಳ್ಳಲಾದೀತೆ? ಒಂದು ವೇಳೆ ಸತೀಶ್ ವೃತ್ತಿಯನ್ನು ಕಸಿದುಕೊಳ್ಳುವುದು ಸಂಘದ ಹವಣಿಕೆಯಾದರೆ ಇದೆಂಥ ಸಂಘ?

ನಾನು ಹಲವು ವರ್ಷಗಳ ಕಾಲ ಇದೇ ಹಾಸನ ಜಿಲ್ಲೆಯಲ್ಲಿ ಪತ್ರಿಕಾ ವೃತ್ತಿ ನಡೆಸಿದವನು. ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷನಾಗಿ, ಜಿಲ್ಲಾ ಸಂಘದ ಕಾರ್ಯಕಾರಿಣಿ ಸದಸ್ಯನಾಗಿಯೂ ಕೆಲಸ ಮಾಡಿದ್ದೇನೆ. ಈ ನೋಟೀಸನ್ನು ಗಮನಿಸಿದಾಗ ನಿಜಕ್ಕೂ ನೋವಾಯಿತು. ಸತೀಶ್ ಅವರನ್ನು ಅವಮಾನಿಸುವ ಭರದಲ್ಲಿ ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘ ತನ್ನನ್ನು ತಾನು ಅಪಮಾನಿಸಿಕೊಂಡಿದೆ. ಕಾಸಿಗಾಗಿ ಸುದ್ದಿ ವಿರುದ್ಧ ಧ್ವನಿಯೆತ್ತಿದ ಪತ್ರಕರ್ತನ ನ್ಯಾಯಶೀಲತೆಯನ್ನು, ವೃತ್ತಿಧರ್ಮವನ್ನು ಗೌರವಿಸುವ, ಪ್ರಶಂಶಿಸುವ ಬದಲು ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡು ಪಾತಾಳಕ್ಕೆ ಇಳಿದಿದೆ.

ಮೇಲೆ ಉಲ್ಲೇಖಿಸಿದ, ಉಲ್ಲೇಖಿಸದೇ ಇರುವ ಹಾಸನ ಜಿಲ್ಲೆಯ ಎಲ್ಲ ಪತ್ರಕರ್ತ ಮಿತ್ರರಿಗೆ ನನ್ನದೊಂದು ಪ್ರೀತಿಯ ಮನವಿ. ಇದೊಂದು ಕಪ್ಪುಚುಕ್ಕೆ ಅಳಿಸುವುದು ನಿಮ್ಮ ಕೈಯಲ್ಲೇ ಇದೆ. ಸತೀಶ್ ಅವರಿಗೆ ಕಳುಹಿಸಿರುವ ನೋಟೀಸನ್ನು ಬೇಷರತ್ತಾಗಿ ಹಿಂದಕ್ಕೆ ಪಡೆಯುವ ಕೆಲಸ ತುರ್ತಾಗಿ ಆಗಬೇಕಿದೆ. ಕಾಸಿಗಾಗಿ ಸುದ್ದಿ ವಿರುದ್ಧ ರಾಷ್ಟ್ರಮಟ್ಟದಲ್ಲಿ ಅಭಿಯಾನ ತೀವ್ರಗತಿಯಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ಹಾಸನ ಜಿಲ್ಲೆಯ ಪತ್ರಕರ್ತರು ಈ ನೋಟೀಸಿನ ಕಾರಣಕ್ಕೆ ತಲೆತಗ್ಗಿಸಿ ನಿಲ್ಲುವಂತಾಗಬಾರದು. ಸತೀಶ್ ಅವರಿಗೆ ತಮ್ಮ ವೃತ್ತಿಯನ್ನು ಯಾರ ಅಡ್ಡಿ, ಆತಂಕ, ಹಸ್ತಕ್ಷೇಪ, ಬೆದರಿಕೆಗಳು ಇಲ್ಲದಂತೆ ನಡೆಸಿಕೊಂಡು ಹೋಗುವಂತೆ ಸಹಕರಿಸಬೇಕು. 
ಅದು ಸಾಧ್ಯವಾಗದೆ ಹೋದರೆ, ನಾಡಿನ ನ್ಯಾಯಪರವಾದ ಮನಸ್ಸುಗಳು ಅನಿವಾರ್ಯವಾಗಿ ಜಿಲ್ಲಾ ಪತ್ರಕರ್ತರ ಸಂಘದ ಎದುರೇ ಬಂದು ಧರಣಿ ನಡೆಸಿ, ನಿಮ್ಮ ಕಣ್ಣುಗಳನ್ನು ತೆರೆಸಬೇಕಾದೀತು. ವಿಷಯ ದೊಡ್ಡದಾಗುವ ಮುನ್ನ ಜಿಲ್ಲಾ ಪತ್ರಕರ್ತರು ಎಲ್ಲದಕ್ಕೂ ತೆರೆ ಎಳೆದಾರೆಂಬ ನಂಬಿಕೆ ನನ್ನದು. ಯಾಕೆಂದರೆ ಜಿಲ್ಲೆಯ ಪತ್ರಕರ್ತರು ಒಬ್ಬ ಪ್ರಾಮಾಣಿಕ ಪತ್ರಕರ್ತನನ್ನು ಬಲಿ ತೆಗೆದುಕೊಳ್ಳುವಷ್ಟು ಅಮಾನವೀಯರು, ಹೇಡಿಗಳು, ಫ್ಯಾಸಿಸ್ಟ್ ಗಳು ಅಲ್ಲ ಎನ್ನುವುದು ನನಗೆ ಚೆನ್ನಾಗಿ ಗೊತ್ತು.
 

Copyright © 2010 ರಾಜ್ಯ ಸುದ್ದಿ