Keblinger

Keblinger
| 17 May 2011
ಧಡ್, ಧಾಡ್ ಧಡೀರೆಂದು ಗೋಡೆ ಬಿದ್ದ ಸದ್ದಿಗೆ ಲಕ್ಷ್ಮಿ ಎದೆಗವಚಿಕೊಂಡಿದ್ದ ಎಳೆಮಗು ಬೆಚ್ಚಿ ಎದ್ದು ಚೀರಲಾರಂಭಿಸಿತು. ತನ್ನ ಕಣ್ಣೆದುರಿಗೇ ಕಷ್ಟ ಪಟ್ಟು ಕಟ್ಟಿದ್ದ ಮನೆ ನೆಲಸಮವಾಗಿದ್ದು ನೋಡಿ, ಪ್ರಕಾಶ್ ಮೇಷ್ಟರ ಕಣ್ಣು ಮಂಜಾಯಿತು. ತಾನು ಕಣ್ಣೀರು ಹಾಕುವುದನ್ನು ನೋಡಿದರೆ ಮಗಳು ಕಂಗೆಟ್ಟಾಳು ಎಂದು ಬಾರದ ಕೆಮ್ಮನ್ನು ನಟಿಸಿ ಮುಖಕ್ಕೆ ಟವೆಲು ಅಡ್ಡ ಹಿಡಿದರು.

ಬೆತ್ತದ ಆರಾಮಕುರ್ಚಿಯಲ್ಲಿ ಮಲಗಿಸಿದ್ದ ಹೆಂಡತಿ, ತೆಳುವಾದ ಹಾಸಿಗೆಯಿಂದಲೋ, ಬಿಸಿಲಿನಿಂದಲೋ, ಅಥವಾ ಮಲಗಿಸಿದ ಭಂಗಿ ನೋವುಕೊಡಲು ಹಚ್ಚಿದ್ದರಿಂದಲೋ, "ಏ ಏ.." ಎಂದು ಕರೆಯಲು ಶುರುಮಾಡಿದಳು. ಅವಳ ಹತ್ತಿರ ಹೋಗಿ "ಏನಾಯಿತೇ?" ಎಂದು ಕೇಳಿದಾಗ, ಅವಳಿಗೆ ಮಲಗಿಸಿದಲ್ಲೇ ಎರಡು ಆಗಿದ್ದು ತಿಳಿಯಿತು. ಪಕ್ಕದ ಮನೆಯ ಮಂಜಯ್ಯ ಮತ್ತವರ ಮಕ್ಕಳು ಇನ್ನೂ ಒಡೆಯದ ತಮ್ಮ ಮನೆಯಿಂದ ಒಳಗೆ ಉಳಿದಿರಬಹುದಾದ ಬಳಕೆಯ ವಸ್ತುಗಳನ್ನು ತರಲು ಒಳಗೂ ಹೊರಗೂ ಓಡಾಡುತ್ತಿದ್ದರು, ರಸ್ತೆ ಆಚೆಯ ಸಾಲಿನ ಮನೆಗಳೆಲ್ಲ ಆಗಲೇ ಉದುರಿದ್ದವು. ತನ್ನಂತೆ ಹತಾಶ ನೋಟ ಬೀರುತ್ತಿದ್ದ ಲಿಂಗಯ್ಯ ಮೇಷ್ಟರು ರಸ್ತೆಗೆ ಬರುವುದನ್ನು ನೋಡಿ "ಲಿಂಗಯ್ಯ ಮೇಷ್ಟರೇ, ಸ್ವಲ್ಪ ಇಲ್ಲಿ ಬನ್ನಿ.. ಇವಳಿಗೆ ಹಿಂದೆ ಹೊಂಗೆ ಮರದ ಕೆಳಗೆ ಇಡಬೇಕು.." ಎಂದಾಗ ಈ ಲೋಕಕ್ಕೆ ಮರಳಿ ಬಂದವರಂತೆ "ಬಂದೆ ಸಾರ್.." ಎಂದು ಇವರ ಮನೆಯ ಹತ್ತಿರ ಬಂದರು.

ಹೊಲಸು ವಾಸನೆಗೆ ಅವರು ಮುಖ ಕಿವಿಚಬಹುದೆಂದು "ನೀವು ಅವಳ ತಲೆದೆಸೆಯಲ್ಲಿ ಹಿಡಕೊಳ್ಳಿ ಸಾರ್, ನಾನು ಕಾಲ ಹತ್ತಿರ ಹಿಡಕೊಳ್ತೀನಿ.." ಎಂದರು. ಹೊಂಗೆ ಮರದ ಬುಡದಲ್ಲಿ ನೆರಳು ಚೆನ್ನಾಗಿತ್ತು. ಅಲ್ಲಿ ಆಗಲೇ ಪಕ್ಕದ ಮನೆಯ ನೀಲಕಂಠಮೂರ್ತಿಗಳ ಹೆಂಡತಿ ಮತ್ತು ಕಿರಿಯ ಮಕ್ಕಳಿಬ್ಬರು ಕುಳಿತಿದ್ದರು. ಅವರ ಹಿರಿಮಗ ಮೂರ್ತಿಗಳ ಜತೆ ಅದಾಗಲೇ ಗೋಡೆ ಉದುರಿದ ಮನೆಯಿಂದ ಇನ್ನೂ ಮುರಿಯದೆ ಇರುವ ಸಾಮಾನುಗಳನ್ನು ತರಲು ಸಹಾಯ ಮಾಡುತ್ತಿದ್ದ. ಎಲ್ಲೆಡೆ ದೂಳು, ಕೆಮ್ಮು, ಮತ್ತು ಕಂಗಾಲಾದ ಜನರ ಧಾವಂತದ ಓಡಾಟ..ಮರದ ನೆರಳಲ್ಲೇ ಪದ್ಮಾವತಿಯನ್ನು ಮಲಗಿಸಿ, ಅವಳ ಪಕ್ಕದಲ್ಲೇ ಇರುತ್ತಿದ್ದ ಪಾಂಡ್ಸ್ ಪೌಡರಿನ ಡಬ್ಬಿಯಿಂದ ಸ್ವಲ್ಪ ಸಿಡಿಸಿ, "ಇರೇ, ಗೌರೀನ ಕರಕೊಂಡು ಬರ್ತೀನಿ" ಎಂದು ಮೊಬೈಲ್ ಫೋನ್ ತೆಗೆದು ಫೋನ್ ಮಾಡಲು ಹಚ್ಚಿದರು.

ಜೆಸಿಬಿ ಯಂತ್ರ ಅದಾಗಲೇ ನಾಲ್ಕೈದು ಮನೆಗಳನ್ನು ಉರುಳಿಸಿ ಮುಂದೆ ಹೋಗಿದ್ದರೂ ರಾಕ್ಷಸ ಸದ್ದನ್ನು ಮಾಡುತ್ತಾ ಕೆಲಸ ಮಾಡುತ್ತಿತ್ತು. ಅಳುತ್ತಿದ್ದ ಹೆಂಗಸರು ಮಕ್ಕಳು, ಕಂಗೆಟ್ಟು ಅತ್ತಿಂದಿತ್ತ ಓಡಾಡುತ್ತಿದ್ದ ಗಂಡಸರು, ಇನ್ನೂ ಉರುಳಿಲ್ಲದ ಮನೆಗಳಿಂದ ಕೊನೆಕ್ಷಣದಲ್ಲಿ ಬೆಲೆಬಾಳುವ ವಸ್ತುಗಳನ್ನು ಹೊರಗೆಳೆಯುತ್ತಿದ್ದ ಕಾಲೋನಿ ವಾಸಿಗಳು, ಎಲ್ಲ ಕಡೆ ಹತ್ತು ಅಡಿಗಳಿಗೆ ಒಬ್ಬರಂತೆ ನಿಂತಿದ್ದ ಖಾಕಿಧಾರಿಗಳು, ನಿರ್ಭಾವುಕರಾಗಿ ಕೆಲಸ ಮಾಡುತ್ತಿದ್ದ ಜೆಸಿಬಿ ಯಂತ್ರದ ಮತ್ತು ನಗರಾಭಿವೃದ್ಧಿ ಮಂಡಳಿಯ ಉದ್ಯೋಗಿಗಳು, ಎಲ್ಲವೂ ಸೇರಿ ಅಲ್ಲೊಂದು ಸನ್ನಿವೇಶವನ್ನು ನಿರ್ಮಿಸಿದ್ದವು.

ಗೌರಿಯ ಗಂಡ ಸದಾಶಿವ ಫೋನ್ ತೆಗೆದುಕೊಂಡು "ಮೇಷ್ಟ್ರೇ, ಇನ್ನೊಂದು ಹತ್ತು ನಿಮಿಷದಲ್ಲಿ ಕಳಿಸಿಕೊಡ್ತೀನಿ.." ಎಂದು ಹೇಳಿದ. ಮೇಷ್ಟ್ರು "ಸದಾಶಿವ, ನಿಮ್ಮ ಮನೆಗೆ ಬಂದು ಮಾತಾಡ್ತೀನಪ್ಪ!.. ನೀನು ಹ್ಞೂ ಅಂದರೆ ನಿನ್ನ ಉಪಕಾರ ಜನ್ಮೇಪಿ ಮರೆಯಲ್ಲ.." ಎಂದರು. ಸದಾಶಿವ ದಿಗ್ಭ್ರಮೆಗೊಳಗಾಗಿ "ಇದೇನು ಮೇಷ್ಟ್ರೆ ಹೀಗಂತೀರಿ! ಎಲ್ಲ ಆರೋಗ್ಯ ತಾನೆ.. ಪದ್ಮಾವತಮ್ಮ, ಲಕ್ಷಿ, ಮಗು..." ಎಂದು ತಡವರಿಸಿದ. "ಎಲ್ಲ ಚೆನ್ನಾಗಿದ್ದಾರಪ್ಪ.. ಆದರೆ ಎಲ್ಲ ಮುಗಿದು ಹೋಯಿತು.." ಎಂದು ತುಟಿ ಮೀರಿ ಬಂದ ಮಾತಿಗೆ ಮನಸ್ಸಿನಲ್ಲೇ ಹಲುಬಿದರು. ಸದಾಶಿವ "ಮೇಷ್ಟ್ರೆ..ಎಲ್ಲಿದ್ದೀರಿ? ನಾನು ಈಗಲೇ ಬರ್ತಿದ್ದೀನಿ..ಹೇಳಿ, ಏನಾಯ್ತು?" ಎಂದ. ಸ್ವಲ್ಪ ಸಮಾಧಾನ ತಂದುಕೊಂಡ ಮೇಷ್ಟ್ರು "ನಿಮ್ಮ ಮನೆಯಲ್ಲಿ ಒಂದು ನಾಲ್ಕು ದಿನ ಇರುಕ್ಕೆ ಅವಕಾಶ ಕೊಡ್ತೀಯಾ?" ಎಂದರು. ಸದಾಶಿವ ತಟ್ಟನೆ ಹೊಳೆದಂತೆ.. "ಅಂದರೆ.. ಅಯ್ಯೋ ದೇವರೆ! ನಿಮ್ಮ ಏರಿಯಾದಲ್ಲಿ ಶುರು ಮಾಡಿದರಾ?" ಎಂದು ಕೇಳಿದ. ಉಕ್ಕಿ ಬರುತ್ತಿದ್ದ ದುಃಖವನ್ನು ಪ್ರಯತ್ನಪೂರ್ವಕವಾಗಿ ಹತ್ತಿಕ್ಕಿ ಉತ್ತರಿಸಿದರು "ಹೌದಪ್ಪಾ.. ಅದಕ್ಕೆ ಈಗ ಉಟ್ಟ ಬಟ್ಟೇಲಿ ರಸ್ತೆಯಲ್ಲಿ ನಿಂತಿದ್ದೀವಿ" ಎಂದರು. ಸದಾಶಿವ "ಮೇಷ್ಟ್ರೆ, ನಾನೀಗಲೇ ಬರ್ತೀನಿ, ನೀವು ಏನೂ ಯೋಚನೆ ಮಾಡಬೇಡಿ, ನನ್ನ ಫ್ರೆಂಡ್ ಒಬ್ಬಂದು ಟೆಂಪೊ ಇದೆ ಅದನ್ನು ತಗೊಂಡು ಬರ್ತೀನಿ.. ಎಲ್ಲಾ ಸಾಮಾನು ತಗೊಂಡು ಬರುವ.." ಎಂದ.

ಪ್ರಕಾಶ ಮೇಷ್ಟ್ರಿಗೆ ಆಗಷ್ಟೆ ನಿವೃತ್ತಿಯಾಗಿತ್ತು. ಮಗ ಸತೀಶ ಬಿಎಸ್ಎಫ್ ಗೆ ಇನ್ಸ್ ಪೆಕ್ಟರ್ ಆಗಿ ಸೇರಿ, ಮಗಳಿಗೆ ಚಿತ್ರದುರ್ಗದ ವರನ ಜತೆ ಲಗ್ನ ಗೊತ್ತಾಗಿತ್ತು. ಯಾವಾಗಲೋ ಊರಾಚೆ ಕೊಂಡಿಟ್ಟಿದ್ದ ರೆವಿನ್ಯೂ ಸೈಟಿನಲ್ಲಿ ಮನೆ ಕಟ್ಟಿಸುವ ಅಂದಾಜು ಬಂದದ್ದು ಆಗಲೇ. ಅಲ್ಲಿ ಇಲ್ಲಿ ಸಾಲ ಸೋಲ ಮಾಡಿ, ಮನೆ ಕಟ್ಟಿ ಗೃಹಪ್ರವೇಶ ಮಾಡುವ ಹೊತ್ತಿಗೆ, ತೇಲುಗಣ್ಣು ಮೇಲುಗಣ್ಣಾಗುವಂತೆ ಆಗಿತ್ತು. ಲಕ್ಷ್ಮಿಯ ಮದುವೆಗೆ ಕೂಡಿಟ್ಟಿದ್ದ ಹಣಕ್ಕೇ, ಸದ್ಯ, ಕೈಹಾಕಲಿಲ್ಲವಾದ್ದರಿಂದ ಅವಳ ಮದುವೆ ಸುಗಮವಾಗಿ ನಡೆಯಿತು. ಮನೆ ಬದಲಾಯಿಸಿದ ಆರು ತಿಂಗಳಿಗೆ 'ಟಿಬಿ ಮೆನಿಂಜೈಟಿಸ್' ಎಂಬ ಕಾಯಿಲೆ ಆಗಿ ಪದ್ಮಾವತಿಗೆ ಬಲಗೈ ಬಲಗಾಲು ಸ್ವಾಧೀನ ತಪ್ಪಿ, ಮಾತು ನಿಂತುಹೋಗಿತ್ತು. ಒಂದು ಎರಡು ಎಲ್ಲವೂ ಮಲಗಿದಲ್ಲೇ ನಡೆಯುವಂತಹ ಸ್ಥಿತಿಯಲ್ಲಿ, ಕನಿಷ್ಠ ಸ್ವಂತ ಮನೆಯಲ್ಲಿರುವ ನೆಮ್ಮದಿಯಾದರೂ ಇತ್ತು. ಒಂದು ಕಡೆ ಹೆಂಡತಿಗೆ ಆದ ಅನಾರೋಗ್ಯ ಬಾಧಿಸುತ್ತಿದ್ದರೂ, ಅವಳು ಇನ್ನೂ ಬದುಕಿದ್ದಾಳಲ್ಲ ಎಂಬ ಸಮಾಧಾನ ಇತ್ತು. ಜತೆಗೆ, ಮುಪ್ಪಿನ ದಿನಗಳಲ್ಲಿ ಇನ್ನೊಬ್ಬರ ಅಥವಾ ಮಕ್ಕಳ ಮನೆಗೆ ಹೋಗಿ ಇರಬೇಕಾದ ಅಗತ್ಯವೂ ಇಲ್ಲದೆ ನೆಮ್ಮದಿಯಿಂದ ಇರಲು ಮನೆಯಿದೆ ಎಂದೇ ಕಾಲ ಹಾಕುತ್ತಿದ್ದರು. ಅವರ ಶಿಷ್ಯ ಹಾಗೂ ವಾವೆಯಲ್ಲಿ ಸೋದರಳಿಯನಾದ ಸದಾಶಿವ ಇದೇ ಊರಲ್ಲಿ ಸಣ್ಣ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿದ್ದು, ಅವನ ಹೆಂಡತಿ ಗೌರಿ, ತುಂಬ ಒಳ್ಳೆಯ ಹುಡುಗಿ, ಮಧ್ಯಾಹ್ನ ಬಂದು ಒಮ್ಮೆ ಪದ್ಮಾವತಿಗೆ ಊಟ ಮಾಡಿಸಿ ಹೋಗಲು ಒಪ್ಪಿದ್ದರಿಂದ, ಹೇಗೋ ಕಾಲ ಹೋಗುತ್ತಿತ್ತು.

ಹೆಸರಿಗೆ ಪಟ್ಟಣವಾದರೂ, ಊರಾಚೆ ಇದ್ದುದರಿಂದ ಮತ್ತು ರೆವಿನ್ಯೂ ಸೈಟಿನ ಮನೆಯಾದ್ದರಿಂದ ಎಲ್ಲಕ್ಕೂ ತತ್ವಾರ, ಬಸ್ಸು ಕೂಡ ಒಂದು ಕಿಲೋಮೀಟರ್ ಆಚೆ ಇದ್ದ ಕುವೆಂಪುನಗರದ ಸರ್ಕಲ್ ನಲ್ಲಿ ನಿಲ್ಲುತ್ತಿತ್ತು. ಕಚ್ಚಾರಸ್ತೆಯಲ್ಲಿ ಸೈಕಲ್ ಓಡಿಸುವುದಾಗಲೀ, ಅಥವಾ ಟೂ ವೀಲರ್ ಓಡಿಸುವುದಾಗಲೀ ನೈಪುಣ್ಯದ ವಿಷಯ. ಹೀಗಿದ್ದರೂ, ಹತ್ತಿರ ಹತ್ತಿರ ಐವತ್ತು ಕುಟುಂಬಗಳು ಆಗಲೇ ಒಕ್ಕಲಿದ್ದವು. ಸೈಟು ಮಾಡಿಸಿದವರ ದುರಾಸೆಯೋ, ಅಥವಾ ಅಸಂಬದ್ಧ ಯೋಜನೆಯೋ, ಬೀದಿಗಳು ಇಕ್ಕಟ್ಟಾಗಿಯೂ, ಎಡ್ಡ ತಿಡ್ಡ ಅಳತೆಯ ನಿವೇಶನಗಳೂ ಇದ್ದವು. ಬೀದಿ ದೀಪಗಳಿಲ್ಲದೆ, ಕತ್ತಲಾದ ನಂತರ ಹೊರಗೆ ಓಡಾಡುವುದಕ್ಕೆ ಟಾರ್ಚ್ ಆಬಾಲವೃದ್ಧರ ಕೈಲೂ ಇರುತ್ತಿತ್ತು. ಸಾಲದ್ದಕ್ಕೆ ಬೀದಿನಾಯಿಗಳೂ ಈ ಅಯೋಮಯ ಸ್ಥಿತಿಗೆ ತಮ್ಮ ಕೊಡುಗೆ ನೀಡುತ್ತಿದ್ದವು. ಹೆಚ್ಚಿನ ಮನೆಗಳಲ್ಲಿ 'ಪಿಟ್' ವ್ಯವಸ್ಥೆಯ ಶೌಚಾಲಯಗಳಿದ್ದರೂ, ಬಹುತೇಕ ಮಕ್ಕಳು ಮರಿ ರಸ್ತೆಯಲ್ಲಿ ಕಕ್ಕ ಮಾಡುತ್ತಿದ್ದದ್ದೂ ಅನಿವಾರ್ಯವಾಗಿತ್ತು. ಇನ್ನು ಮಳೆಗಾಲದಲ್ಲಂತೂ ದೇವರಿಗೇ ಪ್ರೀತಿ, ಯಾವುದೇ 'ಸ್ಟಾರ್ಮ್ ಡ್ರೇನ್' ವ್ಯವಸ್ಥೆಯಿಲ್ಲದೆ ನೀರು ನಿಂತು ಹಲವು ದಿನಗಳ ತನಕ ರಸ್ತೆಗಳು ಕೆಸರುಮಯವಾಗಿರುತ್ತಿದ್ದವು. ನಗರಾಭಿವೃದ್ಧಿ ಮಂಡಳಿ ಈ ಏರಿಯಾವನ್ನು ನಗರಸಭೆಗೆ ಸೇರಿಸಿದಾಗ ಎಲ್ಲ ಸರಿಯಾಗುತ್ತದೆ ಎಂಬ ಆಸೆ ಹೊತ್ತು ಎಲ್ಲ ಮನೆಗಳೂ ತಮ್ಮ ಶಕ್ತ್ಯಾನುಸಾರ ಬೆಳೆದಿದ್ದವು. ಕೆಲವರಂತೂ ಧೈರ್ಯ ಮಾಡಿ, ಮಹಡಿ ಮನೆಗಳನ್ನೂ ಕಟ್ಟಿದ್ದರು.

ನಾಲ್ಕು ತಿಂಗಳ ಕೆಳಗೆ ಅಳಿಯ ಫೋನ್ ಮಾಡಿ ಮಗಳನ್ನು ಹೆರಿಗೆಗೆ ಕಳಿಸಿಕೊಡುವುದಾಗಿ ಹೇಳಿದಾಗ ಮೇಷ್ಟರಿಗೆ ಸಂತೋಷವೇ ಆಗಿತ್ತು. ಮೊದಲ ಹೆರಿಗೆ, ತಾಯಿ ಇದ್ದೂ ಇಲ್ಲದ ಹುಡುಗಿಯಂತೆ ಆದ ಮಗಳಿಗೆ ಯಾವುದೇ ಕೊರತೆ ಬಾರದಂತೆ ಊರಿನಿಂದ ತನ್ನ ಹಿರಿಯತ್ತೆಯನ್ನು ಕರೆಸಿ ಮುತುವರ್ಜಿಯನ್ನು ಪ್ರಕಾಶ್ ಮೇಷ್ಟ್ರು ವಹಿಸಿದರು.

ಎರಡು ಮೂರುವಾರದ ನಂತರ ಅವರು ಮರಳಿ ಹೊರಡುವ ಮೊದಲು "ಹದಿನೈದು ದಿನಗಳಲ್ಲಿ ಉತ್ತರ ಕೊಡುವಂತೆ" ನಗರಾಭಿವೃದ್ಧಿ ಮಂಡಳಿಯಿಂದ ಒಂದು ನೋಟಿಸ್ ಬಂತು. ಅದರ ಒಕ್ಕಣೆ ನಿಮ್ಮ ಮನೆಯಿರುವ ಸದರಿ ನಿವೇಶನ ನಗರಾಭಿವೃದ್ಧಿ ಮಂಡಳಿಯ ನಿಯಮಗಳಿಗೆ ಅನುಸಾರವಾಗಿ ನಿರ್ಮಾಣವಾಗಿಲ್ಲ. ಆದ್ದರಿಂದ ಅದು ಅಕ್ರಮ ನಿವೇಶನ, ಹೀಗಾಗಿ ಸಕ್ರಮಗಳಿಸಲು ದಂಡ ಕಟ್ಟಬೇಕು. ಇಲ್ಲದಿದ್ದರೆ ಮನೆಯನ್ನು ಅಕ್ರಮ ಕಟ್ಟಡವೆಂದು ಪರಿಗಣಿಸಿ ಕೆಡವಲಾಗುತ್ತದೆ. ಇದನ್ನು ಓದಿ ಮೇಷ್ಟರು ಆಚೀಚೆ ಎಲ್ಲ ಮನೆಗಳಿಗೂ ಅದೇ ನೋಟಿಸ್ ಬಂದಿದೆಯೆಂದು ತಿಳಿದ ನಂತರ, "ನೋಡಿಕೊಳ್ಳೋಣಾ.. ಎಲ್ಲರಿಗೂ ಆದದ್ದೇ ನಮಗೂ ಆಗತ್ತೆ.." ಎಂಬ ಭಂಡ ಧೈರ್ಯ ತಂದುಕೊಂಡಿದ್ದರು. ಒಂದಿಬ್ಬರು ಕೋರ್ಟು, ಇಂಜಂಕ್ಷನ್ನು, ಸ್ಟೇ, ಕೇಸೆಂದು ಮಾತು ತೆಗೆದಾಗ ಅದು ಅರ್ಥವಾಗುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. "ನಗರಸಭೆಗೆ ಎಂದೋ ಸೇರಬೇಕಿದ್ದ ಜಾಗ.. ಇವತ್ತಲ್ಲಾ ನಾಳೆ ಸೇರಿಸಿಕೊಳ್ತಾರೆ.. ಅದಕ್ಕೆ ನಾವು ಯಾಕೆ ಕೋರ್ಟು ಕಚೇರಿ ಅಂತ ಗುದ್ದಾಡಬೇಕು" ಎಂದು ಯೋಚಿಸಿದವರೇ ಹೆಚ್ಚು ಮಂದಿ. ಹಾಗೂ ಹತ್ತಿಪ್ಪತ್ತು ಮಂದಿ ಯಾವುದೋ ವಕೀಲರನ್ನು ಕಂಡು ಬರಲು ಹೊರಟಾಗ, ಪಕ್ಕದ ಮನೆಯ ನೀಲಕಂಠ ಮೂರ್ತಿಗಳಿಗೆ ಪ್ರಕಾಶ ಮೇಷ್ಟ್ರೂ ಒಂದೈನೂರು ಹಾಕಿ "ನನ್ನದೂ ಹೆಸರು ಕೊಡಿ" ಎಂದಿದ್ದರು. ಮನೆಯಲ್ಲಿ ಕೈತುಂಬಾ ಕೆಲಸಗಳನ್ನು ಇಟ್ಟುಕೊಂಡು ವಕೀಲರ ಕಚೇರಿ, ಕೋರ್ಟು ಸುತ್ತುವುದಕ್ಕೆ ಅವರಿಗೂ ಕಷ್ಟ ಎಂದು ನೀಲಕಂಠ ಮೂರ್ತಿ "ಆಗಲಿ" ಎಂದಿದ್ದರು.

ಆದರೆ ಆಡಳಿತ ಇಷ್ಟು ತ್ವರಿತಗತಿಯಲ್ಲಿ ಕೆಲಸ ಮಾಡುತ್ತದೆ ಅಂತ ಯಾರೂ ಊಹಿಸಿರಲಿಲ್ಲ. ಹಿಂದಿನ ಸಾಯಂಕಾಲ ಸರ್ಕಲ್ಲಿನ ಕಡೆಯಿಂದ ಎರಡು ಜೆಸಿಬಿ ಯಂತ್ರಗಳೂ, ಒಂದು ಬುಲ್ ಡೋಜರೂ ಬಂದಾಗ ಎಲ್ಲರೂ ಅಂದು ಕೊಂಡಿದ್ದು ರಸ್ತೆ ಅಗಲ ಮಾಡಲಿಕ್ಕೋ, ಅಥವಾ ಇಲ್ಲಿ ನೀಲನಕ್ಷೆಯ ಪ್ರಕಾರ ಹೋಗಬೇಕಿದ್ದ ದೊಡ್ಡ ಮೋರಿ ತೋಡಲೋ ಬಂದ ಯಂತ್ರಗಳು ಅಂದುಕೊಂಡು ಎಲ್ಲರೂ ಸುಮ್ಮನಿದ್ದರು. ಕತ್ತಲಾದ ನಂತರ ಆ ಯಂತ್ರಗಳ ಹತ್ತಿರ ಯಾರೂ ಇಲ್ಲದೆ ಹೋದದ್ದೂ ಜನರಿಗೆ ಪ್ರಶ್ನೆ ಕೇಳಲಿಕ್ಕೆ ಅವಕಾಶವಾಗಲಿಲ್ಲ. ಭಾನುವಾರವಾದ್ದರಿಂದ ಬೆಳಗಾದ ನಂತರ, ಇನ್ನೂ ಎಲ್ಲರೂ ತಮ್ಮ ತಮ್ಮ ರಜಾದಿನದ ಮೂಡಿನಲ್ಲಿರುವಾಗಲೇ, ನಗರಾಭಿವೃದ್ಧಿ ಮಂಡಳಿಯ ಮುಖ್ಯ ಆಫೀಸರೂ, ಮತ್ತು ಸಶಸ್ತ್ರ ಪೋಲಿಸ್ ಸಿಬ್ಬಂದಿಯೂ ಬಂದು ಎಲ್ಲರಿಗೂ ಈ ಮನೆಗಳನ್ನು ಕೆಡವಲಿದೆಯೆಂದು ಹೇಳಿದಾಗ, ಒಮ್ಮೆಲೇ, ಜೇನುಗೂಡಿಗೆ ಕಲ್ಲೆಸೆದಂತಾಯಿತು. ಕೆಲವು ಬಿಸಿರಕ್ತದ ತರುಣರು, ಕಲ್ಲೆಸೆಯಲು ಮುಂದಾದರೂ, ಕೈಯಲ್ಲಿ ಬಂದೂಕು ಹಿಡಿದ ಪೋಲಿಸ್ ಪಡೆ ನೋಡಿ, ಹೆಚ್ಚಿನ ಜನರಿಗೆ ಬೆವರಿಳಿಯಿತು.

ಯಂತ್ರ ನಡೆಸುವವರ ಕಣ್ತಪ್ಪಿನಿಂದಲೋ, ಅಥವಾ ಸೈಟುಗಳ ಅಂದಾಜಿಲ್ಲದೆಯೋ, ಒಂದೆರಡು ಮನೆಗಳಿಗೆ ಅಂತ ಹೇಳಿಕೊಳ್ಳುವ ಹಾನಿಯೇನೂ ಆಗಿರಲಿಲ್ಲ. ಅವರ ಮನೆಯಲ್ಲಿ ಅತ್ತು ಅತ್ತು ಸುಸ್ತಾಗಿದ್ದ ಹೆಂಗಸರು, ಮಕ್ಕಳು, ಮತ್ತು ಕೆಲವು ಕೈಲಾಗದ ವೃದ್ಧರನ್ನು ಕೂಡಿಸಿ, ಮನೆಯ ಯಜಮಾನರೆನ್ನಿಸಿಕೊಳ್ಳುವ ಎಲ್ಲರೂ ಕಾಲೋನಿಯ ಅಂಚಿನಲ್ಲಿದ್ದ ಅರಳಿ ಮರದ ಕೆಳಗೆ ಸೇರಿದರು. ಯಾರೋ ಹೋಗಿ ವಕೀಲರನ್ನು ಕರೆದು ತಂದರು. ಸದಾಶಿವ ಮತ್ತು ಗೌರಿಯ ದಾರಿ ಕಾಯುತ್ತಿದ್ದ ಪ್ರಕಾಶ ಮೇಷ್ಟ್ರು, ಲಿಂಗಯ್ಯ ಮತ್ತು ನೀಲಕಂಠ ಮೂರ್ತಿಗಳಿಗೆ "ನೀವು ಹೋಗಿ, ನಾನು ಇವಳಿಗೆ ಏನಾದರೂ ವ್ಯವಸ್ಥೆ ಮಾಡಿ ಬರುತ್ತೇನೆ" ಎಂದರು. ಲಕ್ಷ್ಮಿ ಅಮ್ಮನ ಹತ್ತಿರವೇ ಕುಳಿತಿದ್ದು, ಅವಳ ಮಗು ಮತ್ತೊಮ್ಮೆ ನಿದ್ದೆಗೆ ಜಾರಿತ್ತು. ಬಿಳಿಚಿಕೊಂಡ ಅವಳ ಮುಖದಲ್ಲಿ ಕಂಬನಿ ಒಣಗಿದ ಕರೆಯಿತ್ತು.
ಸದಾಶಿವ ತರಾತುರಿಯಲ್ಲಿ ಟೆಂಪೋವೊಂದರಲ್ಲಿ ತನ್ನೊಬ್ಬ ಸ್ನೇಹಿತನನ್ನೂ ಕರೆದು ತಂದ. ಹಿಂದೆ ಆಟೋ ಒಂದರಲ್ಲಿ ಬಂದ ಗೌರಿಯನ್ನು ಕಂಡು ಲಕ್ಷ್ಮಿಗೆ ಕೊಂಚ ತಡೆಹಿಡಿದಿದ್ದ ದುಃಖ ಮತ್ತೊಮ್ಮೆ ಕಟ್ಟೆ ಒಡೆದಂತೆ ಹರಿಯಿತು. "ನೋಡಿ ಅಕ್ಕಾ, ಹೇಗಾಗಿಹೋಯಿತು.. ಮನೆ.." ಎಂದು ಬಿಕ್ಕಿ ಬಿಕ್ಕಿ ಅತ್ತಳು. ಗೌರಿಯ ಕಣ್ಣಲ್ಲೂ ನೀರು ತುಂಬತೊಡಗಿತು. ಸದಾಶಿವ ಮತ್ತವನ ಗೆಳೆಯ ಮೇಷ್ಟ್ರನ್ನು ಯಾವ ಸಾಮಾನುಗಳನ್ನು ಸಾಗಿಸಬೇಕೆಂದು ವಿಚಾರಿಸಲು ಪ್ರಾರಂಭಿಸಿದರು. ಗೌರಿಯ ಗುರುತು ಹತ್ತಿದ ಪದ್ಮಾವತಿಗೆ ಅವಳು ಮತ್ತು ಮಗಳು ಅಳುತ್ತಿರುವುದನ್ನು ಕಂಡು ಅದೇನು ತೋಚಿತೋ, "ಏ ..ಏ.." ಎಂದು ಕಣ್ಣೀರು ಹಾಕತೊಡಗಿದರು.

ನಿವೃತ್ತಿಯ ನಂತರ ಪಿಂಚಿಣಿ ಹಣವಷ್ಟೇ ಮನೆ ನಡೆಸಲು, ಮತ್ತು ಪದ್ಮಾವತಿಯ ಔಷಧೋಪಚಾರದ ಖರ್ಚನ್ನು ಭರಿಸಲು ಸಾಧ್ಯವಿಲ್ಲ ಎಂದು, ಪ್ರಕಾಶ್ ಮೇಷ್ಟರು ಬಟ್ಟೆಯ ಮಾರಾಟ ಪ್ರಾರಂಭಿಸಿದ್ದರು. ಪೇಟೆಯ ಸರ್ಕಲ್ ನಲ್ಲಿ ಇದ್ದ ಬಟ್ಟೆ ಅಂಗಡಿಯ ಸೋಮನ ಹತ್ತಿರ ಕಟ್ ಪೀಸುಗಳನ್ನು ತಂದು, ಸೈಕಲ್ ಕ್ಯಾರಿಯರ್ ಗೆ ಒಂದು ಲೋಡು ಬಟ್ಟೆ ಪೇರಿಸಿಕೊಂಡು ಪದ್ಮಾವತಿಗೆ ಗೌರಿ ಊಟ ಮಾಡಿಸುವ ಹೊತ್ತಿಗೆ ಒಂದು ಐದು, ಆರು ಪ್ಯಾಂಟ್ ಪೀಸುಗಳು, ಇಲ್ಲವೇ ಷರಟು ಪೀಸುಗಳನ್ನು ಹತ್ತಿರದ ಹಳ್ಳಿಗಳಲ್ಲಿ ಇಲ್ಲವೆ ಅದೇ ಕಾಲೊನಿಯಲ್ಲಿ ಮಾರಿ ಬರುತ್ತಿದ್ದರು. ಆ ಬಟ್ಟೆಯ ಲೋಡನ್ನು ಜೋಪಾನವಾಗಿ ಮೊದಲು ಟೆಂಪೋದಲ್ಲಿ ಪ್ರಕಾಶ್ ಮೇಷ್ಟರು ಇಟ್ಟರು. ಹೆಚ್ಚಿನ ಸಾಮಾನೇನೂ ಇರದಿದ್ದರೂ, ಗಾಜಿನ, ಪಿಂಗಾಣಿಯ, ಪಾತ್ರೆಗಳನ್ನು, ಜತೆಯಲ್ಲಿ ಮಗನ ಎನ್ ಸಿ ಸಿ ಯ ಫೋಟೊಗಳು, ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಳಿಸಿದ ಟ್ರೋಫಿಗಳನ್ನು ಇಟ್ಟಿದ್ದ ಶೋ ಕೇಸಿಗೆ ಪೆಟ್ಟಾಗದೇ ಉಳಿದಿದ್ದರಿಂದ ಅವುಗಳನ್ನು ಪ್ಯಾಕ್ ಮಾಡುವಾಗ ಸ್ವಲ್ಪ ಸಮಯ ಹಿಡಿಯಿತು. ಅಳಿದುಳಿದ ಎಲ್ಲ ಸಾಮಗ್ರಿಗಳನ್ನು ಟೆಂಪೊ ಹಿಂದೆ ಹಾಕಿ, ಪದ್ಮಾವತಮ್ಮನವರನ್ನು ಆರಾಮಕುರ್ಚಿಯ ಸಮೇತ ಟೆಂಪೊದಲ್ಲೇ ಇರಿಸಿದರು. ಆಟೊದಲ್ಲಿ ಕೈಲಿ ಹಿಡಿದುಕೊಳ್ಳುವ ಬಟ್ಟೆಗಳನ್ನೂ ಮತ್ತು ಮಗುವನ್ನು ಕರೆದುಕೊಂಡು ಲಕ್ಷ್ಮಿಯೂ, ಪದ್ಮಾವತಮ್ಮನವರ ಜತೆಗೆ ಟೆಂಪೋದಲ್ಲಿ ಗೌರಿಯೂ ಹೋಗುವುದೆಂದಾಯಿತು. ಸದಾಶಿವ "ಮೇಷ್ಟ್ರೆ, ನಮ್ಮ ಪಕ್ಕದ ಮನೆಯವರ ಮಹಡಿಯಲ್ಲಿ ಒಂದು ರೂಮ್ ಖಾಲಿ ಇದೆ. ಅವರಜತೆ ಮಾತಾಡಿದ್ದೀನಿ, ಎರಡು ಮೂರು ತಿಂಗಳಿಗೆ ಬಾಡಿಗೆಗೆ ಕೊಡೋದಕ್ಕೆ ತೊಂದರೆ ಇಲ್ಲ ಅಂದಿದ್ದಾರೆ. ಇವತ್ತು ರಾತ್ರಿಗೆ ಅಡಿಗೆ ಮಾಡೋದೇನೂ ಬೇಡಾ. ಲಕ್ಷ್ಮಿ ಮತ್ತು ಮಗು ಎರಡು ದಿನ ನಮ್ಮನೇಲಿ ಇರಲಿ.." ಎಂದ.

ಅದುವರೆಗೆ ಕನಸಿನಲ್ಲಿ ನಡೆಯುತ್ತಿದ್ದಂತೆ ಇದ್ದ ಪ್ರಕಾಶ್ ಮೇಷ್ಟರಿಗೆ ವರ್ತಮಾನದ ಅರಿವಾಗಿ ಕಣ್ಣು ತುಂಬಿ ಬಂತು. "ನೀನೇ ನನ್ನ ಹಿರಿ ಮಗ ಅಂತ ತಿಳಕೊಳ್ತೀನಪ್ಪ.. ಇಂಥಾ ಪರಿಸ್ಥಿತಿ ಬರುತ್ತೆ ಅಂತ ಕನಸುಮನಸಿನಲ್ಲೂ ಯೋಚಿಸಿರಲಿಲ್ಲ.." ಮತ್ತೇನೂ ಹೇಳಲಾರದೆ ಗದ್ಗದಿತರಾದರು. ಅವರೂ ಟೆಂಪೋ ಏರಲು ಬಂದಾಗ ಸದಾಶಿವ "ಮೇಷ್ಟರೆ ನೀವು ಮೀಟಿಂಗಿಗೆ ಹೋಗಿಬನ್ನಿ..ನೀವಿದ್ದರೆ ನಿಮಗೆ ಏನು ನಡೆಯುತ್ತಿದೆ ಅಂತ ತಿಳಿಯುತ್ತದೆ..ನಾವೆಲ್ಲ ನೋಡಿಕೊಳ್ತೀವಿ.." ಎಂದ. ಹೌದೆನ್ನಿಸಿ ಅರಳಿಕಟ್ಟೆಯ ಕಡೆ ಮೇಷ್ಟ್ರು ಸೈಕಲ್ ಓಡಿಸಿದರು.

ದಾರಿಯುದ್ದಕ್ಕೂ ಬಿದ್ದ ಮನೆಗಳಿಂದ ಅಳಿದುಳಿದ ಉಪಯುಕ್ತ ಸಾಮಾನುಗಳನ್ನು ಹೆಕ್ಕುವ ಕಾಲೊನಿಯ ಜನತೆ, ನಡೆದ ಘಟನೆಗಳನ್ನು ಇನ್ನೂ ನಂಬಲಾಗದೆ ಅಳುತ್ತಿದ್ದ ಹೆಂಗಳೆಯರು, ನಡೆದ ಘಟನೆಗಳಿಗೆ ಮೂಕ ಪ್ರೇಕ್ಷಕರಾದ ಹತ್ತಿರದ ದಾರಿಹೋಕರು, ಇವರನ್ನೆಲ್ಲ ದಾಟಿ, ಪ್ರಕಾಶ್ ಮೇಷ್ಟರು ಅರಳಿಕಟ್ಟೆ ತಲುಪಿದರು. ಅದಾವ ಮಾಯದಲ್ಲಿ ರಾಜಕೀಯದವರಿಗೂ ಇದರ ವಾಸನೆ ಹತ್ತಿತ್ತೋ, ವಕೀಲರಿಗೆ ಹಾಕಿದ್ದ ಕುರ್ಚಿಯಲ್ಲಿ ಇತ್ತೀಚೆಗಷ್ಟೇ ವಿಶ್ವವಿದ್ಯಾಲಯದ ಸಿಂಡಿಕೇಟ್ ಗೆ ಸ್ಪರ್ಧಿಸಿ ಪ್ರೊ ತಾರಾನಾಥರನ್ನು ಸೋಲಿಸಿದ್ದ ವಿಜಯಪ್ರಕಾಶ್ ಮತ್ತೊಂದು ಕುರ್ಚಿಯಲ್ಲಿ ದಳದ ನರಸೇಗೌಡರು ಇಬ್ಬರೂ ಕುಳಿತಿದ್ದಿದ್ದು ಸಭೆ ಸಮೀಪಿಸುತ್ತಿದ್ದ ಪ್ರಕಾಶ್ ಮೇಷ್ಟರಿಗೆ ಕಾಣಿಸಿತು. ಲಾಯರು ಜಯದತ್ತ ನಗರಸಭೆಯ ಯಾವ ಕಾನೂನಿನ ಪ್ರಕಾರ ಅದು ಸಕ್ರಮ ಸೈಟುಗಳಲ್ಲವೆಂಬುದನ್ನು ಹೇಳುತ್ತಿದ್ದರು.

ಅವರು ಹೇಳುವುದನ್ನು ಕೇಳಿದ ನಂತರ ತುಸು ದೂರದಲ್ಲಿ ಕಟ್ಟೆಯ ಮೆಟ್ಟಲಿನ ಹತ್ತಿರ ಕುಳಿತಿದ್ದ ಕೆಲವು ಯುವಕರು "ಅದ್ಯಾವ ಕಾನೂನು ಸಾರ್.. ಈಗ ಉರುಳಿಸಿದ ಮನೆಗಳಿಗೆ ಯಾರು ಪರಿಹಾರ ಕೊಡ್ತಾರೆ?" ಎಂದು ಸಿಟ್ಟಿನಿಂದ ಕೇಳಿದರು. ಈ ಪ್ರಶ್ನೆಯಿಂದ ಸ್ವಲ್ಪವೂ ವಿಚಲಿತರಾಗದೆ ಜಯದತ್ತರು "ನೋಡಿ, ನೀವು ಈ ಪ್ರಶ್ನೆಯನ್ನು ನನಗೆ ಕೇಳುವುದರಿಂದ ಪ್ರಯೋಜನ ಇಲ್ಲ.. ನಾಳೆ ನಗರಾಭಿವೃದ್ಧಿ ಮಂಡಲಿ ನಿರ್ದೇಶಕರನ್ನು ನೋಡಕ್ಕೆ ಹೋದಾಗಲೂ ಇದಕ್ಕೆ ಪರಿಹಾರ ಸಿಗುವ ಗ್ಯಾರಂಟಿ ಕೂಡಾ ಇಲ್ಲ.. ಇದಕ್ಕೆ ನೀವು ನಿಮ್ಮ ಶಾಸಕರಿಗೆ, ಸ್ಥಳೀಯ ಲೋಕಸಭಾ ಸದಸ್ಯರಿಗೆ, ಮತ್ತು ಮುಖ್ಯಮಂತ್ರಿಗಳಿಗೆ ಒಂದು ಮನವಿ ಕೊಡುವ ಕೆಲಸ ಮಾಡಬೇಕಾಗುತ್ತದೆ.." ಎಂದರು.

ಇದನ್ನೇ ಕಾಯುತ್ತಿದ್ದ ವಿಜಯಪ್ರಕಾಶ ಬಾಯಿ ಹಾಕಿ "ಅಂದರೆ ನೀವು ಹೇಳುವುದು ಕೈ ಪಾರ್ಟಿಯವರನ್ನ ನೋಡಿ ಬನ್ನಿ ಅಂತಲಾ.. ಅದಕ್ಕೇ ನಾನು ಹೇಳುವುದು.. ಅವರ ಕೈಲಿ ಏನೂ ಸಾಗಲ್ಲ ಅಂತ.. ಅವರ ಪಾರ್ಟಿಯವರೇ ಮಂಡಳಿ ಅಧ್ಯಕ್ಷರೂ ಆಗಿದ್ದಾರೆ.. ನಿಮಗೆ ನ್ಯಾಯ ಸಿಗೋದು ಇನ್ನು ದೂರದ ಮಾತೇ ಬಿಡಿ.." ಅಂದ. ಜಯದತ್ತರು ಅವನ ಕಡೆ ಒಮ್ಮೆ ಅಸಮಾಧಾನದಿಂದ ನೋಡಿ ಸಭೆಗೆ ಹೇಳಿದರು.."ನೋಡಿ, ಕಾನೂನಿನ ಪ್ರಕಾರ ಏನು ಮಾಡಬಹುದು ಅಂತ ನಾನು ಹೇಳಲಿಕ್ಕೆ ಬಂದಿದ್ದೀನಿ, ಮೊಟ್ಟ ಮೊದಲನೆಯದಾಗಿ ಇದು ರೆವಿನ್ಯೂ ನಿವೇಶನಗಳ ಬಡಾವಣೆ. ಇದನ್ನ ನಗರಸಭೆ ಅಕ್ರಮ ನಿವೇಶನಗಳು ಅಂತ ನಿರ್ಣಯಿಸುವುದಕ್ಕೆ ಅವರ ಹತ್ತಿರ ಕಾನೂನಿನ ನಿಯಮಾವಳಿ ಇದೆ. ಕೃಷಿಭೂಮಿಯಾಗಿದ್ದ ಇದನ್ನ ನಿವೇಶನಗಳಾಗಿ, ವಸತಿಯೋಗ್ಯ ಅಂತ ಮಾಡಬೇಕಾದರೆ ಇರುವ ನಿಯಮಾವಳಿಗಳನ್ನ ಪಾಲಿಸಲಿಲ್ಲ ಅಂತ ನಿವೇಶನ ಹಂಚಿದವರ ಮೇಲೆ ಕ್ರಮ ಕೈಗೊಳ್ಳಬಹುದು.."

ಇದನ್ನು ಕೇಳಿ ನರಸೇಗೌಡರ ಮುಖ ವಿವರ್ಣವಾಯಿತು.. ಏಕೆಂದರೆ ಬಡಾವಣೆ ನಿರ್ಮಿಸಿದ್ದು ಅವರ ದಾಯಾದಿಗಳೇ ಆದ ಮರಿತಿಮ್ಮೇಗೌಡರು." ಆದರೆ ಅದರಿಂದ ಹೆಚ್ಚಿನ ಪ್ರಯೋಜನವಿಲ್ಲ.. ಯಾಕೆಂದರೆ, ಅವರ ಹತ್ತಿರ ನಿಮಗೆ ಕಿಲುಬು ಕಾಸೂ ಹತ್ತುವುದಿಲ್ಲ.. ಈಗ ಇರುವ ಆಯ್ಕೆ ಅಂದರೆ ನಿಮಗೆ ಈ ತನಕ ಆಗಿರುವ ನಷ್ಟ ಮೀರಿ ಇನ್ನೇನೂ ಆಗದ ಹಾಗೆ ನೋಡಿಕೊಳ್ಳುವುದು ಮುಖ್ಯ.." ವಿಜಯಪ್ರಕಾಶ ಮತ್ತೆ ಬಾಯಿ ಹಾಕಿದ "ಅದು ಹೇಗೆ ಇದನ್ನ ಅಕ್ರಮ ಅಂತ ನಿರ್ಣಯಿಸಿದರು ಸಾರ್.. ನಾವ್ಯಾರೂ ಓಟು ಹಾಕಲಿಲ್ಲವಾ ಕಳೆದ ಎಲೆಕ್ಷನ್ನಲ್ಲಿ? ಇಲ್ಲಿ ಅಕ್ರಮ ಬಡಾವಣೆ ಅಂದರೆ ಓಟರ್ ಲಿಸ್ಟ್ ಎಲ್ಲಿಂದ ತಂದರು..ನಾನು ಇತ್ತೀಚೆಗಷ್ಟೇ ಸಿಂಡಿಕೇಟ್ ಗೆ ಚುನಾಯಿತನಾಗಿದ್ದೀನಿ" ಕೊಂಚ ಹೆಮ್ಮೆಯಿಂದ ಹೇಳಿದ".. ನನ್ನ ಓಟರ್ ಗಳಿಗೆ ಇದೇ ವೆಂಕಟಾದ್ರಿಪುರ ಅಂತ ಅಡ್ರೆಸ್ ಹಾಕಿದರೆ ನನ್ನ ಮನವಿ ತಲುಪ್ತಾ ಇತ್ತಲ್ಲ!" ಎನ್ನುವಾಗ ಅವನ ನೋಟ ಪ್ರಕಾಶ್ ಮೇಷ್ಟರು ಮತ್ತು ನೀಲಕಂಠ ಮೂರ್ತಿಗಳ ಕಡೆ ಹರಿಯಿತು..

ಪ್ರಕಾಶ್ ಮೇಷ್ಟರಿಗೆ ತಮ್ಮೂರಿನವರಾದ ಪ್ರೊ ತಾರಾನಾಥರಿಗೆ ನೀಲಕಂಠ ಮೂರ್ತಿಗಳ ಜತೆ ಸೇರಿ ಕ್ಯಾನ್ವಾಸ್ ಮಾಡಿದ್ದು ನೆನಪಾಗಿ ಮನಸ್ಸು ಕೊಂಚ ಮುಕ್ಕಾಯಿತು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ನಮಗೆ ಸಿಗಬಹುದಾದ ಪರಿಹಾರಕ್ಕೆ ಏನಾದರೂ ತೊಂದರೆ ಮಾಡ್ತಾನಾ ಎನ್ನುವ ಭಾವನೆ ಇಬ್ಬರ ಮನಸ್ಸಿನಲ್ಲೂ ಹರಿದು ಹೋಯಿತು. ಲಾಯರು ಜಯದತ್ತರು ಮತ್ತೆ ಮಾತನಾಡಲು ಶುರು ಮಾಡಿದರು.."ನೋಡಿ, ಈಗ ಒಡೆದು ಹಾಕಿದ ಮನೆಗಳಿಗೆ ಪರಿಹಾರ ಸಿಗುವುದು ಕಷ್ಟ.. ಆದರೂ ಮನವಿ ಕೊಟ್ಟು ನೋಡುವುದರಲ್ಲಿ ನಷ್ಟವಿಲ್ಲ. ಈವತ್ತು ಸಾಯಂಕಾಲ ಯಾರಾದರೂ ಆಫೀಸಿಗೆ ಬನ್ನಿ, ನಾನು ಮನವಿಯ ಒಂದು ಡ್ರಾಫ್ಟ್ ಮಾಡಿ ಕೊಡ್ತೀನಿ. ನಾಳೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಕಳಿಸೋಣ. ಶಾಸಕರಿಗೆ ಮತ್ತು ಎಮ್ ಪಿ ಯವರಿಗೆ ಈ ರಾತ್ರೀನೇ ಒಂದು ನಿಯೋಗ ತೊಗೊಂಡು ಹೋಗಿ ಕೊಡೋಣ.." ಎಂದರು. "ನಾನು ನಿಮ್ಮ ಪರವಾಗಿ ನಿಯೋಗದಲ್ಲಿ ಬರುವುದಕ್ಕೆ ತಯಾರಿದ್ದೀನಿ, ನಮ್ಮ ಪಾರ್ಟಿಯ ಹಿರಿಯ ನಾಯಕರಿಗೆಲ್ಲ ಹೇಳಿ, ಸಾಧ್ಯವಾದರೆ ಅಸೆಂಬ್ಲಿಯಲ್ಲೂ ಚರ್ಚೆ ಮಾಡಕ್ಕೆ ಮನವಿ ಮಾಡ್ತೀನಿ" ಎಂದು ವಿಜಯ ಪ್ರಕಾಶ ಮತ್ತೊಮ್ಮೆ ಬಾಯಿ ಹಾಕಿದ. ಕೆಲವರು ಮಿಸುಕಾಡಿದರು. "ಅದೇಸರಿ.." ಎಂದು ಒಂದಿಬ್ಬರು ಬಿಸಿರಕ್ತದ ಹುಡುಗರು ಜೋರಾಗಿ ಕೂಗಿದರು.

ನೀಲಕಂಠ ಮೂರ್ತಿಗಳು ಎದ್ದು ನಿಂತುಕೊಂಡು ಮೆಲ್ಲಗೆ ಗಂಟಲು ಸರಿಮಾಡಿಕೊಂಡರು. ಅವರ ವಿದ್ಯಾರ್ಥಿ ಆಗಿರಬಹುದಾದ ವಯಸ್ಸಿನ ವಿಜಯಪ್ರಕಾಶ ಅವರ ಕಡೆ ಕೊಂಚ ಅಸಹನೆಯಿಂದ ನೋಡಿದ "ಸಾರ್ ವಿಜಯಪ್ರಕಾಶ್ ಅವರೆ.. ನಿಮ್ಮ ಸಲಹೆ ತುಂಬ ಚೆನ್ನಾಗಿದೆ, ಆದರೆ ಕಾಲೋನಿಯಲ್ಲಿ ವಾಸ ಇರೋ ಹಿರಿಯರು ಯಾರಾದರೂ ನಿಯೋಗ ತೊಗೊಂಡು ಹೋಗೋದು ಸೂಕ್ತ ಅನ್ನಿಸುತ್ತೆ.." ಎಂದರು. ತಾನು ಕಾಲೋನಿಯಲ್ಲಿ ವಾಸಕ್ಕೆ ಇಲ್ಲ ಅಂತ ಸೂಚ್ಯವಾಗಿ ಹೇಳ್ತಿದ್ದಾರೆ ಅಂತ ಅವನ ಮುಖ ಚಿಕ್ಕದಾಯಿತು. ಆದರೂ.. "ನರಸೇಗೌಡರು ಹೋಗುವುದಾದರೆ ನನ್ನ ಅಭ್ಯಂತರವಿಲ್ಲ.." ಎಂದ. ಜಯದತ್ತರೂ ಇದಕ್ಕೇ ಕಾಯುತ್ತಿದ್ದಂತೆ "ಆಗಲಿ ನರಸೇಗೌಡರೆ..ನೀವು ಮತ್ತೊಂದಿಬ್ಬರು ಈವತ್ತು ಸಾಯಂಕಾಲ ಆಫೀಸಿಗೆ ಬನ್ನಿ, ನಾನು ಅಷ್ಟು ಹೊತ್ತಿಗೆ ಎಮ್ಎಲ್ಎ ಮತ್ತು ಎಮ್ ಪಿ ಗಳ ಟೈಮ್ ಹೇಗಿದೆಯೋ ನೋಡಿ ಒಂದು ಅಪಾಯಿಂಟ್ ಮೆಂಟ್ ತಗೊಳ್ತೀನಿ" ಎಂದರು. ಸಭೆ ಬರಕಾಸ್ತಾಯಿತು.

ವಿಜಯಪ್ರಕಾಶ ಮೇಷ್ಟರ ಹತ್ತಿರ ಬಂದು "ಸತೀಶ ಹೇಗಿದ್ದಾನೆ ಮೇಷ್ಟರೆ.. ಕಾಗದ ಪತ್ರ ಏನಾದರೂ ಇತ್ತಾ? ಪದ್ಮಾವತಮ್ಮನವರು ಹೇಗಿದ್ದಾರೆ? ಲಕ್ಷ್ಮಿ ಇನ್ನೂ ಇದ್ದಾಳಾ? ಮಗು ಹೇಗಿದೆ?.." ಎಂದೆಲ್ಲ ಬಾಯಿತುಂಬಾ ವಿಚಾರಿಸಿಕೊಂಡ. ಪ್ರಕಾಶ್ ಮೇಷ್ಟರು ಹಾಂ ಹೂಂ ಎಂದೇನೋ ಉತ್ತರ ಕೊಟ್ಟು ಚುಟುಕು ಮಾತಿನಲ್ಲೇ ಮುಗಿಸಲು ಪ್ರಯತ್ನಿಸಿದರು. ಆದರೆ ಅವನು ಬಿಡವೊಲ್ಲ.."ಸತೀಶ ಫೋನ್ ಮಾಡಿದರೆ ನಾನು ಕೇಳಿದೆ ಅಂತ ಹೇಳಿ ಮೇಷ್ಟರೆ.. ಊರಿಗೆ ಬಂದಾಗ ಒಂದ್ಸರ್ತಿ ನಮ್ಮನೆಗೆ ಬರಕ್ಕೆ ಹೇಳಿ," ಎಂದ. ಆಗಲೆಂದರು.

***
ಜಿಲ್ಲಾಧಿಕಾರಿಗಳು ಇನ್ನೂ ಯುವಕ, ಇಷ್ಟು ಜನ ವಯಸ್ಸಾದವರು ಬಂದು ಮನವಿ ಕೊಡಲಿಕ್ಕೆ ಬಂದಿದ್ದಾರೆ ಅಂತ ಗೊತ್ತಾಗಿ ಹೆಚ್ಚು ಕಾಯಿಸದೆ ಒಳಗೆ ಕರೆಸಿಕೊಂಡರು. ಹೊರಗಿನ ಮಟ ಮಟ ಬಿಸಿಲಿಂದ ಒಳಗೆ ಎಸಿ ಕೋಣೆಗೆ ಬಂದಾಗ ಎಲ್ಲರಿಗೂ ಹಾಯೆನ್ನಿಸಿತು. ನರಸೇಗೌಡರು "ಸಾರ್, ನಮ್ಮ ಮನೆಗಳೆಲ್ಲವೂ ಕಳೆದ ಏಳೆಂಟು ವರ್ಷಗಳಿಂದ ಇವೆ. ಎಲ್ಲ ಮನೆಗಳಿಗೂ ರೇಷನ್ ಕಾರ್ಡ್ ಸಹ ಇವೆ.. ಹೀಗೆ ಏಕಾಏಕಿ ಮನೆಗಳನ್ನು ಒಡೆದಿದ್ದು ನಮಗೆಲ್ಲರಿಗೂ.." ಎನ್ನುತ್ತಿದ್ದಂತೆ ಜಿಲ್ಲಾಧಿಕಾರಿಗಳ ಸಹಾಯಕರು "ಏಕಾಏಕಿ ಅಲ್ಲ ಗೌಡರೆ, ನೋಟೀಸ್ ಕಳಿಸಿತ್ತಲ್ಲ, ಹದಿನೈದು ದಿನಗಳಲ್ಲಿ ಉತ್ತರ ಕೊಡಬೇಕು ಅಂತ.." ಎಂದಾಗ, ಲಾಯರ್ ಜಯದತ್ತ ಅವರು "ಸರ್.. ನನ್ನದೊಂದು ಸಲಹೆ..ಪಾಪ ಈ ಎಲ್ಲ ಜನರೂ ಮನೆ ಕಳೆದುಕೊಂಡ ದುಃಖದಲ್ಲಿ ಒಂದು ವೇಳೆ ಏನಾದರೂ ಹೇಳಿದರೆ ಅದನ್ನ ಅನ್ಯಥಾ ತಿಳಕೊಳ್ಳಬೇಡಿ.." ಎಂದರು.

ಜಿಲ್ಲಾಧಿಕಾರಿಗಳು "ಇದು ನಮ್ಮ ನೋಟೀಸಿಗೆ ಬರದೆ ಆದ ಘಟನೆ ಅಲ್ಲ.. ನನಗೆ ನಿಮ್ಮ ಬಗ್ಗೆ ಸಹಾನುಭೂತಿ ಇದೆ. ಆದರೆ ಅಕ್ರಮ ಕಟ್ಟಡಗಳ ಬಗ್ಗೆ ಸರಕಾರ ಕಠಿಣ ನಿರ್ಧಾರ ತೊಗೊಳ್ಳಬೇಕಾಗತ್ತೆ. ನಿಮ್ಮ ಮನವಿಯನ್ನ ಆದಷ್ಟೂ ಮಾನವೀಯ ದೃಷ್ಟಿಕೋಣದಿಂದ ಪರಿಗಣಿಸಬೇಕು ಅಂತ ಮುಖ್ಯಮಂತ್ರಿಗಳಿಗೆ ನನ್ನ ಸಂದೇಶವನ್ನೂ ಕಳಿಸುತ್ತೇನೆ" ಎನ್ನುತ್ತಿದ್ದಂತೆ ಪ್ರಕಾಶ್ ಮೇಷ್ಟರ ಫೋನ್ ರಿಂಗಣಿಸಲು ಪ್ರಾರಂಭಿಸಿತು. ಕಸಿವಿಸಿಯಿಂದ ಅವರು ಎದ್ದು ಹೊರಗೆ ಹೋಗಿ ಫೋನ್ ತೆಗೆದುಕೊಂಡರು. ಆಚೆತುದಿಯಲ್ಲಿ ಸದಾಶಿವನ ಆತಂಕಭರಿತ ಧ್ವನಿ ಕೇಳಿತು. "ಮೇಷ್ಟ್ರೆ, ಮೀಟಿಂಗ್ ಮುಗಿದ ತಕ್ಷಣ ಡಿಸ್ಟ್ರಿಕ್ಟ್ ಜನರಲ್ ಆಸ್ಪತ್ರೆಗೆ ಬಂದುಬಿಡಿ.." ಎಂದ. "ಯಾಕಪ್ಪಾ..ಏನಾಯಿತು?" ಎಂದರು. "ಪದ್ಮಾವತಮ್ಮನವರಿಗೆ ಫಿಟ್ಸ್ ಬಂತು.. ಹದಿನೈದು ನಿಮಿಷ ಆದ್ರೂ ನಿಲ್ಲಲಿಲ್ಲ.. ನಮ್ಮ ರಸ್ತೇಲಿರೋ ಕಿಣಿ ಡಾಕ್ಟರನ್ನ ಕರೆಸಿದಿವಿ, ಅವರು ಈಗಲೇ ಕಾರ್ ಮಾಡಿಕೊಂಡು ಆಸ್ಪತ್ರೆಗೆ ಕರಕೊಂಡು ಹೋಗಿ ಎಂದರು. ಎಮರ್ಜೆನ್ಸೀಲಿ ಇದ್ದಾರೆ, ಗ್ಲೂಕೋಸು, ಔಷಧಿ ಎಲ್ಲ ಕೊಟ್ಟ ಮೇಲೆ ಫಿಟ್ಸ್ ನಿಂತಿದೆ.." ಎಂದ. ಪ್ರಕಾಶ್ ಮೇಷ್ಟರ ಮುಖ ಕಳಾಹೀನವಾಯಿತು. ಏನೂ ತೋಚದೆ, ಸ್ಪ್ರಿಂಗ್ ಡೋರುಗಳನ್ನು ತೆಗೆದು ಒಳಗೆ ಹೋಗಲೋ, ಅಥವಾ ಬೇಡವೋ ಯೋಚಿಸುವಷ್ಟರಲ್ಲಿ ವಿಜಯಪ್ರಕಾಶ ಮತ್ತವನ ಇಬ್ಬರು ಚೇಲಾಗಳು ಮಹಡಿ ಹತ್ತಿ ಬಂದರು. ಇವರನ್ನು ನೋಡಿ "ನಮಸ್ಕಾರ ಮೇಷ್ಟ್ರೆ.. ಮೀಟಿಂಗ್ ಇನ್ನೂ ನಡೀತಿದೆಯಾ? ಎಂದು ಕೇಳಿದ. ಬಾಗಿಲ ಬಳಿ ನಿಂತಿದ್ದ ತಲಾಟಿಗೆ ತನ್ನ ವಿಸಿಟಿಂಗ್ ಕಾರ್ಡ್ ಕೊಟ್ಟು ಇವರ ಕಡೆ ತಿರುಗಿದ. ಮೇಷ್ಟರು ಚುಟುಕಾಗಿ ಹೆಂಡತಿಯನ್ನು ಆಸ್ಪತ್ರೆಗೆ ಸೇರಿಸಿದ ಬಗ್ಗೆ ಹೇಳಿ ಒಳಗೆ ಹೋದರು.

ಲಾಯರು ಜಯದತ್ತರ ಮುಖ ವಿಜಯಪ್ರಕಾಶನ ಮುಖ ನೋಡಿ ಅಪ್ರಸನ್ನವಾಯಿತು. ಆದರೂ ತೋರಗೊಡದೆ "ಸರ್, ಕೋರ್ಟಿನಿಂದ ಸ್ಟೇ ತರುವ ಮೊದಲೇ ಕಟ್ಟಡಗಳನ್ನು ಕೆಡವಿದ್ದು ಸರಿಯಾದ ಕ್ರಮ ಅಲ್ಲ.." ಎಂದೇನೋ ಹೇಳ ಹೊರಟರು. ಅದನ್ನು ತುಂಡರಿಸಿ ಜಿಲ್ಲಾಧಿಕಾರಿಗಳು "ಮಿಸ್ಟರ್ ಜಯದತ್, ಇದುವರೆಗೆ ನಗರದ ಸುತ್ತ ಎಷ್ಟು ಇಲ್ಲೀಗಲ್ ಬಡಾವಣೆಗಳು ಎದ್ದಿವೆ ಗೊತ್ತೆ? ಹದಿಮೂರು..ಇನ್ನೂ ತಲೆ ಏಳುವುದಕ್ಕೆ ತಯಾರಾಗಿರುವ ಕಾಲೋನಿಗಳು ಕನಿಷ್ಠ ಒಂಬತ್ತು. ಇಟ್ ಈಸ್ ಅನ್ ಫಾರ್ಚುನೇಟ್ ದಟ್ ವೆಂಕಟಾದ್ರಿಪುರ ವಾಸ್ ದ ಫಸ್ಟ್..ಬಟ್..ದಿಸ್ ಈಸ್ ದ ಓಲ್ಡೆಸ್ಟ್..ಯು ಸೀ..." ಎಂದರು. "ಅಂಡ್ ದ ಓನ್ಲೀ ಲೊಕಾಲಿಟಿ ದಟ್ ಎಲೆಕ್ಟೆಡ್ ಅವರ್ ಪಾರ್ಟೀಸ್ ಕ್ಯಾಂಡಿಡೇಟ್ ಇನ್ ದ ಮುನಿಸಿಪಲ್ ಎಲೆಕ್ಷನ್ಸ್.." ಎಂದು ಒಳಬಂದಿದ್ದ ವಿಜಯಪ್ರಕಾಶ ಸೇರಿಸಿದ. "ಓಹ್ ಸಿಂಡಿಕೇಟ್ ಮೆಂಬರ್ ಸಾಹೇಬ್ರು.. ಬನ್ನಿ ಬನ್ನಿ.." ಎಂದು ಜಿಲ್ಲಾಧಿಕಾರಿಗಳು ಮುಗುಳುನಕ್ಕರು. ನರಸೇಗೌಡರು ವಿಜಯಪ್ರಕಾಶನ ಆಗಮನದಿಂದ ಹೆಚ್ಚು ಪುಳಕಿತರಾದಂತೆ ಕಂಡುಬಂದರೂ ಮಿಕ್ಕ ಹಿರಿತಲೆಗಳು ಇನ್ನೇನು ಭಾನಗಡಿ ಮಾಡುತ್ತಾನೋ ಎಂದು ಆತಂಕಿತರಾದರು.

ಪ್ರಕಾಶ್ ಮೇಷ್ಟರಿಗೆ ಆಸ್ಪತ್ರೆಯ ಕಡೆ ಮನಸ್ಸು ಹೊರಳಿ, ಇಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ಜಡವಾಯಿತು. ಅಲ್ಲಿ ಏನಾಗುತ್ತಿದೆಯೋ, ಲಕ್ಷ್ಮಿ ಹೇಗಿದ್ದಾಳೋ, ಹೆಂಡತಿ ಹೇಗಿದ್ದಾಳೋ ತಿಳಿಯದೆ ಅವರ ಮನಸ್ಸು ಆತಂಕಿತವಾಯಿತು. ಲಾಯರ್ ಜಯದತ್ತರು "ಆಗಲಿ ಸರ್, ಇಫ್ ಲೀಗಲ್ ರಿಕೋರ್ಸ್ ಹ್ಯಾಸ್ ಟು ಬಿ ಟೇಕನ್ ಐ ವುಡ್ ಲೈಕ್ ಟು ಟೆಲ್ ಯು ದಟ್ ಇಟ್ ವಿಲ್ ಬಿ ದ ಲಾಸ್ಟ್ ಆಪ್ಷನ್.." ಎಂದು ಜಿಲ್ಲಾಧಿಕಾರಿಗಳ ಕೈ ಕುಲುಕಿದರು. ಜಿಲ್ಲಾಧಿಕಾರಿಗಳು ಜಯದತ್ತರ ಕೈ ಕುಲುಕಿ, ನರಸೇಗೌಡರ ಕೈ ಕುಲುಕಿ, ಮಿಕ್ಕೆಲ್ಲರ ಕಡೆ ಕೈಯೆತ್ತಿ ನಮಸ್ಕಾರ ಮಾಡಿದರು. ವಿಜಯಪ್ರಕಾಶ ಮತ್ತವನ ಚೇಲಾಗಳು ಇನ್ನೂ ಕುಳಿತೇ ಇದ್ದರು. ಜಯದತ್ತರ ಜತೆ ಎಲ್ಲೆ ಹಿರಿತಲೆಗಳು ಹೊರ ಬರುವಾಗ ಮತ್ತೆ ಇಹಲೋಕಕ್ಕೆ ಬಂದ ಪ್ರಕಾಶ್ ಮೇಷ್ಟರು ನರಸೇಗೌಡರಿಗೆ ತಾವು ಆಸ್ಪತ್ರೆಗೆ ಹೋಗುತ್ತಿರುವುದಾಗಿ ಹೇಳಿ ಸೈಕಲ್ ಸ್ಟಾಂಡಿಗೆ ನಡೆದರು. ಹಿಂದಿನಿಂದ ವಿಜಯಪ್ರಕಾಶನ ಚೇಲಾ ಒಬ್ಬ ಬಂದು "ಮೇಷ್ಟ್ರೆ, ಕಾರು ಬೇಕಾದರೆ ಕಳಿಸ್ತೀನಿ ಅಂತ ವಿಜಯ್ ಸಾಹೇಬ್ರು ಹೇಳ್ತಿದ್ದಾರೆ.." ಎಂದ. ಪ್ರಕಾಶ್ ಮೇಷ್ಟರು "ಬೇಡ ಬಿಡಿ, ನನ್ನ ಸೈಕಲ್ ಇಲ್ಲೇ ಉಳಕೊಳ್ಳತ್ತೆ.. ಆಮೇಲೆ ಅದನ್ನ ತರೋಕೆ ಆಸ್ಪತ್ರೆಯಿಂದ ಇಷ್ಟು ದೂರಕ್ಕೆ ಆಟೋ ಮಾಡಿಕೊಂಡು ಬರಬೇಕಾಗತ್ತೆ.." ಎಂದರು.

ಆಸ್ಪತ್ರೆ ತಲುಪಿದಾಗ ಡಾಕ್ಟರು ಆಗಷ್ಟೆ ರೌಂಡ್ಸ್ ಮುಗಿಸಿ ಸದಾಶಿವನ ಹತ್ತಿರ "ಪದ್ಮಾವತಮ್ಮನವರ ರಿಲೇಷನ್ ನೀವೇನಾ?" ಎಂದು ಕೇಳುತ್ತಿದ್ದರು. ಗಡಿಬಿಡಿಯಿಂದ ಹತ್ತಿರ ಬಂದ ಮೇಷ್ಟರು "ನಾನು ಅವಳ ಗಂಡ ಡಾಕ್ಟರೆ.." ಎಂದರು. "ನೋಡಿ, ಇವರೆ, ಅವರಿಗೆ ಫಿಟ್ಸ್ ಗೆ ಕೊಡುವ ಔಷಧಿ ಒಂದು ಡೋಸೂ ತಪ್ಪಬಾರದು, ನಿನ್ನೆ ಮೊನ್ನೆ ಮಾತ್ರೆ ಕೊಡುವುದು ಮಿಸ್ ಆಗಿದೆಯಾ.." ಎಂದು ಕೇಳಿದರು. ಮೇಷ್ಟರು ನೆನಪಿಸಿಕೊಂಡು ಹೇಳಲಾರಂಭಿಸಿದರು "ಇಲ್ಲ ಡಾಕ್ಟರೆ, ನಿನ್ನೆ ಬೆಳಿಗ್ಗೆ ಮತ್ತು ಮಧ್ಯಾಹ್ನ ಮಾತ್ರೆ ಮಿಸ್ ಆಗಿದೆ..ನಮ್ಮ ಮನೆ ಕೆಡವಿ.." ಗದ್ಗದಿತರಾದರು.."ಅಕ್ರಮ ಕಟ್ಟಡ ಅಂತ..ನಿನ್ನೆ ಸಡನ್ನಾಗಿ ಮನೆ ಬದಲಾಯಿಸಬೇಕಾಯಿತು.. ಅದಕ್ಕೆ.." ಎಂದು ತೊದಲಿದರು. ಡಾಕ್ಟರು ನಿರ್ವಿಕಾರ ಭಾವನೆಯಿಂದ ಕೇಳಿ, "ಡೋಸ್ ಸ್ವಲ್ಪ ಜಾಸ್ತಿ ಮಾಡ್ತಿದ್ದೀವಿ, ಒಂದು ವೇಳೆ ಮಿಸ್ ಆದರೆ ಮುಂದಿನ ಡೋಸಿಗೆ 100 ಮಿಲಿಗ್ರಾಮಿನಷ್ಟು ಹೆಚ್ಚು ಮಾಡಿ ಕೊಡಿ, ಈಗ ನಿದ್ರೆ ಮಾಡ್ತಾ ಇದ್ದಾರೆ, ಎಚ್ಚರ ಆದ ಮೇಲೆ ಮನೆಗೆ ಕರ್ಕೊಂಡು ಹೋಗಬಹುದು, ನಾಳೆ ತನಕ ಆಗಬಹುದು ಎಚ್ಚರ ಆಗಕ್ಕೆ.." ಎಂದರು. "ಜೀವಕ್ಕೇನೂ ಅಪಾಯ ಇಲ್ಲ ತಾನೇ ಡಾಕ್ಟರೇ.." ಎಂದು ಕೇಳಿದರು. ಡಾಕ್ಟರು ಆಗ ಒಮ್ಮೆ ಮಾತ್ರ ಮುಗುಳ್ನಕ್ಕು "ಇಲ್ಲ.. ಔಷಧಿ ಮಾತ್ರ ಮರೆಯಬೇಡಿ.." ಎಂದರು. ಎರಡು ಜಡೆ ಹಾಕಿದ್ದ ಕಾರಣ ಪದ್ಮಾವತಮ್ಮನವರ ಮುಖ ತುಂಟ ಹುಡುಗಿಯ ಮುಖದಂತೆ ಮುದ್ದಾಗಿ ಕಾಣುತ್ತಿತ್ತು.

***
ಆಸ್ಪತ್ರೆಯಿಂದ ಮನೆಗೆ ಬಂದಾಗ ಗೌರಿ ಮಗುವಿನ ಬಟ್ಟೆಗಳನ್ನು ಮನೆಯ ಹೊರಗೆ ಟೆರೇಸಿನಲ್ಲಿ ಹೊಸದಾಗಿ ಕಟ್ಟಿದ ಹಗ್ಗಕ್ಕೆ ಒಣಹಾಕಿ ಕ್ಲಿಪ್ ಹಾಕುತ್ತಿದ್ದಳು. "ನೀನು ಕಷ್ಟ ಪಡುವುದು ಬೇಡ ಬಿಡಮ್ಮ.." ಎಂದರೂ ಕೇಳದೆ "ಇರಲಿ ಬಿಡಿ ಮಾವಯ್ಯ" ಎಂದು ಪದ್ಮಾವತಮ್ಮನವರ ಬೆತ್ತದ ಕುರ್ಚಿಯನ್ನು ತಲೆದೆಸೆಯಲ್ಲಿ ಭದ್ರವಾಗಿ ಹಿಡಿದುಕೊಂಡು ಮಹಡಿ ಹತ್ತಿಸಿದಳು. ಪ್ರಕಾಶ್ ಮೇಷ್ಟರಿಗೆ ಈ ಹುಡುಗಿಯ ಕಾಳಜಿಯ ಅರಿವಾಗಿ ಮನಸ್ಸು ಮೂಕವಾಯಿತು. ಎರಡು ಕೋಣೆಗಳ ಹೊಸ ಬಿಡಾರದಲ್ಲಿ ಒಂದು ಕೋಣೆಯಲ್ಲಿ ಮಗಳು ಲಕ್ಷ್ಮಿ ಮತ್ತು ಮಗು, ಹೊರಗಿನ ದೊಡ್ಡ ಕೋಣೆಯಲ್ಲಿ ಬೆಡ್ ಷೀಟ್ ಕಟ್ಟಿ ಮರೆ ಮಾಡಿದ ಒಂದು ಭಾಗದಲ್ಲಿ ಪದ್ಮಾವತಮ್ಮನವರ ಹಾಸಿಗೆ, ಮತ್ತೊಂದು ಭಾಗದಲ್ಲಿ ತಾತ್ಕಾಲಿಕ ಅಡುಗೆಕೋಣೆಯ ವ್ಯವಸ್ಥೆಯಾಗಿತ್ತು. ಹೊರಗಿದ್ದ ನಲ್ಲಿಯಲ್ಲಿ ಕಾಲು ತೊಳೆದು ಅಡುಗೆಮನೆಯಲ್ಲಿ ಮೇಷ್ಟರು ಉಸ್ಸಪ್ಪ! ಎಂದು ಕುಳಿತರು. ಬೆಳಿಗ್ಗೆ ಒಮ್ಮೆ ಎದ್ದು ತಿಂಡಿ ತಿಂದಿದ್ದ ಪದ್ಮಾವತಮ್ಮ ಮತ್ತೆ ನಿದ್ದೆಗೆ ಜಾರಿದ್ದರು. ಕೊಂಚ ವಿಶ್ರಾಂತಿ ತೆಗೆದುಕೊಂಡು ನಂತರ ಬಟ್ಟೆಯ ಮಾರಾಟಕ್ಕೆ ಹೋಗಿ ಬರುವುದೆಂದು ಬಾಗಿಲು ತೆಗೆದಿಟ್ಟು ಮೇಷ್ಟರೂ ಸಣ್ಣ ನಿದ್ದೆ ತೆಗೆಯಲು ಪ್ರಾರಂಭಿಸಿದರು.

ಫೋನ್ ರಿಂಗಣಿಸಿ ಮತ್ತೆ ಎಚ್ಚರವಾಯಿತು. ಸತೀಶ ಫೋನ್ ಮಾಡಿದ್ದ, ಹೇಗಿದ್ದಾರೆಂದು ಕೇಳಿ, ಸದಾಶಿವ ನಗರಸಭೆಯವರು ಮನೆ ಉರುಳಿಸಿದ ಸುದ್ದಿ ತಿಳಿಸಿದ ಬಗ್ಗೆ ಹೇಳಿದ. ಹತ್ತು ದಿನಗಳ ನಂತರ ರಜೆ ಸಿಗುತ್ತಿದೆಯೆಂದೂ ಮಾಲ್ದಾದಿಂದ ಬೆಂಗಳೂರಿಗೆ ಬರಲು ಇನ್ನೊಂದು ದಿನ ಬೇಕೆಂದೂ ತಿಳಿಸಿದ. "ಅಮ್ಮ ಹೇಗಿದ್ದಾಳೆ?" ಎಂದು ಕೇಳಿದ. ಆಸ್ಪತ್ರೆಯಿಂದ ಮರಳಿ ಕರೆತಂದದ್ದನ್ನು ಹೇಳುವಷ್ಟರಲ್ಲಿ ಫಳಾರೆಂದು ಮಿಂಚು ಹೊಡೆದು ಆಕಾಶ ಕಪ್ಪಿಟ್ಟಿತು. ಫೋನ್ ಗೊರಗೊರ ಸದ್ದು ಮಾಡಲು ಆರಂಭಿಸಿತು. ಮತ್ತೆ ಫೋನ್ ಮಾಡುತ್ತೇನೆಂದು ಹೇಳಿ ಡಿಸ್ ಕನೆಕ್ಟ್ ಮಾಡಿ, ಒಣಗಹಾಕಿದ್ದ ಬಟ್ಟೆಗಳನ್ನು ತರಲಿ ಗಡಿಬಿಡಿಯಿಂದ ಹೊರಗೆ ಓಡಿದರು.

ರಾತ್ರಿಯಿಡೀ ಸುರಿದ ಮೊದಲ ಮಳೆಯಿಂದ ನೆಲ ತಂಪಾಗಿ ಪ್ರಕಾಶ್ ಮೇಷ್ಟರ ದುಗುಡ ಕೊಂಚ ಕಡಿಮೆ ಆದರೂ ಮನೆ ಹೇಗಿದೆಯೋ ನೋಡಲು ಅವರ ಮನಸ್ಸು ತವಕಿಸಿತು. ನೆಲಕ್ಕೆ ಮೊಸಾಯಿಕ್ ಹಾಕಿಸಿದ್ದು ಈಗೆಲ್ಲ ಬಿಸಿಲಿನಿಂದ ನಿರಾಬಾಧಿತವಾಗಿ ಒಣಗಿದ್ದರೆ, ನೆಲ ಬಿರುಕು ಬಿಟ್ಟಿರಬಹುದು ಎನ್ನಿಸಿತು. ಬೆಳಿಗ್ಗೆ ಎದ್ದ ತಕ್ಷಣ ಲಕ್ಷ್ಮಿಗೆ "ನಾನು ಕೊಂಚ ಸೈಟಿನ ಹತ್ತಿರ ಹೋಗಿ ಬರ್ತೀನಮ್ಮ, ನನಗೆ ಊಟಕ್ಕೆ ಕಾಯಬೇಡ." ಎಂದು ಹೇಳಿ ಮನೆಯಿಂದ ಹೊರ ಬಿದ್ದರು. ಹತ್ತು ನಿಮಿಷದಲ್ಲಿ ಮನೆಯ ಭಗ್ನಾವಶೇಷದ ನಡುವೆ ತಲುಪಿದ್ದರು.

ಜೆ ಸಿ ಬಿ ಯಂತ್ರದ ರಕ್ಕಸ ಚಕ್ರದ ಗುರುತು ಅಜಗರದ ಪಟ್ಟೆಗಳಂತೆ ಮನೆಯ ಬೇಲಿಯನ್ನು ಮುರಿದು ಅಂಗಳದ ಒಳಗೆ ನುಗ್ಗಿದ ಕುರುಹಿತ್ತು. ತುಲಸಿ ಬೆಳೆದ ವೃಂದಾವನಕ್ಕೆ ಯಾವುದೇ ಪೆಟ್ಟು ತಾಕಿರಲಿಲ್ಲ, ಎರಡು ದಿನ ಕಳೆದಿದ್ದರೂ, ಹಿಂದಿನ ರಾತ್ರಿ ಮಳೆಯಿಂದ ಹೊಸದಾಗಿ ನೀರು ಬಿದ್ದ ಕಾರಣಕ್ಕೋ ಏನೋ, ತುಲಸಿ ನಳನಳಿಸುತ್ತಿತ್ತು. ಗೋಡೆಯೊಂದಿಗೆ ಅಡ್ಡಲಾಗಿ ಬಿದ್ದಿದ್ದ ಬಾಗಿಲ ಅವಶೇಷಗಳನ್ನು ದಾಟಿ ಮುಂದಿನ ಕೋಣೆಯಿದ್ದ ಜಾಗದಲ್ಲಿ ಪ್ರಕಾಶ್ ಮೇಷ್ಟರು ಬಂದು ನಿಂತರು. ಇಷ್ಟು ದಿನಗಳ ದುಃಖವೆಲ್ಲ ಒಮ್ಮೆಲೇ ತುಂಬಿ ಬಂದಂತೆ ಆಗಿ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟರು.

ಎದೆ ಹಗುರಾದ ಭಾವದೊಂದಿಗೆ ವರ್ತಮಾನಕ್ಕೆ ಮರಳಿದ ಮೇಷ್ಟರು ಮನೆಯ ಅವಶೇಷಗಳಿಂದ ಹೊರ ಬಂದು ಅಂಗಳದಲ್ಲಿ ಕಣ್ಣು ಹಾಯಿಸಿದರು. ಬೇಲಿಯ ಅಂಚಿನಲ್ಲಿ ಮಾವಿನ ಸಸಿಯೊಂದು ತನ್ನ ಕೆಂಪಾದ ಚಿಗುರಿನ ಮೊಳಕೆಯೊಡೆದಿದ್ದು ಲಕ್ಷ್ಮಿಯ ಮಗುವಿನ ಕೈಯಂತೆ ಕಾಣುತ್ತಿತ್ತು.

ಅಡುಗೆ ಅನಿಲ, ಡೀಸೆಲ್, ಸೀಮೆಎಣ್ಣೆ ಶೀಘ್ರ ತುಟ್ಟಿ

|
ಕೋಲ್ಕತ್ತಾ, ಮೇ.16: ಪೆಟ್ರೋಲ್ ಬೆಲೆ ಏರಿಕೆ ಬೆನ್ನಲ್ಲೇ ಡೀಸೆಲ್, ಸೀಮೆಎಣ್ಣೆ ಹಾಗೂ ಅಡುಗೆ ಅನಿಲ ಬೆಲೆಯನ್ನು ಏರಿಸಲು ಕೇಂದ್ರ ಸರಕಾರ ಮುಂದಾಗಿದೆ. ಮುಂದಿನ ವಾರ ಸಭೆ ಸೇರಿ ಬೆಲೆ ಏರಿಕೆ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ತಿಳಿಸಿದ್ದಾರೆ. 
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, 2010ರ ಜೂನ್‌ನಲ್ಲಿ ಪೆಟ್ರೋಲ್ ಬೆಲೆ ನಿಯಂತ್ರಣ ವ್ಯವಸ್ಥೆಯನ್ನು ರದ್ದುಪಡಿಸಿದ ನಂತರ ತೈಲ ಕಂಪನಿಗಳೇ ಬೆಲೆ ಏರಿಕೆ ನಿರ್ಧಾರ ತೆಗೆದುಕೊಳ್ಳುತ್ತಿವೆ ಎಂದು ತಿಳಿಸಿದರು. ಅಡುಗೆ ಅನಿಲ, ಡೀಸೆಲ್ ಮತ್ತು ಸೀಮೆಎಣ್ಣೆ ಬೆಲೆಯನ್ನು ತಮ್ಮ ನೇತೃತ್ವದ ಸಚಿವರ ತಂಡ ನಿರ್ಧರಿಸುತ್ತದೆ ಎಂದು ಸಚಿವರು ಹೇಳಿದ್ದಾರೆ.
ಪ್ರಸ್ತುತ ಸೀಮೆಎಣ್ಣೆ ಬೆಲೆ ಪ್ರತಿ ಲೀಟರ್‌ಗೆ ರು.26, ಡೀಸೆಲ್ ರು.16 ಹಾಗೂ ಅಡುಗೆ ಅನಿಲ ಸಿಲಿಂಡೆರ್‌‍ಗೆ ರು.320 ಸಬ್ಸಿಡಿ ನೀಡಲಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ 110 ಡಾಲರ್ ಆಗಿದೆ ಎಂದ ಸಚಿವರು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು.

ಮಹಿಳೆಯರು ಧೂಮಪಾನ ಮಾಡಲೇಬಾರದು ಯಾಕೆಂದ್ರೆ..

|
ಪುರುಷ ಮತ್ತು ಮಹಿಳೆಯರು ಸಮಾನರು ಎಂಬುದನ್ನು ಒಪ್ಪಿಕೊಳ್ಳೋಣ. ಜೀವನಶೈಲಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಕರಿಯರ್ ಸಂಬಂಧಿತವಾಗಿ ಇವರಿಬ್ಬರ ನಡುವೆ ಈಗ ಹೆಚ್ಚಿನ ಭಿನ್ನತೆಗಳಿಲ್ಲ. ಇವೆಲ್ಲ ಕರಿಯರ್ ದೃಷ್ಟಿಕೋನದಿಂದ ಸರಿಯಾಗಿರಬಹುದು. ಆದರೆ ನಾವು ಯಾರಿಗೂ ಕಮ್ಮಿ ಇಲ್ಲ ಎಂಬ ಭರದಲ್ಲಿ ಗಂಡಸರ ದುರಾಭ್ಯಾಸಗಳನ್ನೂ ಕಲಿಯೋದು ಮಾತ್ರ ಅಪಾಯಕಾರಿ. 

ಕುಡಿತ ಮತ್ತು ಧೂಮಪಾನ ಪುರುಷರ ಸ್ವಯಾಂರ್ಜಿತ ಆಸ್ತಿಯಾಗಿ ಉಳಿದಿಲ್ಲ. ಆದರೆ ಭಾರತದಲ್ಲಿ ಮಹಿಳೆಯರು ಸಾರ್ವಜನಿಕವಾಗಿ ಧೂಮಪಾನ ಮಾಡುವುದು ತುಸು ಕಡಿಮೆ. ಆದರೆ ಆಧುನಿಕತೆಯ ಹೆಸರಿನಲ್ಲಿ ಯುವತಿಯರು ಅಲ್ಲಲ್ಲಿ ಹೊಗೆ ಬಿಡುತ್ತಾರೆ. ನಗರದ ಯುವತಿಯರು, ಕೆಲವು ಕೂಲಿ ಕಾರ್ಮಿಕರು ಬೀಡಿ ಸಿಗರೇಟು ದಾಸರಾಗಿದ್ದಾರೆ. 
ತಂಬಾಕುಯುಕ್ತ ಪದಾರ್ಥಗಳ ಸೇವನೆ ಆಕೆಗೆ ಯಾವುದೋ ರಿಲೀಫ್ ನೀಡಬಹುದು. ಆದರೆ ಅದರ ದುಷ್ಪರಿಣಾಮ ಯಾವತ್ತೂ ಮರೆಯುವಂತಿಲ್ಲ. ಮಹಿಳೆಯರಿಗೆ ಧೂಮಪಾನದಿಂದ ಉಂಟಾಗುವ ಪ್ರಮುಖ ತೊಂದರೆಗಳು ಈ ಕೆಳಗಿನಂತಿವೆ. 
ಹಾರ್ಮೋನ್ ವೈಪರೀತ್ಯ: ಮಹಿಳೆಯರು ಧೂಮಪಾನ ಮಾಡುವುದರಿಂದ ಉಂಟಾಗುವ ಅತ್ಯಂತ ದೊಡ್ಡ ಅಪಾಯವೆಂದರೆ ಆಕೆಯ ಹಾರ್ಮೊನ್ ಏರುಪೇರಾಗುವುದು. ಅಸಹಜ ರಕ್ತಸ್ರಾವ, ಸೋಂಕು, ಸಮಯಕ್ಕಿಂತ ಬೇಗ ಮುಟ್ಟಾಗುವುದು ಇತ್ಯಾದಿ ಸಮಸ್ಯೆಗಳು ಹರೆಯದ ಧೂಮಪಾನಿಗಳಲ್ಲಿ ಕಾಣುವ ಕೆಲವು ಪ್ರಮುಖ ಸಮಸ್ಯೆಗಳೆಂದು ಸಂಶೋಧನೆಗಳು ಹೇಳುತ್ತಿವೆ. 
ಎಲುಬು ರೋಗ: ಮಹಿಳೆಯರು ಧೂಮಪಾನ ಮಾಡುವುದರಿಂದ ಅವರಿಗೆ ಎಲುಬು ಸಂಬಂಧಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಎಲುಬು ಸವೆತ ಇತ್ಯಾದಿಗಳು ಪ್ರಮುಖ ತೊಂದರೆಗಳಾಗಿವೆ. ಮುಟ್ಟು ನಿಂತ ನಂತರ ಹೆಚ್ಚಿನ ಆರೋಗ್ಯ ಸಂಬಂಧಿ ತೊಂದರೆಗಳಿಗೆ ಮಹಿಳೆಯರ ಧೂಮಪಾನ ಕಾರಣವಾಗುತ್ತದೆ. 
ಗರ್ಭಿಣಿಯರಿಗೆ ತೊಂದರೆಗಳು: ಕೆಲವು ಮಹಿಳೆಯರು ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಧೂಮಪಾನ ತ್ಯಜಿಸಬಹುದು. ಆದರೆ ನಿಯಮಿತವಾಗಿ ಸೇವನೆ ಮಾಡುತ್ತಿದ್ದವರು ಈ ಸಂದರ್ಭದಲ್ಲಿ ಸ್ಮೋಕ್ ಬಿಟ್ಟರೂ ಸಮಸ್ಯೆಗಳು ಬಿಡದು. ಯಾಕೆಂದರೆ ರಕ್ತನಾಳ ಮೂಲಕ ದೇಹ ಸೇರಿದ ತಂಬಾಕು ಅಂಶಗಳು, ರಾಶಯನಿಕಗಳು ಪ್ರಮುಖವಾಗಿ ಮಗುವಿನ ಆರೋಗ್ಯಕ್ಕೆ ಅಪಾಯಕಾರಿಯಾಗಿವೆ. ಕಡಿಮೆ ತೂಕದ ಮಗುವಿನ ಜನನ, ತಿಂಗಳು ತುಂಬುವ ಮುನ್ನವೇ ಮಗು ಹುಟ್ಟುವುದು ಇತ್ಯಾದಿ ತೊಂದರೆಗಳು ಸ್ಮೋಕಿಂಗ್ ಸಾಮಾನ್ಯ ಸಮಸ್ಯೆಗಳಾಗಿವೆ. 
ಇದರೊಂದಿಗೆ ಚರ್ಮ ಸುಕ್ಕುಗಟ್ಟುವುದು, ಎದೆಯ ಕ್ಯಾನ್ಸರ್, ಸಂಧಿವಾತ, ಲೈಂಗಿಕ ತೊಂದರೆಗಳು ಸೇರಿದಂತೆ ಹಲವು ತೊಂದರೆಗಳು ಉಂಟಾಗುವ ಸಾಧ್ಯತೆಯಿದೆ. ಧೂಮಪಾನ ಪುರುಷ ಮತ್ತು ಮಹಿಳೆಯರಿಬ್ಬರಿಗೂ ಅಪಾಯಕಾರಿ. ಆದರೆ ಇದರಿಂದ ಮಹಿಳೆಯರು ಬೇಗ ತೊಂದರೆಗೀಡಾಗುತ್ತಾರೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದ ಸತ್ಯ.

ಆ ಸಿಗರೇಟ್ ಬಿಸಾಕಿ, ಇ-ಸಿಗರೇಟ್ ಸೇದಬಹುದಾ ಸಾರ್?

|
ಸಾಕು ರೀ ಇಷ್ಟು ಸೇದಬೇಡಿ ಅಂತ ನಿಮ್ಮ ಪತ್ನಿ ಮುನಿದರೆ "ಬಿಡಲಾರೆ ನಾ ಸಿಗರೇಟು, ಹುಡುಗಿ ನಿನ್ನಂತೆ ಅದು ಥೇಟು" ಅಂತ ಆಕೆಯನ್ನು ರಮಿಸಬಹುದು. ಆದರೂ ಆಕೆಯ ಮುನಿಸು ಹೆಚ್ಚಾದರೆ "ಛೇ ಇವಳಂತೆಯೇ ಈ ಸಿಗರೇಟನ್ನು ಬಿಡಲಾಗೋದಿಲ್ಲ!" ಅಂತ ನೀವು ತಲೆ ಕೆಡಿಸಿಕೊಳ್ಳುತ್ತ ಮತ್ತೊಂದು ಧಮ್ ಎಳೆಯಬಹುದು.
ಫ್ರೆಂಡ್ಸ್ ಜೊತೆಗೆ ಒಂದು ಧಮ್ ನಿಂದ ಆರಂಭವಾದ ಸಿಗರೇಟ್ ಚಟವಿಂದು ನಿಮ್ಮ ಬಿಡಲಾಗದ ಫ್ರೆಂಡ್ ಆಗಿರಬಹುದು. ಒಂದು ಚಹಾ ಕಪ್ ಜೊತೆಗೊಂದು ಸಿಗರೇಟ್ ಎಂಬ ಜಾಯಾಮಾನ ನಿಮ್ಮದಾಗಿರಬಹುದು. ತಲೆಕೆಲಸ ಮಾಡುತ್ತಿಲ್ಲ, ತಲೆಕೆಟ್ಟುಹೋಗಿದೆ, ಜಸ್ಟ್ ರಿಲಾಕ್ಸ್ ಆಗಲು, ಹೀಗೆ ಸಾವಿರ ನೆಪಗಳು ನಿಮ್ಮ ಸಿಗರೇಟು ಸೇವನೆಗಿರಬಹುದು. ಧೂಮಪಾನದಿಂದ ಕ್ಯಾನ್ಸರ್ ನಂತಹ ಹಲವು ಮಾರಕ ರೋಗಗಳಿಗೂ ತುತ್ತಾಗಬಹುದು. ಧೂಮಪಾನಿಗಳ ಕೆಲಸದ ಅರ್ಜಿ ಕಸದಬುಟ್ಟಿಗೂಬೀಳಬಹುದು.
ಕೊನೆಗೂ ನಿಮಗೆ ಒಂದಿಷ್ಟು ಬುದ್ಧಿ ಬಂದು ಸಾಕಷ್ಟು ಬಾರಿ ಸಿಗರೇಟು ಬಿಟ್ಟಿರುತ್ತೀರಿ!. ಆದರೆ ಅದು ನಿಮ್ಮನ್ನು ಬಿಡದೇ ಕಂಗಲಾಗುತ್ತೀರಿ. ಕೊನೆಗೆ ಯಾರೋ ಹೇಳಿದ್ರು ಅಂತ, ಪತ್ರಿಕೆಯಲ್ಲಿ ಜಾಹೀರಾತು ಕಂಡಿದೆಯೆಂದು ಸೀದಾ ಚೆನ್ನೈನಿಂದಲೋ, ಅಥವಾ ಆನ್ ಲೈನ್ ಸೈಟ್ ಗಳಿಂದ ಇಲೆಕ್ಟ್ರಾನಿಕ್ ಸಿಗರೇಟ್ ಖರೀದಿಸುತ್ತೀರಿ.
ಏನಿದು ಇ-ಸಿಗರೇಟು?: ನೋಡಲು ಥೇಟ್ ಮಾಮೂಲಿ ಸಿಗರೇಟ್ ನಂತಿರುತ್ತದೆ. ಇದರಲ್ಲಿ ಐಸಿ ಚಿಪ್ ಇದ್ದು ಲೀಥಿಯಂ ಬ್ಯಾಟರಿ, ನಿಕೋಟಿನ್ ಎಲ್ಲವೂ ಇದರಲ್ಲಿದೆ. ಆನ್ ಮಾಡಿದಾಗ ನಿಕೋಟಿನ್ ಬಿಸಿಯಾಗಿ ಧೂಮಪಾನಿಯ ಉಸಿರು ಸೇರುತ್ತದೆ. ಹೊಗೆ ಇಲ್ಲದೇ ಆತನ ರಕ್ತಕ್ಕೆ ನಿಕೋಟಿನ್ ಸೇರುತ್ತದೆ. ಮಾಮೂಲಿ ಸಿಗರೇಟಿನಂತೆ ಆನಂದ, ತೃಪ್ತಿ ಎಲ್ಲವೂ ಸಿಗುತ್ತದೆ. ನಿಧಾನವಾಗಿ ಅದರೊಳಗೆ ನಿಕೋಟಿನ್ ಅಂಶ ತಗ್ಗಿಸುತ್ತ ಸಿಗರೇಟ್ ಚಟ ಬಿಡಬಹುದೆಂದು ಅದರ ತಯಾರಕರು ಹೇಳುತ್ತಾರೆ. ಇದು 24 ಮಿಲಿಗ್ರಾಂ, 18 ಮಿ.ಗ್ರಾಂ, 14 ಮಿ.ಗ್ರಾಂ, 11 ಮಿ.ಗ್ರಾಂ, 6 ಮಿ.ಗ್ರಾಂ ಮತ್ತು ಝೀರೋ ಮಿಲಿಗ್ರಾಂನಲ್ಲಿ ದೊರಕುತ್ತಿದೆ. ಝೀರೋ ಮಿಲಿಗ್ರಾಂನಲ್ಲಿ ನಿಕೋಟಿನ್ ಅಂಶ ಇರುವುದಿಲ್ಲ.

ಇ-ಸಿಗರೇಟು ಸೇದಲು ಕೆಲವು ಕಾರಣಗಳು
* ಇದು ಮಾಮೂಲಿ ಸಿಗರೇಟ್ ಸೇವನೆಯಂತಹದ್ದೇ ಅನುಭವ ನೀಡುತ್ತದೆ.
* ತಂಬಾಕು ಸೇವನೆಯ ಅಪಾಯವಿಲ್ಲ.
* ಇದರಲ್ಲಿ ಕಾರ್ಬನ್ ಮಾನೊಕ್ಷೈಡ್ ಇತ್ಯಾದಿ ಇಂಗಾಲಗಳಿಲ್ಲ. ಎದೆಯ ಗೂಡಿನಲ್ಲಿ ಹೊಗೆ ಗೂಡು ಕಟ್ಟೋ ಅಪಾಯವಿಲ್ಲ.
* ಇದನ್ನು ಉರಿಸಲು ಲೈಟರ್ ಇತ್ಯಾದಿ ಬೆಂಕಿ ಸಾಧನಗಳ ಅವಶ್ಯಕತೆಯೂ ಇಲ್ಲ. ಜಸ್ಟ್ ಆನ್ ಮಾಡಿದರೆ ಸಾಕು.
* ಇದರಿಂದ ಹಲ್ಲು, ತುಟಿ ಬಣ್ಣ ಕಪ್ಪಾಗುವ ಭಯವಿಲ್ಲ.
* ಬಳಕೆ ಮಾಡೋದು ಸುಲಭ. ಮಾಮೂಲಿ ಸಿಗರೇಟಿನಂತೆ ಉಸಿರಾಟದ ತೊಂದರೆ ಉಂಟು ಮಾಡುವುದಿಲ್ಲ.
* ಇದನ್ನು ನೀವು ಎಲ್ಲಿ ಬೇಕಾದರೂ ಸೇದಬಹುದು. ಯಾಕೆಂದರೆ ಇದು ಹೊಗೆ ಬಿಡುವುದಿಲ್ಲ.
* ತಂಬಾಕು ಸಿಗರೇಟಿನಿಂದ ಮುಕ್ತಿ ದೊರಕುತ್ತದೆ.
* ನಿಕೋಟಿನ್ ಅಂಶ ಕಡಿಮೆ ಮಾಡುತ್ತ ಕೊನೆಗೊಂದು ದಿನ ಇ-ಸಿಗರೇಟ್ ಸೇವನೆಗೂ ಬಾಯ್ ಹೇಳಬಹುದು.
ಇ-ಸಿಗರೇಟ್ ಸುರಕ್ಷಿತವೇ?: ಇದರಲ್ಲೂ ನಿಕೋಟಿನ್ ಅಂಶ ಇರುವುದರಿಂದ ಆರೋಗ್ಯಕ್ಕೆ ಅಪಾಯಕಾರಿ ಆಗಬಹುದೆಂದು ಕೆಲವು ವೈದ್ಯಕೀಯ ಸಂಶೋಧನೆಗಳು ಎಚ್ಚರಿಸುತ್ತವೆ. ಮಾಮೂಲಿ ಸಿಗರೇಟಿಗಿಂತ ಇದು ಸುರಕ್ಷಿತ ಅನ್ನೋಕೆ ಯಾವುದೇ ಖಾತ್ರಿಯಿಲ್ಲ ಎಂದು ಅಮೆರಿಕ ಮೂಲದ ಸಂಶೋಧನಾ ತಂಡವೊಂದು ಎಚ್ಚರಿಸಿದೆ.
ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ನಿಷೇಧ: ನಮ್ಮಲ್ಲಿ ಈಗ ಇ-ಸಿಗರೇಟಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ ಇದೀಗ ಇ-ಸಿಗರೇಟ್ ಕೂಡ ಅಪಾಯಕಾರಿ ಅಂತ ಸ್ಯಾನ್ ಫ್ರಾನ್ಸಿಸ್ಕೊದ ಆರೋಗ್ಯ ಇಲಾಖೆ ಹೇಳಿದೆ.. ಮಾಮೂಲಿ ಸಿಗರೇಟಿನಂತೆ ಅಪಾಯಕಾರಿಯಾಗಿರುವ ಇ-ಸಿಗರೇಟ್ ನ್ನು ಸಾರ್ವಜನಿಕ ಸ್ಥಳಗಳಲ್ಲಿ ಸೇದೋದನ್ನು ಆ ದೇಶ ಇತ್ತೀಚೆಗೆ ನಿಷೇಧ ಮಾಡಿದೆ. ಇ-ಸಿಗರೇಟ್ ಎಂಬುದು ದೇಹಕ್ಕೆ ಇನ್ನೊಂದು ರೀತಿಯಲ್ಲಿ ನಿಕೋಟಿನ್ ಪೂರೈಕೆ ಮಾಡುವ ಸಾಧನ ಎಂದು ಅಲ್ಲಿನವರ ಅಭಿಪ್ರಾಯ.
ಇ-ಸಿಗರೇಟು ಮಾರಾಟ ಮಾಡುವ ಅಂತರ್ ಜಾಲ ತಾಣಗಳು ಸಾಕಷ್ಟಿವೆ. ಕ್ಚಿಕರ್ ಡಾಟ್ ಕಾಮ್ ಇತ್ಯಾದಿ ಸೈಟ್ ಗಳ ಮೂಲಕ ಬೆಂಗಳೂರಿನಲ್ಲೂ ಇದನ್ನು ಖರೀದಿಸಬಹುದು. ಚೆನ್ನೈ ಮೂಲದ ಕಂಪನಿಯೊಂದು ಇ-ಸಿಗರೇಟು ಉತ್ಪನ್ನಗಳನ್ನು ಹಲವು ರಾಜ್ಯಗಳಿಗೆ ಪೂರೈಕೆ ಮಾಡುತ್ತಿದೆ. ಇದರ ದರ ಸುಮಾರು 999 ರೂ.ನಿಂದ 2,500 ರೂ.ನಷ್ಟಿದೆ. ಇನ್ನು ಮುಂದೆ ಇ-ಸಿಗರೇಟ್ ಯೋಚನೆ ಮಾಡೋ ಮುನ್ನವೂ ಎರಡೆರಡು ಬಾರಿ ಯೋಚಿಸಿ.

ಧಗ ದಗಿಸುತ್ತಿದೆ ಪೆಟ್ರೋಲ್ ದರ; ಇನ್ನೂ ಒಮ್ಮೆ ಏರಲಿದೆಯೇ ?

|

ಮತದಾರ ಪ್ರಭುವಿಗೆ ಅಂಜಿದಂತೆ ಮಾಡಿ ಚುನಾವಣೆ ಮುಗಿಯುತ್ತಿದ್ದಂತೆ ಕೇಂದ್ರ ಸರಕಾರ ಪೆಟ್ರೋಲ್ ಬೆಲೆಯನ್ನು ಸಿಕ್ಕಾಪಟ್ಟೆ ಏರಿಸಿಬಿಟ್ಟಿದೆ. ಮತ್ತೊಂದು ಆತಂಕದ ವಿಷಯವೆಂದರೆ ಈಗ 5 ರುಪಾಯಿ ಹೆಚ್ಚಿಸಿದ್ದರೂ ತೈಲ ಕಂಪನಿಗಳು ಲೀಟರ್ ಗೆ 6 ರುಪಾಯಿ ನಷ್ಟ ಅನುಭವಿಸುತ್ತಿವೆ. ಇದರಿಂದ ಪಾರಾಗಲು ಮತ್ತೊಮ್ಮೆ ಸದ್ಯದಲ್ಲೇ ಮತ್ತೆ ಪೆಟ್ರೋಲ್ ಬೆಲೆ ಹೆಚ್ಚಳವಾಗುವುದು ಖಚಿತವೆನ್ನಲಾಗಿದೆ.
ಈಗಾಗಲೇ ಸತತವಾಗಿ ಬೆಲೆ ಹೆಚ್ಚಳಗಳಿಂದ ಬಸವಳಿದಿರುವ ಶ್ರೀಸಾಮಾನ್ಯನ ದೈನಂದಿನ ಬದುಕು ಆ ಭಗವಂತನಿಗೇ ಪ್ರೀತಿ ಎನ್ನುವಂತಾಗಿದೆ. ಸಮಾಧಾನಕರ ವಿಷಯವೆಂದರೆ ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ಹೆಚ್ಚಿಸಿಲ್ಲ. ಆದರೆ ಅಡುಗೆ ಅನಿಲದ ದರ ಸಿಡಿಲು ಯಾವುದೇ ಕ್ಷಣ ಅಡುಗೆ ಮನೆಗೆ ಬೆಂಕಿಹಚ್ಚುವ ಸಾಧ್ಯತೆಗಳು ದಿಟ್ಟವಾಗಿವೆ. 

ಶನಿವಾರ ಮಧ್ಯರಾತ್ರಿಯಿಂದ (May 14) ಲೀಟರ್ ಪೆಟ್ರೋಲ್ ಬೆಲೆ 5 ರುಪಾಯಿ ಹೆಚ್ಚಾಗಿದೆ. ಇದರಿಂದ ಬೆಂಗಳೂರಿನಲ್ಲಿ ಪೆಟ್ರೋಲ್ ದರ 71 ರುಪಾಯಿ ಆಗಿದೆ. ಈ ಮಾಸಾಂತ್ಯಕ್ಕೇ ಡೀಸೆಲ್ ಬೆಲೆ 4 ರು. ಏರಲಿದ್ದರೆ ಅಡುಗೆ ಅನಿಲ ಬೆಲೆ 25 ರುಪಾಯಿ ಹೆಚ್ಚಾಗಲಿದೆ. ಆಗ ಪೆಟ್ರೋಲ್ ದರವನ್ನು ಮತ್ತೂ ಒಮ್ಮೆ ಹೆಚ್ಚಿಸುವ ಇರಾದೆಯಿದೆ.
ಅತ್ತ ಪೆಟ್ರೋಲ್ ಮಾರಾಟ ದರ ನಿಯಂತ್ರಣವನ್ನು ಕೇಂದ್ರ ಸರಕಾರ ತನ್ನ ಹಿಡಿತದಿಂದ ಮುಕ್ತಗೊಳಿಸಿದ್ದೇ ಬಂತು ತೈಲ ಕಂಪನಿಗಳು ಬಳಕೆದಾರರ ಮೇಲೆ ಮುರುಕೊಂಡು ಬಿದ್ದಿವೆ. ಶ್ರೀಸಾಮಾನ್ಯನ ಬದುಕಿಗೆ ಸವಾಲೊಡ್ಡುವಂತೆ ಕಳೆದ 11 ತಿಂಗಗಳಲ್ಲಿ 9 ಬಾರಿ ಪೆಟ್ರೋಲ್ ದರಕ್ಕೆ ಕಿಚ್ಚು ಹಚ್ಚಿವೆ

ಹರದನಹಳ್ಳಿಯ ವೀರನಿಗೆ ಇಂದು ಅಂತಿಮ ವಿದಾಯ

| 03 May 2011
ಹಾಸನ, ಮೇ. 03 : ಭಾರತ-ಬಾಂಗ್ಲಾದೇಶದ ಗಡಿಯಲ್ಲಿ ಹಸು ಕಳ್ಳರಿಂದ ಇರಿತಕ್ಕೊಳಗಾಗಿ ಅಸುನೀಗಿರುವ ಗಡಿ ರಕ್ಷಣಾ ದಳದ ಜವಾನ ಕರ್ನಾಟಕದ ಎಚ್.ಟಿ. ಕಾಂತರಾಜು ಅವರ ಅಂತಿಮ ಸಂಸ್ಕಾರವನ್ನು ಅವರ ತವರುನೆಲ ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ಮಂಗಳವಾರ ಕೈಗೊಳ್ಳಲಾಗುತ್ತಿದೆ.

ಬಿಎಸ್ಎಫ್ ನ 57ನೇ ಬಟಾಲಿಯನ್ ನಲ್ಲಿರುವ ಕಾಂತರಾಜು ಕರ್ತವ್ಯನಿರತನಾಗಿರುವಾಗಲೆ ಪಶ್ಚಿಮ ಬಂಗಾಳದ ಪತಿರಾಮ್ ಎಂಬಲ್ಲಿ ಹಸುಗಳ್ಳರಿಂದ ಚೂರಿ ಇರಿತಕ್ಕೊಳಗಾಗಿ ಶನಿವಾರ ರಾತ್ರಿ ಹತ್ಯೆಯಾಗಿದ್ದಾರೆ. ಕಾಂತರಾಜು ಅವರು 1987ರಲ್ಲಿಯೇ ಬಿಎಸ್ಎಫ್ ಸೇರಿದ್ದರು ಮತ್ತು ಇದೇ ವರ್ಷ ಜೂನ್ ನಲ್ಲಿ ನಿವೃತ್ತರಾಗುವವರಿದ್ದರು.

ಮಾನವೀಯತೆ ಮೆರೆದ ದೇವೇಗೌಡ : ಪತ್ನಿ ಹೇಮಾವತಿ ಮತ್ತು 6 ವರ್ಷದ ಮಗಳು ಜಾಹ್ನವಿಯನ್ನು ಅಗಲಿರುವ ಕಾಂತರಾಜು ಅವರ ಮೃತಶರೀರ ಸೋಮವಾರ ಹರದನಹಳ್ಳಿಗೆ ಬಂದು ತಲುಪಿದೆ. ನಮ್ಮ ನಾಯಕರುಗಳೆಲ್ಲ ಒಸಾಮಾನನ್ನು ಹತ್ಯೆಗೈದ ಸಂಭ್ರಮವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಹರದನಹಳ್ಳಿಗೆ ಧಾವಿಸಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಅವರು ಕಾಂತರಾಜು ಅವರ ಕುಟುಂಬವನ್ನು ಭೇಟಿ ಮಾಡಿ, ಸಾಂತ್ವನ ಹೇಳಿ ಮಾನವೀಯತೆ ಮೆರೆದಿದ್ದಾರೆ.

ಭಾರತದ ಈಶಾನ್ಯ ಭಾಗಗಳಲ್ಲಿ ನಮ್ಮ ಕರ್ನಾಟಕದ ಸೈನಿಕರು ಸೇವೆ ಸಲ್ಲಿಸುತ್ತಿದ್ದಾರೆ. ಯಾರಾದರೂ ಹತರಾದರೆ, ಅವರ ದೇಹವನ್ನು ಅಲ್ಲಿಂದ ಇಲ್ಲಿಗೆ ತರಲು ಎರಡರಿಂದ ಮೂರು ದಿನ ಬೇಕಾಗುತ್ತದೆ. ಹುತಾತ್ಮರ ದೇಹವನ್ನು ಇಲ್ಲಿಗೆ ವಿಶೇಷ ವಿಮಾನದಲ್ಲಿ ತರುವ ವ್ಯವಸ್ಥೆ ಮಾಡಬೇಕಾಗಿ ಕೇಂದ್ರಕ್ಕೆ ಆಗ್ರಹಿಸಿರುವುದಾಗಿ ದೇವೇಗೌಡ ಈ ಸಂದರ್ಭದಲ್ಲಿ ಹೇಳಿದರು.

ಹುತಾತ್ಮರಿಗೆ ಅಂತಿಮ ನಮನ ಸಲ್ಲಿಸಿದ ಮಾಜಿ ಸಚಿವ ಎಚ್ ಡಿ ರೇವಣ್ಣ, ಕಾಂತರಾಜು ಅವರ ದುಃಖತಪ್ತ ಕುಟುಂಬಕ್ಕೆ 5 ಲಕ್ಷ ರು. ನಗದು ಮತ್ತು ಒಂದು ನಿವೇಶನವನ್ನು ನೀಡಬೇಕಾಗಿ ರಾಜ್ಯ ಸರಕಾರವನ್ನು ಆಗ್ರಹಿಸಿದರು. ವಿಶ್ವಕಪ್ ಗೆದ್ದ ಕೂಡಲೆ ಕ್ರಿಕೆಟ್ ವೀರರಿಗೆ ಬಿಡಿಎ ನಿವೇಶನ, ನಂತರ 25 ಲಕ್ಷ ರು. ನಗದು ನೀಡುವುದಾಗಿ ಘೋಷಿಸಿದ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು, ಈ ನಮ್ಮ ನಾಡಿನ ವೀರನಿಗೆ ಕನಿಷ್ಠಪಕ್ಷ 5 ಲಕ್ಷ ರು. ನಗದು ಮತ್ತು ಯಾವುದೇ ಒಂದು ಮೂಲೆಯಲ್ಲಿ ನಿವೇಶನ ನೀಡುವ ಮನಸ್ಸಾದರೂ ತೋರುವರೆ?

ಹೊಳೆನರಸೀಪುರ ವರದಿ : ಭಾರತ ಮತ್ತು ಬಾಂಗ್ಲಾ ಗಡಿಯಲ್ಲಿ ಗಡಿ ರಕ್ಷಣೆ ಕಾರ್ಯದಲ್ಲಿ ನಿರತನಾಗಿದ್ದ ತಾಲ್ಲೂಕಿನ ಹರದನಹಳ್ಳಿಯ ಯೋಧ ಎಚ್.ಟಿ. ಕಾಂತರಾಜು ವೈರಿಗಳ ಸಂಚಿಗೆ ಬಲಿಯಾಗಿ ವೀರ ಮರಣವನ್ನಿಪ್ಪಿದ್ದಾರೆ.

ಗಡಿ ರಕ್ಷಣಾ ಪಡೆಯಲ್ಲಿ ಯೋಧನಾಗಿದ್ದ ಹರದನಹಳ್ಳಿಯ ನಿವೃತ್ತ ಶಿಕ್ಷಕ ತಮ್ಮಣ್ಣಗೌಡ ಮತ್ತು ಶಾಂತಮ್ಮ ದಂಪತಿ ಪುತ್ರ ಕಾಂತರಾಜು ಭಾನುವಾರ ಬೆಳಗಿನಜಾವ ಗಡಿ ರಕ್ಷಣೆಯಲ್ಲಿರುವಾಗ ವೈರಿಗಳು ಹಿಂದಿನಿಂದ ಎರಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಯೋಧನ ಪಾರ್ಥಿವ ಶರೀರವನ್ನು ಕೊಲ್ಕತ್ತಾದಿಂದ ವಿಮಾನದಲ್ಲಿ ಬೆಂಗಳೂರಿಗೆ ತಂದು ನಾಳೆ ಹರದನಹಳ್ಳಿಗೆ ತರಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪಿಯುಸಿ ವರೆಗಿನ ವ್ಯಾಸಂಗವನ್ನು ಹಾಸನದ ಕೃಷ್ಣ ಕಾಲೇಜಿನಲ್ಲಿ  ಮುಗಿಸಿ ಕಾಂತರಾಜು, ನಂತರ ಕೈಗಾರಿಕಾ ತರಬೇತಿ ಸಂಸ್ಥೆಗೆ ಸೇರಿದರಾದರೂ ಉತ್ತೀರ್ಣರಾಗಿರಲಿಲ್ಲ. ಬಳಿಕ ಮನೆಯವರ ವಿರೋಧದ ಹೊರತಾಗಿಯೂ 1985 ರಲ್ಲಿ ಗಡಿರಕ್ಷಣಾ ಪಡೆಗೆ ಯೋಧನಾಗಿ ಸೇರಿದ್ದರು. ವೀರಪ್ಪನ್ ಹಿಡಿಯುವ ಕಾರ್ಯಾಚರಣೆಯಲ್ಲೂ ಕಾಂತರಾಜು  ಭಾಗವಹಿಸಿದ್ದರು.

ಇದುವರೆಗೆ ದೇಶ ರಕ್ಷಣೆಯಲ್ಲಿ ತೊಡಗಿದ್ದ ಕಾಂತರಾಜು ಭಾನುವಾರ ನಸುಕಿನ 2.30 ರ ಸಮಯದಲ್ಲಿ ಭಾರತ ಬಾಂಗ್ಲಾ ಗಡಿಯ ಭೀಮ್‌ಪುರ್ ಸಮೀಪ ವೈರಿಗಳಿಂದ ಹತ್ಯೆಗೀಡಾಗಿದ್ದಾರೆ. ಬಾಂಗ್ಲಾದೇಶದ ಬಂಡುಕೋರರು ಈ ಕೃತ್ಯ ಎಸಗಿರ ಬಹುದೆಂದು ಸೇನಾಧಿಕಾರಿಗಳು ಅನು ಮಾನಿಸಿದ್ದಾರೆ ಎಂದು ಕುಟುಂಬದವರಿಗೆ ಮಾಹಿತಿ ಬಂದಿದೆ.

ನಿವೃತ್ತ ಶಿಕ್ಷಕ ತಮ್ಮಣ್ಣಗೌಡರಿಗೆ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರು. ಕಾಂತರಾಜು ಮೊದಲ ಮಗ. ಹೇಮಾವತಿ ಇವರ ಪತ್ನಿ. ಕಾಂತರಾಜು ಪುತ್ರಿ ಜಾಹ್ನವಿಗೆ ಇನ್ನೂ 6 ವರ್ಷ. ಕಾಂತರಾಜು ಅವರ ಸಾವು ಕುಟುಂಬವರ್ಗದವರಿಗಷ್ಟೇ ಅಲ್ಲದೆ. ಗ್ರಾಮಸ್ಥರೆಲ್ಲರಿಗೆ ತೀವ್ರ ದುಃಖ ತರಿಸಿದೆ. ‘ಕಾಂತಾರಾಜು ಸೇವಾ ಅವಧಿ ಇನ್ನೊಂದು ತಿಂಗಳಲ್ಲಿ ಮುಕ್ತಾಯ ವಾಗುತ್ತಿತ್ತು. ಗ್ರಾಮಕ್ಕೆ ಆಗಮಿಸಿ ಇಲ್ಲಿಯೇ ನೆಲೆಸುವ ಭರವಸೆ ನೀಡಿದ್ದ, ಆದರೆ ಈಗ ನಮ್ಮನ್ನು ಬಿಟ್ಟು ಅಗಲಿದ್ದಾನೆ’ ಎಂದು ತಂದೆ ತಮ್ಮಣ್ಣಗೌಡ ನೋವಿನಿಂದ ನುಡಿದರು
.

ಯಾನಾ ಗುಪ್ತಾ ಮಾವ ಬಿನ್ ಲಾಡೆನ್ ಇನ್ನೂ ಜೀವಂತ!

|
ಗರತಿಯಂಗೆ ಸೆರಗಾಕಂಡು ಲಾರಿ ಒಳ್ಗೆ ಕುಂತ್ಕೊಂಡಿದ್ರೆ ಯಾರು ನಿನ್ನ ಮೂಸುತಾರೆ ನಿಂಗವ್ವೋ ಎಂದು ಹೇಳಿದ್ದೇ ತಪ್ಪಾಯ್ತು ನೋಡಿ! ಬಾಲಿವುಡ್ ಮಾಯಾಂಗನೆ ಯಾನಾ ಗುಪ್ತಾ ಏಕ್ ಧಂ ಚಡ್ಡಿಯನ್ನೇ ಕಳಚಿ ಬರುವುದೇ! ಆಮೇಲೆ ಏನಾಯ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದೆಲ್ಲಾ ಒತ್ತಟ್ಟಿಗಿರಲಿ ಆದರೆ ವಿಷಾದದ ಸಂಗತಿ ಎಂದರೆ ಆಕೆಯ ಮಾವ ಬಿನ್ ಲಾಡೆನ್ ಇಂದು ಪಾಕ್‌ನಲ್ಲಿ ಮಟಾಷ್ ಆಗಿದ್ದಾನೆ! 
ಸಂತೋಷದ ಸಂಗತಿ ಎಂದರೆ ಆಕೆಯ ಬಾವ ಬಿಲ್ ಕ್ಲಿಂಟನ್ ಆಯುಸ್ಸು ಇನ್ನೂ ಗಟ್ಟಿಯಾಗಿದೆ. ಅಯ್ಯೋ ಇದೇನ್ರಿ ನಮಗೆ ತಲೆಬುಡ ಅರ್ಥವಾಗುತ್ತಿಲ್ಲಾ ಅಂತಿರಾ? ಪರ್ವಾಗಿಲ್ಲ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಜೋಗಿ' ಚಿತ್ರದ ಈ ಹಾಡನ್ನು ಕೇಳಿದರೆ ಎಲ್ಲವೂ ನಿಮಗೇ ಮನದಟ್ಟಾಗುತ್ತದೆ. ಯಾನಾ ಮಾವನಿಗೆ ಹಿಂಗಾಗಬಾರದಿತ್ತು? ಅಯ್ಯೋ ಪಾಪ!

ಗಂಡು : ನೀನು ಗರತಿಯಂಗೆ ಸೆರಗಾಕಂಡು
ಲಾರಿ ಒಳ್ಗೆ ಕುಂತ್ಕೊಂಡಿದ್ರೆ 
ನೀನು ಗರತಿಯಂಗೆ ಸೆರಗಾಕಂಡು
ಲಾರಿ ಒಳ್ಗೆ ಕುಂತ್ಕೊಂಡಿದ್ರೆ
ಯಾರು ನಿನ್ನ ಮೂಸುತಾರೆ ನಿಂಗವ್ವೋ
ಹೆಣ್ಣು : ಹುಯ್ ಹುಯ್ ಹುಯ್ ಹುಯ್...ಬಿನ್ ಲ್ಯಾಡನ್ನು ನನ್ ಮಾವ
ಸಂಗಡಿಗರು : ಬಿತ್ತರಿ ಬಿತ್ತರಿ ಬಿತ್ತರಿ ಬಿತ್ತರಿ
ಹೆಣ್ಣು : ಬಿಲ್ ಕ್ಲಿಂಟನ್ನು ನನ್ ಬಾವ
ಸಂಗಡಿಗರು : ಬಿತ್ತರಿ ಬಿತ್ತರಿ ಬಿತ್ತರಿ ಬಿತ್ತರಿ
ಹೆಣ್ಣು : ಬಿನ್ ಲ್ಯಾಡನ್ನು ನನ್ ಮಾವ
ಬಿಲ್ ಕ್ಲಿಂಟನ್ನು ನನ್ ಬಾವ
ಹೇ ಹೇ ನಮ್ಮಪ್ಪ ಲಾಲು ಮುಟ್ಟಿದ್ರೆ ಡೀಲು
ಕೈಕಾಲ್ ಕಟ್ಟಿ ಬುಟ್ಟಿಗಾಕ್ತಾರೋ ಹೋ ಹೋ.. ಹಾ
ಸಂಗಡಿಗರು : ನಿಂಗಿ ನಿಂಗಿ ನಿಂಗವ್ವೊ ಈ ಡವ್ವು ಬೇಡ ಬಾರವ್ವೊ
ಹೆಣ್ಣು : ಅ.ಹಾ
ಸಂಗಡಿಗರು : ನಿಂಗಿ ನಿಂಗಿ ನಿಂಗವ್ವೊ ನಿನ್ನ್ ಕುಣಿತ ಹಾಕು ಬಾರವ್ವೊ
ಹೆಣ್ಣು : ಬಿನ್ ಲ್ಯಾಡನ್ನು ನನ್ ಮಾವ
ಬಿಲ್ ಕ್ಲಿಂಟನ್ನು ನನ್ ಬಾವಾ
ಹೆಣ್ಣು : ಮೈಸೂರ್ ರಾಜಂಗ್ ನಾ ಹೂಂ ಅಂದ್ರೆ ಎದ್ದು ಬಿದ್ದು ಬರ್ತಾನೋ
ಸಂಗಡಿಗರು : ಬರ್ತಾನೇನವ್ವ ಬಂದ್ರೆ ಇರ್ತಾನೇನವ್ವ
ಹೆಣ್ಣು : ಆನೆ ಅಂಬಾರಿ ತಂದು ನನ್ನ ಕರ್ಕೊಂಡು ಹೋಯ್ತಾನೋ
ಸಂಗಡಿಗರು : ಹೋಗ್ತೀಯೇನವ್ವ ಆದ್ರೆ ಕಳ್ಸೊರ್ ಯಾರವ್ವ
ಹೆಣ್ಣು : ಯಾರು ಕಾಟ ಕೊಟ್ರು ಅಂತ ನನ್ನ ಕೇಳ್ತಾನೋ
ಪ್ರೀತಿಲ್ ನಾನಿವಿ ಅಂದೇನೋ.....ಅಹ್
ಸಂಗಡಿಗರು : ನಿಂಗಿ ನಿಂಗಿ ನಿಂಗವ್ವೋ ನೀನು ಬಿತ್ತರಿ ಅಂತ ಗೊತ್ತವ್ವ
ಹೆಣ್ಣು : ಅ.ಹಾ
ಸಂಗಡಿಗರು : ನಿಂಗಿ ನಿಂಗಿ ನಿಂಗವ್ವೋ ನಿನ್ನ್ ಛತ್ರಿ ಆಟ ಬೇಡವ್ವ
ಹೆಣ್ಣು : ಬಿನ್ ಲ್ಯಾಡನ್ನು ನನ್ ಮಾವ 
ಬಿಲ್ ಕ್ಲಿಂಟನ್ನು ನನ್ ಬಾವಾ
ಹೆಣ್ಣು : ಹೈಟೆಕ್ ಸಿಟಿ ಎಸ್.ಎಂ.ಕಿಸ್ನ ನನ್ನ ಫ್ಯಾನು ಗೊತ್ತೇನೋ
ಸಂಗಡಿಗರು : ಅಂಗಾ ನಿಂಗವ್ವ ಕೃಷ್ಣ ಸಿಕ್ತಾನೇನವ್ವ
ಹೆಣ್ಣು : ದಿಲ್ಲಿ ಮೆಟ್ಟಿದ ದೇವೇಗೌಡ್ರು ದೂರದ ಸಂಬಂಧಿ ಕಣೋ
ಸಂಗಡಿಗರು : ದೂರನೇನವ್ವ ಎಷ್ಟು ಮೈಲಿ ಹೇಳವ್ವ
ಹೆಣ್ಣು : ಶಿವರಾಜ್‌ಕುಮಾರ್‍ಗ್ ಹೋಗಿ ನಾನು ಚಾಡಿ ಹೇಳ್ತೀನೋ
ನಿಮ್ಮ ಅಂಗಡಿ ನಿಲ್ಸೆ ಬಿಡ್ತೀನೋ
ಸಂಗಡಿಗರು : ನಿಂಗಿ ನಿಂಗಿ ನಿಂಗವ್ವೋ ನಿನ್ನ ಪುಂಗಿ ಬೇಡ ಪುಂಗವ್ವೊ
ಹೆಣ್ಣು : ಅ.ಹಾ
ಸಂಗಡಿಗರು : ನಿಂಗಿ ನಿಂಗಿ ನಿಂಗವ್ವೋ ನಾವ್ ನಿನ್ನ ಸ್ಕೂಲೇ ಬಾರವ್ವೊ
ಹೆಣ್ಣು : ಬಿನ್ ಲ್ಯಾಡನ್ನು ನನ್ ಮಾವ
ಬಿಲ್ ಕ್ಲಿಂಟನ್ನು ನನ್ ಬಾವ
ಹೇ ಹೇ ನಮ್ಮಪ್ಪ ಲಾಲು ಮುಟ್ಟಿದ್ರೆ ಡೀಲು
ಕೈಕಾಲ್ ಕಟ್ಟಿ ಮುಟ್ಟಿ ಕೊಳ್ತಾರೋ ಹಾ
ಸಂಗಡಿಗರು : ನಿಂಗಿ ನಿಂಗಿ ನಿಂಗವ್ವೊ ಈ ಡವ್ವು ಬ್ಯಾಡ ಬಾರವ್ವೋ
ಹೆಣ್ಣು : ಓ.. ಹೋ..
ಸಂಗಡಿಗರು : ನಿಂಗಿ ನಿಂಗಿ ನಿಂಗವ್ವೊ ನಿನ್ನ್ ಕುಣಿತ ಹಾಕು ಬಾರವ್ವೋ
ಹೆಣ್ಣು : ತಕಡ್.. ತಕಿಡ್ ದಾ

ಲಾಡೆನ್ ನಿಧನಕ್ಕೆ ಅಳಬೇಕೋ ನಗಬೇಕೋ?

|
ಒಂದೂ ತಿಳಿಯಲೊಲ್ಲದು. ಬದನೆಕಾಯಿ ಸುಟ್ಟು ತಿಂದರೂ ಸುದ್ದಿ ಬೇಯಿಸಿ ತಿಂದರೂ ಸುದ್ದಿ ಎನ್ನುವಂತಾಗಿರುವ ಕರ್ನಾಟಕದಲ್ಲಿ ಸೋಮವಾರ ಇಡೀ ದಿನ ನಿರ್ಭಾವುಕ ವಾತಾವರಣ ಮನೆಮಾಡಿತ್ತು. ಭಾನುವಾರ ಬೆಳ್ಳಂಬೆಳಗ್ಗೆ ಪಾಕಿಸ್ತಾನದಲ್ಲಿ ನಡೆದ ಲಾಡೆನ್ ಮತ್ತು ಅವನ ಸಂಗಡಿಗರ ನರಮೇಧದ ಸುದ್ದಿ ಕ್ಷಣಾರ್ಧದಲ್ಲಿ ಜಾಗತಿಕ ಮಟ್ಟದಲ್ಲಿ ಸುದ್ದಿ ಆದರೂ ಕೂಡ, ಬೆಂಗಳೂರೂ ಸೇರಿದಂತೆ ಕರ್ನಾಟಕದಲ್ಲಿ ಈ ಬಗ್ಗೆ ಸುದ್ದಿ ಚೂರೂ ಕೂಡ ಸುದ್ದಿಮಾಡದೆ ನಾಗರಿಕ ಪ್ರಪಂಚವನ್ನು ದಂಗುಬಡಿಸಿದರು. ನೆರೆಮನೆಯಲ್ಲಿ ಸಾವು ಇಣುಕಿದರೆ ನಮಗೆ ಸೂತಕ ಇಲ್ಲ, ಮೈಲಿಗೆಯೂ ಆಗುವುದಿಲ್ಲ.
ಯಾರಾದರೊಬ್ಬ ಕಿತ್ತು ಹೋಗಿರೋ ವ್ಯಕ್ತಿಗೆ ಒಂದು ಹರಿದುಹೋಗಿರುವ ಪ್ರಶಸ್ತಿ ಬಂದರೆ, ಅಭಿನಂದನೆಗಳ ಸುರಿಮಳೆಗರೆಯುವ ಈ ನಾಡಿನಲ್ಲಿ ಲಾಡೆನ್ ಸುದ್ದಿಗೆ ಅಷ್ಟಾಗಿ ಪ್ರತಿಕ್ರಿಯೆಗಳು ಬಾರದಿದ್ದುದು ಪತ್ರಕರ್ತ ಸಮುದಾಯಕ್ಕೆ ಸೋಮವಾರದ ಸುದ್ದಿ ಸೋಜಿಗವಾಗಿ ಕಂಡುಬಂತು. ಅಂದಹಾಗೆ ಬೆಂಗಳೂರಿನ ಜಯನಗರ ಸೇರಿದಂತೆ ಕರ್ನಾಟಕದ ನಾನಾ ಕಡೆಗಳಲ್ಲಿ ಸೋಮವಾರ ಸಂಜೆ ವೇಳೆಗೆ ಭಾರೀ ಮಳೆ ಸುರಿದುದರಿಂದಾಗಿ ಅಲ್ಲಲ್ಲಿ ಮರಗಳು ಉರುಳಿ ಬಿದ್ದು ಜನಕ್ಕೆ ತೊಂದರೆ ಉಂಟಾಯಿತು.
ರಾತ್ರಿ 2 ಗಂಟೆ ಹೊತ್ತಿಗೆ ಪತ್ರಿಕೆಯನ್ನು ಮುದ್ರಿಸಿ ಕೈತೊಳೆದುಕೊಳ್ಳುವ ಪತ್ರಿಕಾಲಯಗಳಿಗೆ ಲಾಡೆನ್ ಸುದ್ದಿ ಸೋಮವಾರದ ಎಡಿಷನ್ನುಗಳಿಗೆ ಮಿಸ್ ಆಯಿತು. ಅಮೆರಿಕಾದವರು ತಮ್ಮ ದೇಶದ ಪತ್ರಿಕೆಗಳಿಗೆ ಅನುಕೂಲವಾಗುವ ಸಮಯ ನೋಡಿಕೊಂಡು ಲಾಡೆನ್ ಅವರನ್ನು ಸಾಯಿಸಿದ್ದಾರೆ, ಸ್ವಾರ್ಥಿಗಳು. ಹಾಗಾಗಿ ಉತ್ತರ ಅಮೆರಿಕಾದ ಎಲ್ಲ ಪತ್ರಿಕೆಗಳಿಗೂ ಸೋಮವಾರ ರಸವತ್ತಾದ ಸುದ್ದಿ ಕವಳ ಸಿಕ್ಕಿತು.
ಭಾರತೀಯ ಕಾಲಮಾನ ಸೋಮವಾರ ಬೆಳಗ್ಗೆ 8.30ಕ್ಕೆ ಅಂದರೆ ಅಮೆರಿಕಾ ಪೂರ್ವ ಕರಾವಳಿಯ ಸಮಯ ರಾತ್ರಿ 7 ಗಂಟೆಗೆ ಲಾಡೆನ್ ಸಾವಿನ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸುವ ಕಾರ್ಯಕ್ರಮವಿತ್ತು. ಆದರೆ ಒಬಾಮಾ ಸಾಹೇಬರು ಸ್ವಲ್ಪ ನಿಧಾನಿಸಿ ಒಂದು ಗಂಟೆ ತಡವಾಗಿ ಪ್ರಕಟಿಸಿದರು. ಬಹುಶಃ ಭಾರತ ಮತ್ತು ಪಾಕಿಸ್ತಾನದ ಕಾರ್ಪೊರೇಟ್ ಅಂಗಡಿಗಳು ಮತ್ತು ಟಿವಿ ವಾಹಿನಿಗಳು ಎದ್ದು, ಸ್ನಾನ ಮಾಡಿ ತಿಂದು ಕಚೇರಿಗಳಿಗೆ ಬರುವತನಕ ಒಬಾಮಾ ಕಾದಿದ್ದರು ಎನ್ನುವುದು ಅಮಾಯಕ ವಾಚಕ ಬಂಧುಗಳ ಅರಿವಿಗೆ ಬಾರದೇಹೋಯಿತು.
ಇದೇ ವೇಳೆ, ಲಾಡೆನ್ ಸಾವಿಗೆ ಭಾರತದ ಜನನಾಯಕರು ಎಂದು ಹೇಳಿಕೊಳ್ಳುವ ಯಾವುದೇ ಧೀಮಂತ ಲೀಡರ್ ತನ್ನ ಅಭಿಪ್ರಾಯ ಹಂಚಿಕೊಳ್ಳಲು ಮುಂದಾಗಲಿಲ್ಲ. ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಾದಿಯಾಗಿ ಜಾತಿವಾದಿಗಳು, ಜಾತ್ಯತೀತವಾದಿಗಳು, ಸೋಕಾಲ್ಡ್ ಬುದ್ಧಿಜೀವಿಗಳು ಏನನ್ನೂ ತಿಳಿಸಿದೆ ಮೌನವನ್ನೇ ಸುದ್ದಿಮಾಡಿ ಬರೆಯಬೇಕೆಂದು ಮೀಡಿಯಾದವರಿಗೆ ತಿಳಿಸಿದರು. ಆದರೆ, ಗೃಹಮಂತ್ರಿ ಚಿದಂಬರಂ ಅವರು ಬೇರೆಯವರಂತೆ ವರ್ತಿಸಲಿಲ್ಲ. 9/11ರ ಸೇಡನ್ನು ಅಮೆರಿಕಾ ತೀರಿಸಿಕೊಂಡಿತು ಆದರೆ 26/11ರ ಗತಿ ಏನು ಎಂಬರ್ಥ ನೀಡುವ ಚುಟುಕಾದ ಪತ್ರಿಕಾ ಹೇಳಿಕೆ ನೀಡಿ ಆಡಳಿತ ಕಾರಿಡಾರುಗಳಿಗೆ ಸ್ವಲ್ಪ ಮರ್ಯಾದೆ ತಂದುಕೊಟ್ಟರು. ಆದರೆ, ಬಿಜೆಪಿ ಮಾತ್ರ "ಲಾಡೆನ್ ಸಾವಿನಿಂದ ತೃಪ್ತಿಯಾಗಿದೆ" ಎಂದು ಹೇಳಿ ಸಂತೃಪ್ತಿಯಾಗಿ ಮೃಷ್ಟಾನ್ನ ಭೋಜನ ಮಾಡಿದವರಂತೆ ಹೊದ್ದು ಮಲಗಿಬಿಟ್ಟಿದ್ದಾರೆ.
ನಮ್ಮ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತಿತರ ನಾಯಕರು ಲಾಡೆನ್ ಸಾವಿನ ಬಗ್ಗೆಕುರಿತು ಸಂತಸವನ್ನಾಗಲೀ ಅಥವಾ ದುಃಖವನ್ನಾಗಲೀ ಅಥವಾ ದಿಗ್ಭ್ರಮೆಯನ್ನಾಗಲೀ ವ್ಯಕ್ತಪಡಿಸಲಿಲ್ಲ. ಇನ್ನು, ಎಚ್ ಡಿ. ಕುಮಾರಸ್ವಾಮಿ ಅವರಿಂದ ಮೀಡಿಯಾದವರು ಪ್ರತಿಕ್ರಿಯೆ ನೀರೀಕ್ಷಿಸುವಂತಿರಲಿಲ್ಲ. ಯಾಕೆಂದರೆ ಅವರು ಈಗ ಅಮೆರಿಕಾ ಪ್ರವಾಸದಲ್ಲಿದ್ದು ನ್ಯೂ ಜೆರ್ಸಿ ಪ್ರಾಂತ್ಯದಲ್ಲಿ ಜರುಗುವ, ಅಲ್ಲಿನ ಕನ್ನಡಿಗರು ಏರ್ಪಡಿಸುವ ವಸಂತೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ

ಕೊನೆಯುಸಿರೆಳೆದ ಪುಟ್ಟಪರ್ತಿ ಸಾಯಿಬಾಬಾ

| 25 April 2011
ಏ. 24, 2011 : ಸುಮಾರು ಒಂದು ತಿಂಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ ಸಾಯಿ ಬಾಬಾ (86) ಅವರು ಭಾನುವಾರ ಬೆಳಗ್ಗೆ 7.40ಕ್ಕೆ ಕೊನೆಯುಸಿರೆಳೆದಿದ್ದಾರೆ. ದೇವಮಾನವ ಸಾಯಿಬಾಬಾ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಹೃದಯ ಸ್ತಂಭನಗೊಂಡು ಸಾವನ್ನಪ್ಪಿದ್ದಾರೆ.

ಈ ಕುರಿತು ಸತ್ಯಸಾಯಿ ಬಾಬಾ ಟ್ರಸ್ಟ್ 10.10ಕ್ಕೆ ಅಧಿಕೃತ ಘೋಷಣೆ ಮಾಡಿದೆ. ಪುಟ್ಟಪರ್ತಿಯಲ್ಲಿ ಸ್ಮಶಾನ ಮೌನ ನೆಲೆಸಿದೆ. ಸಾಯಿ ಕುಲವಂತ್ ಹಾಲ್ ನಲ್ಲಿ ಸಾಯಿಬಾಬಾ ಅಂತಿಮ ದರ್ಶನಕ್ಕೆ ಇಂದು ಸಂಜೆ 6 ಗಂಟೆಗೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಭಾನುವಾರ, ಮಂಗಳವಾರ ಮತ್ತು ಬುಧವಾರವೂ ಭಕ್ತರಿಗಾಗಾಗಿ ಬಾಬಾ ಅಂತಿಮ ದರ್ಶನ ಇರುತ್ತದೆ.

ಸಾಯಿಬಾಬಾ ಬಂಧುಗಳು ಒಬ್ಬೊಬ್ಬರಾಗಿ ಮರಣಶಯ್ಯೆಯಲ್ಲಿರುವ ಬಾಬಾ ಅವರನ್ನು ಭೇಟಿ ಮಾಡುತ್ತಿದ್ದಾರೆ. ಬಾಬಾ ಭಕ್ತರು ದುಃಖದ ಮಡುವಿನಲ್ಲಿದ್ದಾರೆ. ಲಕ್ಷಾಂತರ ಭಕ್ತರು ಪುಟ್ಟಪರ್ತಿಯತ್ತ ಧಾವಿಸುತ್ತಿದ್ದಾರೆ. ಪುಟ್ಟಪರ್ತಿ ತುಂಬಾ ಖಾಕಿ ಪಡೆ ಗರ್ಜಿಸುತ್ತಿದೆ. ಪಟ್ಟಣದಲ್ಲಿ ಅಘೋಷಿತ ಬಂದ್ ಇದೆ. ಎಲ್ಲ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ. ಸಮೀಪದ ಹೆಲಿಪ್ಯಾಡ್ ಗಣ್ಯ ವ್ಯಕ್ತಿಗಳ ಆಗಮನಕ್ಕಾಗಿ ಕಾಯುತ್ತಿದೆ. ಹಲವು ದಿನಗಳಿಂದ ಬಾಬಾ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟು, ವಿಷಮಸ್ಥಿತಿ ತಲುಪಿತ್ತು. ಅವರ ಸರ್ವಾಂಗಗಳು ನಿಷ್ಕ್ರಿಯವಾಗಿದ್ದವು. ಯಾವುದೇ ಚಿಕಿತ್ಸೆಗೂ ಬಾಬಾ ಸ್ಪಂದಿಸುತ್ತಿರಲಿಲ್ಲ.

ಸತ್ಯ ಸಾಯಿಬಾಬಾಗೆ ಬ್ರೈನ್ ಡೆಡ್ ಆಗಿತ್ತಾ?

|


ಲಕ್ಷಾಂತರ ಮಂದಿಯ ಆರಾಧ್ಯ ದೈವ ಸತ್ಯ ಸಾಯಿಬಾಬಾ ಯುಗ ಇಂದು ಅಂತ್ಯಗೊಂಡಿದೆ. ದೇವಮಾನವ ಎಂದೇ ಕರೆಯಲ್ಪಡುತ್ತಿದ್ದ ಬಾಬಾ ಅವರ ಆರೋಗ್ಯದ ಬಗ್ಗೆ ಸತ್ಯ ಸಾಯಿ ಟ್ರಸ್ಟ್ ಆಗಲಿ, ಜಿಲ್ಲಾ ಆಡಳಿತವಾಗಲಿ ಯಾವುದೇ ಸ್ಪಷ್ಟ ಮಾಹಿತಿ ನೀಡದೆ, ಒಂದು ರೀತಿ ಗೌಪ್ಯತೆಯನ್ನು ಕಾಯ್ದುಕೊಳ್ಳಲಾಗಿತ್ತು. ವಿವಿಧ ಅಂಗಾಂಗ ವೈಫಲ್ಯ ಕಂಡಿದ್ದ ಬಾಬಾ ಅವರಿಗೆ ಅಂತಿಮವಾಗಿ ಹೃದಯಾಘಾತದಿಂದ ಸಾವು ಉಂಟಾಗಿದೆ ಎನ್ನಲಾಗಿದೆ. ಆದರೆ, ಸಾಯಿಬಾಬಾ ಅವರಿಗೆ ಬ್ರೈನ್ ಡೆಡ್ ಆಗಿತ್ತಾ, ಸಾವಿನ ನಿಜ ಕಾರಣ ಎಂಬುದು ಪ್ರಶ್ನೆಯಾಗೇ ಉಳಿದಿದೆ. 
86 ವರ್ಷದ ಬಾಬಾ ಅವರ ಮೂತ್ರಪಿಂಡಗಳು ವಿಫಲವಾಗಿದ್ದವು, ಯಕೃತ್, ಶ್ವಾಸಕೋಶ ಕೆಲಸ ನಿಲ್ಲಿಸಿದ್ದವು. ಉಸಿರಾಟಕ್ಕೂ ತೊಂದರೆ ಉಂಟಾಗಿ, ಕೃತಕ ಉಸಿರಾಟ ವ್ಯವಸ್ಥೆ ಒದಗಿಸಲಾಗಿತ್ತು.ಹೀಗೆ ವಿವಿಧ ಅಂಗಾಂಗ ವೈಫಲ್ಯದ ಕಾರಣ ಮೆದುಳು ನಿಷ್ಕ್ರಿಯಗೊಂಡಿತ್ತು. ಬಾಬಾ ಬ್ರೈನ್ ಡೆಡ್ ಸ್ಥಿತಿ ತಲುಪಿರುವ ಸಾಧ್ಯತೆಯಿದೆ ಎಂದು ಬೆಂಗಳೂರಿನ ಜಯದೇವ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸಿಎನ್ ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ. 


ಭಕ್ತರ ಪ್ರಶ್ನೆಗೆ ಎಲ್ಲಿದೆ ಉತ್ತರ: ಅಸಂಖ್ಯಾತ ಭಕ್ತರ ಮನ ಪರಿವರ್ತನೆ, ಸೇವಾ ಕಾರ್ಯಕ್ಕೆ ಹಚ್ಚಲು ಬಾಬಾರ ಒಂದು ಮಾತು, ಒಂದು ನಗೆ ಸಾಕಿತ್ತು. ಪವಾಡಗಳ ಮೂಲಕ ಜನಾಕರ್ಷಣೆ ಕೇಂದ್ರ ಬಿಂದುವಾಗಿದ್ದ ಬಾಬಾ ಅವರಿಗೆ ಈ ರೀತಿ ಕ್ಷಣ ಕ್ಷಣ ಸಾಯುವ ಸ್ಥಿತಿ ಉಂಟಾಗಿದ್ದಾದರೂ ಏಕೆ? ಇದೆಲ್ಲ ಬಾಬಾರಿಗೆ ಗೊತ್ತಿರಲಿಲ್ಲವೇ? ದೈಹಿಕ ಕಾಯಿಲೆಗಿಂತ ಬಾಬಾರಿಗೆ ಮಾನಸಿಕವಾಗಿ ಯಾವುದಾದರೂ ಬಲವಾದ ಚಿಂತೆ ಕಾಡಿತ್ತೆ?ಉತ್ತರಾಧಿಕಾರಿ ಆಯ್ಕೆ ವಿಷಯ ಬಾಬಾ ಮನದಲ್ಲಿ ಗೊಂದಲ ಮೂಡಿಸಿತ್ತೆ?
ಸುಮಾರು 26 ದಿನಗಳ ಬಾಬಾ ಅನುಭವಿಸಿದ ನರಕಯಾತನೆ ಸಾರ್ವಜನಿಕರಿಗೆ ತಿಳಿಯಬಾರದು ಎಂದು ವಿಡಿಯೋ ಚಿತ್ರಣ 
ಬಹಿರಂಗಪಡಿಸಲಿಲ್ಲವೇ? ಅಹಾರ ಸೇವನೆ ಇಲ್ಲದೆ ದ್ರವಾಹಾರದಲ್ಲಿ ಕಾಲ ದೂಡುತ್ತಾ ಗುಬ್ಬಚ್ಚಿ ಮರಿಯಂತಾಗಿದ್ದ ಬಾಬಾರ ಆರೋಗ್ಯ ವಿಷಯ ಕೂಡಾ ನಿಗೂಢತೆಯಲ್ಲೇ ಕೊನೆಗೊಳ್ಳುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಸಾಯಿಬಾಬಾ ಪರಂಪರೆಯ ಸತ್ಯಯುಗ ಅಂತ್ಯವಾಗಿದೆ. ಬಾಬಾರ ಜನಸೇವೆಯ ಉಪಯೋಗ ಉಂಡವರು ಅದನ್ನು ಸಮರ್ಥವಾಗಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಹೊರಬೇಕಿದೆ

ಶಿರಡಿ, ಸತ್ಯ ನಂತರ ಪ್ರೇಮ ಸಾಯಿಬಾಬಾ

|
ಸತ್ಯ ಸಾಯಿಬಾಬ ಯುಗ ಇಂದಿಗೆ(ಏ.24,2011) ಅಂತ್ಯಗೊಂಡಿದೆ. ಸಾಯಿಬಾಬಾ ಅವರ ಸಾಮಾಜಿಕ ಸೇವೆಗೆ ಇಡೀ ವಿಶ್ವವೇ ತಲೆದೂಗಿದೆ. ಜಗತ್ತಿನಾದ್ಯಂತ ಇರುವ ಸುಮಾರು 6 ಮಿಲಿಯನ್ ಗೂ ಅಧಿಕ ಭಕ್ತಾದಿಗಳಿಗೆ ಬಾಬಾರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಆದರೆ, ಬಾಬಾಗೆ ಸಾವಿಲ್ಲ. ಆತ್ಮ ಅವಿನಾಶಿ, ಬಾಬಾ ಯೋಗ ನಿದ್ರೆಯಲ್ಲಿದ್ದಾರೆ. 96ನೇ ಹುಟ್ಟುಹಬ್ಬದ ದಿನದಂದು ಪುನಃ ದರ್ಶನ ನೀಡುತ್ತಾರೆ. ಸಾಯಿಬಾಬಾ ಅವತಾರ ಮುಗಿದಿಲ್ಲ ಮತ್ತೆ ಆರಂಭವಾಗುತ್ತದೆ. ಪ್ರೇಮ ಸಾಯಿಯಾಗಿ ಗೋಚರಿಸಲಿದ್ದಾರೆ ಎಂಬ ನಂಬಿಕೆ ಬಲವಾಗಿ ಭಕ್ತರ ಮನಸಲ್ಲಿ ಬೇರೂರಿದೆ. 
96 ವಸಂತಗಳನ್ನು ಕಳೆದ ನಂತರ ಇಹಲೋಕ ತ್ಯಜಿಸುತ್ತೇನೆ. ನಂತರ ಕರ್ನಾಟಕದ ಮಂಡ್ಯಜಿಲ್ಲೆಯ ಗುಣಪರ್ತಿಯಲ್ಲಿ ಪ್ರೇಮ ಸಾಯಿಯಾಗಿ ನಿಮ್ಮ ಮುಂದೆ ಬರುತ್ತೇನೆ. 2023ರ ತನಕ ನನಗಾಗಿ ಕಾಯುತ್ತಿರಿ ಎಂದು ಸ್ವತಃ ಸಾಯಿಬಾಬಾ ಒಮ್ಮೆ ಹೇಳಿದ್ದರು. 

ಬಾಬಾ ಇಚ್ಛಾಮರಣಿಯೇ?: ಹೌದು ಎನ್ನುತ್ತದೆ ಭಕ್ತ ಸಮೂಹ. ನನಗೆ ಬೇಕೆನಿಸಿದಾಗ ಈ ದೇಹ ತ್ಯಾಗ ಮಾಡುತ್ತೇನೆ. ಆದರೂ 96 ವರ್ಷ ಯಾವುದೇ ಮಾರಣಾಂತಿಕ ಕಾಯಿಲೆ ನನ್ನನ್ನು ಬಾಧಿಸದು, 96 ವರ್ಷ ನಿಮ್ಮೊಡನಿರುತ್ತೇನೆ ಎಂದಿದ್ದರು ಆದರೆ, 86 ವರ್ಷಕ್ಕೆ ಅವತಾರ ಮುಗಿಸಿರುವುದು ಸ್ವಲ್ಪ ಗೊಂದಲ ಉಂಟಾಗಿದೆ. ಮಾನವರನ್ನು ಬಾಧಿಸುವ ಕಾಯಿಲೆಯನ್ನು ತಮ್ಮ ದೇಹದಲ್ಲಿ ಆವರಿಸಿಕೊಂಡು ಬಾಬಾ ಯೋಗ ನಿದ್ರೆಗೆ ತೆರಳಿದ್ದಾರೆ. ಅವರೇ ಹೇಳಿದಂತೆ ಆತ್ಮಕ್ಕೆ ಸಾವಿಲ್ಲ. ಬಾಬಾ ಭಕ್ತರನ್ನು ಕೈಬಿಡುವುದಿಲ್ಲ. ಮತ್ತೆ ಅವತರಿಸುತ್ತಾರೆ ಎಂದು ಭಕ್ತರು ನಂಬಿದ್ದಾರೆ. 

ಮಂಡ್ಯ ಕಡೆ ಎಲ್ಲರ ಕಣ್ಣು: ಮಂಡ್ಯದ ಪುಟ್ಟ ಗ್ರಾಮ ಗುಣಪರ್ತಿ ಮೇಲೆ ಎಲ್ಲರ ಕುತೂಹಲದ ನೋಟ ನೆಟ್ಟಿದೆ. ಶಿರಡಿ ಸಾಯಿಬಾಬಾ ಪರಂಪರೆಯ ಕೊನೆಯ ಅವತಾರವಾದ ಪ್ರೇಮ ಸಾಯಿಬಾಬಾ 2023ರ ಹೊತ್ತಿಗೆ ಪ್ರಕಟವಾಗುತ್ತೇನೆ ಎಂದು ಬಾಬಾ ಹೇಳಿದ್ದರು. ಪ್ರೇಮ ಸಾಯಿಬಾಬಾರ ತಾಯಿಯಾಗಿ ಕಸ್ತೂರಿ ಎಂಬ ಹೆಣ್ಣು ಮಗಳು ಕಾಣಿಸಿಕೊಳ್ಳಲಿದ್ದಾರೆ ಎಂದು 2008ರಲ್ಲಿ ಬಾಬಾ ಅಶ್ರಮದಿಂದ ಸುದ್ದಿ ಹೊರ ಬಿದ್ದಿತ್ತು. ಜಾನ್ ಹಿಸ್ಲಾಪ್ ಎಂಬ ಸಾಯಿಬಾಬಾ ಭಕ್ತ ಪ್ರೇಮ ಸಾಯಿಬಾಬಾ ಚಿತ್ರವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದರು.
ಬಾಬಾರ ಪವಾಡಗಳನ್ನು ನಂಬುವ ಭಕ್ತರಿಗೆ, ಅವರ ಸಾಮಾಜಿಕ ಸೇವೆಯನ್ನು ಮೆಚ್ಚುವ ಜನರಿಗೆ, ಮಾನಸಿಕ ಬೆಂಬಲ ಲಾಭ ಪಡೆಯುತ್ತಿದ್ದ ಕ್ರಿಕೆಟ್ಟಿಗರಿಗೆ, ಆಧುನಿಕ ಭಗೀರಥನಂತೆ ಕಂಡ ಬರದ ನಾಡಿನ ಜನರಿಗೆ, ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ಬಾಬಾ ಎಂಬ ವಿಸ್ಮಯ ಜೀವ ಎಂದಿಗೂ ಶಾಶ್ವತ.
| 19 April 2011
ರೇವಾ ಭಾರತದ ಮೊದಲ ಎಲೆಕ್ಟ್ರಿಕ್ ಕಾರು. ಇದು 2 ಡೋರಿನ ಸಣ್ಣ ಹ್ಯಾಚ್ ಬ್ಯಾಕ್ ಕಾರಾಗಿದ್ದು, ಕೇವಲ 2.6 ಮೀಟರ್ ಉದ್ದ, 1.3 ಮೀಟರ್ ಅಗಲ ಮತ್ತು 1.5 ಮೀಟರ್ ಎತ್ತರವಿದೆ. ಇದರ ತೂಕ 750 ಕೆ.ಜಿ ಇದೆ. ಇದರ ಮುಂಬಾಗದ ಸೀಟ್ ನಲ್ಲಿ ಇಬ್ಬರು ದೊಡ್ಡವರು ಮತ್ತು ಹಿಂಬಾಗದಲ್ಲಿ ಇಬ್ಬರು ಮಕ್ಕಳು ಕುಳಿತುಕೊಳ್ಳಲು ಸಾಧ್ಯವಿದೆ. ಹಿಂಬಾಗದ ಸೀಟನ್ನು ಮಡುಚಿದರೆ ಲಗೇಜ್ ಸ್ಥಳಾವಕಾಶ ಸಾಕಷ್ಟಾಗುತ್ತದೆ. ಪ್ರಯಾಣಿಕರು ಮತ್ತು ಲಗೇಜ್ ಸೇರಿ 227 ಕೆ.ಜಿ. ಭಾರ ಹೊರುವ ಸಾಮರ್ಥ್ಯ ಈ ಕಾರಿಗಿದೆ. 

ಆಲ್ಟೊ, ನ್ಯಾನೊ ಕಾರುಗಳಿಗೆ ಹೋಲಿಸಿದರೆ ಇದು ಕೊಂಚ ದುಬಾರಿ ಕಾರೆಂದು ಎನಿಸಬಹುದು. ಇದಕ್ಕೆ ಬೆಂಗಳೂರು ಎಕ್ಸ್ ಶೋರೂಂ ದರ ಸುಮಾರು 3 ಲಕ್ಷ ರೂ.ನಿಂದ 4.15 ಲಕ್ಷ ರೂ. ಸ್ವಲ್ಪ ದುಬಾರಿ ಎನಿಸಿದರೂ ಇದರ ಸವಾರಿ ವೆಚ್ಚ ಹೆಚ್ಚೆಂದರೆ ಪ್ರತಿ ಕಿಲೋಮೀಟರ್ ಗೆ 40 ಪೈಸೆ! ಪೆಟ್ರೊಲ್ ಡೀಸಲ್ ಹಂಗಿಲ್ಲದೇ ಕರೆಂಟ್ ಚಾರ್ಜ್ ಮಾಡುವ ಮೂಲಕ ಸಿಟಿಯಲ್ಲಿ ಆರಾಮವಾಗಿ ಇದರಲ್ಲಿ ಪ್ರಯಾಣಿಸಬಹುದು. 

ಗುಬ್ಬಚ್ಚಿ ಗೂಡಿನಂತಹ ಈ ಪುಟ್ಟ ಕಾರು 6 ವೋಲ್ಟೆಜ್ ನ 8 ಆಸೀಡ್ ಬ್ಯಾಟರಿ ಹೊಂದಿದ್ದು ಒಟ್ಟಾರೆ 48 ವೋಲ್ಟೆಜ್ ಪವರ್ ನೀಡುತ್ತದೆ. ಇದರಲ್ಲಿ ಆನ್ ಬೋರ್ಡ್ ಚಾರ್ಜರ್ ಇದ್ದು, ಸುಲಭವಾಗಿ ಪ್ಲಗ್ ಮೂಲಕ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಎಂಟುಗಂಟೆ ಚಾರ್ಜ್ ಮಾಡಿದರೆ ಪೂರ್ತಿ ತುಂಬುತ್ತದೆ. ರಾತ್ರಿ ಚಾರ್ಜ್ ಇಟ್ಟು ಮಲಗಿದರೆ ಸಾಕು. 

ಪೆಟ್ರೊಲ್ ಡೀಸಲ್ ದರಗಳು ದುಬಾರಿಯಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಇಂತಹ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಬೆಂಗಳೂರಿನ ರಸ್ತೆಗಳಲ್ಲೂ ದಿನೇ ದಿನೇ ರೇವಾ ಕಾರುಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ರೇವಾಐ ಎಂಬುದು ಆಟೋಮೋಟಿವ್ ರಿಸರ್ಚ್ ಅಸೋಸಿಯೇಸನ್ ಮತ್ತು ಯುರೋಪ್ ಆರ್ಥಿಕ ಸಮುದಾಯದಿಂದ ಮಾನ್ಯತೆ ಪಡೆದ ಎಲೆಕ್ಟ್ರಿಕ್ ಕಾರಾಗಿದೆ. ಇಂಗ್ಲೆಂಡ್ ಮತ್ತು ಯುರೋಪ್ ಮಾರುಕಟ್ಟೆಗಳಲ್ಲೂ ರೇವಾ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ರೇವಾ ಪ್ರೊಫೈಲ್
* ಗರಿಷ್ಠ ವೇಗ ಪ್ರತಿಗಂಟೆಗೆ 80 ಕಿ.ಮೀ.
* 8 ಗಂಟೆಯಲ್ಲಿ ಪೂರ್ತಿ ಬ್ಯಾಟರಿ ಚಾರ್ಜ್
* ಟ್ಯೂಬ್ ಲೆಸ್ ಟೈರ್
* ಚಾಲನೆಗೆ ಸುಲಭವಾಗುವಂತಹ ಆಟೋಮ್ಯಾಟಿಕ್ ಗೇರ್
* ನಿರ್ವಹಣೆ ವೆಚ್ಚ ಕಡಿಮೆ
* ಸುಲಭವಾಗಿ ಚಾರ್ಜ್ ಮಾಡಬಹುದು
* ಪರಿಸರ ಸ್ನೇಹಿ

ವಾಹನ ಮಾಲೀಕರಿಗೆ ಕಹಿ ಸುದ್ದಿ; ವಿಮಾ ಪಾಲಿಸಿ ದುಬಾರಿ

|
ರಸ್ತೆ ಅಪಘಾತಕ್ಕೆ ಒಳಗಾದ ವ್ಯಕ್ತಿಗೆ ವಾಹನ ಮಾಲೀಕ ನೀಡಬೇಕಾದ "ಥರ್ಡ್ ಪಾರ್ಟಿ ವಿಮಾ ಪಾಲಿಸಿ" ದರ ಏಪ್ರಿಲ್ 25ರಿಂದ ಅನ್ವಯವಾಗುವಂತೆ ಏರಿಕೆ ಕಾಣಲಿದೆ. ಟ್ರಕ್ ಇತ್ಯಾದಿ ಭಾರಿ ವಾಹನಗಳ ವಿಮಾ ಪಾಲಿಸಿ ದರ ಶೇ. 68ರಷ್ಟು ಮತ್ತು ಕಾರು, ಬೈಕ್ ಪಾಲಿಸಿ ದರಗಳು ಶೇ. 10ರಷ್ಟು ಏರಿಕೆ ಕಾಣಲಿವೆ. ವಾಹನ ಮಾಲೀಕರು ಇನ್ನು ಮುಂದೆ ಪ್ರತಿವರ್ಷ "ಥರ್ಡ್ ಪಾರ್ಟಿ ಪಾಲಿಸಿ" ದರ ಹೆಚ್ಚಳದ "ಅಪಘಾತ"ಕ್ಕೆ ಪಕ್ಕಾಗಲಿದ್ದಾರೆ.

ಥರ್ಡ್ ಪಾರ್ಟಿ ವಿಮಾ ಪಾಲಿಸಿ ದರ ಈ ಹಿಂದೆ ನಾಲ್ಕು ವರ್ಷಗಳಿಗೊಮ್ಮೆ ಬದಲಾಗುತ್ತಿತ್ತು. ಆದರೆ ಇನ್ನು ಮುಂದೆ ಹಣದುಬ್ಬರ ದರ ಮತ್ತು ವಾಹನದ ಸೆಗ್ಮೆಂಟ್ ಗೆ ಅನುಗುಣವಾಗಿ ಪ್ರತಿವರ್ಷ ಪಾಲಿಸಿದರ ಹೆಚ್ಚಿಸಲು ದೇಶದ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಐಆರ್ ಡಿಎ) ನಿರ್ಧರಿಸಿದೆ. 

ರಸ್ತೆ ಅಪಘಾತದಲ್ಲಿ ತೊಂದರೆಗೊಳಗಾಗ ವ್ಯಕ್ತಿಗೆ ಪ್ರತಿ ವಾಹನ ಮಾಲೀಕ ನೀಡುವ ಪರಿಹಾರ (ಥರ್ಡ್ ಪಾರ್ಟಿ) ವಿಮಾ ಪಾಲಿಸಿಯ ನೂತನ ಟಾರೀಫ್ ನ್ನು ಐಆರ್ ಡಿಎ ಪ್ರಕಟಿಸಿದೆ. ಆದರೆ ನೂತನ ಹೆಚ್ಚಳ ಕಳೆದ ಜನವರಿಯಲ್ಲಿ ಐಆರ್ ಡಿರ ಪ್ರಸ್ತಾಪಿಸಿದ ದರಕ್ಕಿಂತ ಕಡಿಮೆಯಾಗಿದೆ. ಉದಾಹರಣೆಗೆ ಕಳೆದ ಜನವರಿಯಲ್ಲಿ ಭಾರಿ ವಾಹನಗಳಿಗೆ ಶೇ. 80ರಷ್ಟು ವಿಮಾ ಪಾಲಿಸಿ ದರ ಹೆಚ್ಚಳ ಮಾಡುವುದಾಗಿ ಐಆರ್ ಡಿಎ ತಿಳಿಸಿತ್ತು. ಆದರೆ ಈಗ ಶೇ. 60ರಷ್ಟು ಮಾತ್ರ ಏರಿಕೆ ಮಾಡಿದೆ. 
ನೂತನ ಪರಿಷ್ಕೃತ ಥರ್ಡ್ ಪಾರ್ಟಿ ವಿಮಾ ಪಾಲಿಸಿ ದರಗಳು ಇಂತಿವೆ. 1 ಸಾವಿರ ಸಿಸಿಗಿಂತ ಕಡಿಮೆಯ ಕಾರುಗಳ ದರ 672 ರೂ.ನಿಂದ 740 ರೂ.ಗೆ ಏರಿಕೆಯಾಗಿದೆ. 1 ಸಾವಿರ ಸಿಸಿಯಿಂದ 1,500 ಸಿಸಿವರೆಗಿನ ಕಾರುಗಳ ಪಾಲಿಸಿ ದರ 880 ರೂ.ಗೆ ಹೆಚ್ಚಾಗಿದೆ. ಈ ಹಿಂದೆ ಇದು 800 ರೂ. ಆಗಿತ್ತು. ದ್ವಿಚಕ್ರ ವಾಹನ ವಿಭಾಗದಲ್ಲಿ 350 ಸಿಸಿಗಿಂತ ಹೆಚ್ಚಿನ ಬೈಕ್ ಗಳ ಪಾಲಿಸಿ ದರಗಳು ಶೇ. 10ರಷ್ಟು ಹೆಚ್ಚಾಗಿದ್ದು 330 ರೂ.ಗೆ ತಲುಪಿದೆ. ಏಳುವರೆ ಸಾವಿರ ಕೆ.ಜಿ.ಗಿಂತ ಹೆಚ್ಚು ತೂಕದ ಭಾರಿ ವಾಹನಗಳ ಪಾಲಿಸಿ ದರಗಳು ಮಾತ್ರ 5 ಸಾವಿರ ರೂ. ಇದ್ದದ್ದು 8,420 ರೂ.ಗೆ ತಲುಪಿದೆ.

ಇದನ್ನೂ ಓದಿ: ವಾಹನ ವಿಮೆ ಕಂತಿನಲ್ಲಿ ಹಣ ಉಳಿಸಲು ಉಪಾಯ, ವಾಹನ ಅಪಘಾತ ಪರಿಹಾರ ಪಡೆಯೋದು ಹೇಗೆ? ಮೋಟರ್-ಥರ್ಡ್ ಪಾರ್ಟಿ ವಿಮಾ ನೀತಿಯ ಮೂಲಕ ನಷ್ಟವನ್ನು ಅನುಭವಿಸುತ್ತಿದ್ದ ವಿಮಾ ಕಂಪನಿಗಳು ನೂತನ ಹೆಚ್ಚಳದಿಂದ ಖುಷಿಗೊಂಡಿವೆ. ಈ ಹಿಂದೆ ವಿಮಾ ದರಗಳನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಪರಿಷ್ಕರಿಸಲಾಗುತ್ತಿತ್ತು. ಇನ್ನು ಮುಂದೆ ವರ್ಷಕ್ಕೊಮ್ಮೆ ವಿಮಾ ಪಾಲಿಸಿ ದರಗಳು ಹೆಚ್ಚಾಗಲಿವೆ. ಪ್ರತಿ ವರ್ಷ ದರ ಹೆಚ್ಚಳಕ್ಕೆ ಐಆರ್ ಡಿಎ ವಿಶೇಷ ಫಾರ್ಮುಲಾ ವೊಂದನ್ನು ರೂಪಿಸಿದೆ. ಅಂದರೆ ಹಣದುಬ್ಬರ ದರ, ವಾಹನಗಳ ದರವನ್ನು ಆಧರಿಸಿ ಪಾಲಿಸಿ ದರ ಪರಿಷ್ಕರಿಸಲಿದೆ.

ಶ್ರೀಕ್ಷೇತ್ರ ಹೊರನಾಡಿನ ಒಳ ಅನುಭವ

| 10 April 2011
ಕಣ್ಣಳತೆಯ ಸುತ್ತಲೂ ಕಣ್ಣು ಹಾಯಿಸಿದಷ್ಟೂ ಪೂರ್ಣವೃತ್ತಾಕಾರದಲ್ಲಿ ದಿಟ್ಟವಾಗಿ ಎದ್ದು ನಿಂತ ಗುಡ್ಡ ಬೆಟ್ಟಗಳಲ್ಲಿ ದಟ್ಟವಾದ ಕಾಡು. ಕಾನನದ ಬೃಹತ್ ಕೋಟೆಯೊಳಗೆ ನಾವಿರುವ ಅನುಭವ. ಅಲ್ಲಿ ನಡೆದಾಡುತ್ತಲೇ ಮರೆತು ಹೋಗಿರುತ್ತದೆ ಭವ.ಅದೇ ಅಲ್ಲಿಯ ಮಹಾತ್ಮೆ ವೈಭವ. ತನುಮನದ ಕಣಕಣದಲ್ಲೂ ತಾನಾಗಿಯೇ ತುಂಬಿಕೊಳ್ಳುತ್ತದೆ ಭಕ್ತಿಭಾವ! ಹೌದು ನಮ್ಮ ನಾಡಿಗೆ ಕಳಶವಿಟ್ಟಂತೆ ಆ ಕ್ಷೇತ್ರ 'ಹೊರನಾಡು'. ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿಯ ನೆಲೆಬೀಡು. ಆ ಕ್ಷೇತ್ರ ದರ್ಶನಮಾಡದವನ ಜನ್ಮವೇ ವ್ಯರ್ಥ, ಅಪೂರ್ಣ ಎಂದರೆ ತಪ್ಪಾಗಲಾರದು.


ನಮ್ಮ ಭಾರತದ ಪುಣ್ಯಕ್ಷೇತ್ರಗಳೇ ಹಾಗೆ. ಸುಂದರ ಪ್ರಕೃತಿ ಇರುವಲ್ಲೇ ತೀರ್ಥಕ್ಷೇತ್ರಗಳು. ತೀರ್ಥಕ್ಷೇತ್ರಗಳು ಇರುವಲ್ಲೇ ಸುಂದರ ಪ್ರಕೃತಿ.ಆದರೆ ಭಕ್ತಜನಸಂದಣಿಯಿಂದ ಸುತ್ತಲಿನ ಪರಿಸರಕ್ಕೆ ಹಾನಿಯಾಗಿರುವುದು ಬಹುತೇಕ ತೀರ್ಥಕ್ಷೇತ್ರಗಳಲ್ಲಿ ಕಂಡುಬರುತ್ತದೆ.ಹೆಚ್ಚು ಹೆಚ್ಚು ಯಾತ್ರಾರ್ಥಿಗಳು ತಮ್ಮ ಕ್ಷೇತ್ರಕ್ಕೆ ದರ್ಶನ ನೀಡಲಿ, ಆ ಮೂಲಕ ಕ್ಷೇತ್ರದ ಅಭಿವೃದ್ಧಿ(ಮುಖ್ಯವಾಗಿ ಆರ್ಥಿಕ ಅಭಿವೃದ್ಧಿ!) ಆಗಲಿ ಎಂದು ದೇವಾಲಯದ ಆಡಳಿತ ಮಂಡಳಿಗಳೂ ಕೂಡ ಸುದ್ದಿವಾಹಿನಿಗಳ ಮೂಲಕ ಹುಚ್ಚು ಪ್ರಚಾರಕ್ಕೆ ಬಿದ್ದಿರುವುದು ಆಯಾ ಕ್ಷೇತ್ರದ ದೇವರುಗಳಿಗೂ ಇಷ್ಟವಿರಲಿಕ್ಕಿಲ್ಲ. 

ಹೀಗೂ ಉಂಟೆಂದು ಅತಿರಂಜಿತ ವಿಶೇಷ ಕಾರ್ಯಕ್ರಮಗಳನ್ನು ಅತಿರಂಜಿತವಾಗಿ ಪ್ರಸಾರ ಮಾಡಿ ಆ ಮೂಲಕ ಕೆಲವು ವಾಹಿನಿಗಳು ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಂಡು ಭಕ್ತಾದಿಗಳ ದಿಕ್ಕುದಾರಿ ತಪ್ಪಿಸುತ್ತಿರುವುದಂತೂ ಇನ್ನೂ ಅಪಾಯಕಾರಿ.ತಮ್ಮ ಇಷ್ಟಾರ್ಥಗಳು ಬೇಡಿದ ಕೂಡಲೇ ಇಡೇರಬೇಕೆಂಬ ವಿಚಿತ್ರ ಮನೋಭಾವ ಭಕ್ತರ ಮನದಲ್ಲಿ ನೆಲೆಯೂರುವಂತಹ ಮನೋಸ್ಥಿತಿಯನ್ನು ತಂದಿಟ್ಟ ಈ ವಾಹಿನಿಗಳ ದುಸ್ಥಿತಿಗೆ ಏನನ್ನಬೇಕೆಂದು ಆ ದೇವರಿಗೂ ತಿಳಿದಂತಿಲ್ಲ. ಅಂತವರು ಭಕ್ತರೇ ಅಲ್ಲ, ದೇವರೊಡನೆ ವ್ಯವಹಾರಕ್ಕೆ ಇಳಿಯುವವರು, ಇಷ್ಟು ಬಂದರೆ ನಿನಗಿಷ್ಟು ಕಾಣಿಕೆ ಎಂಬಂತೆ ದೇವರಿಗೇ ಕಮೀಷನ್ ಆಸೆ ತೋರಿಸಿ ಬೇಡಿಕೆ ಸಲ್ಲಿಸುವವರು?!

ಅದೇನೆ ಇರಲಿ...ಈ ಹೊರಜಗತ್ತಿನ ಅತಿರಂಜಿತ ಪ್ರಚಾರದಿಂದ ಹೊರಗುಳಿದು ತನ್ನದೇ ಆದ ನೈಜಸೊಬಗನ್ನೂ,ಚೆಲುವನ್ನೂ ಇಂದಿಗೂ ಹಾಗೆಯೇ ಉಳಿಸಿಕೊಂಡಿರುವ ಕೆಲವೇ ಕೆಲವು ಕ್ಷೇತ್ರಗಳಲ್ಲಿ 'ಶ್ರೀಕ್ಷೇತ್ರ ಹೊರನಾಡು' ಎಂದರೆ ಅದು ಅತಿಶಯೋಕ್ತಿಯೇನಲ್ಲ.ಅದಕ್ಕೆ ಕಾರಣ ಆ ಶಕ್ತಿಕ್ಷೇತ್ರವನ್ನು ಮುನ್ನಡೆಸುತ್ತಿರುವ ಆ ಒಬ್ಬ ವಿಭಿನ್ನವ್ಯಕ್ತಿಯ ವಿಶೇಷ ಕರ್ತೃತ್ವಶಕ್ತಿ.ಈ ಕ್ಷೇತ್ರದಲ್ಲಿ ಅನ್ನಪೂರ್ಣೆಯು ಧರ್ಮದರ್ಶಿ ಶ್ರೀ ಭೀಮೇಶ್ವರ ಜೋಶಿ ಅವರ ಪಾಲಿಗೆ, 'ಇಚ್ಛಾಶಕ್ತಿ ಜ್ನಾನಶಕ್ತಿ ಕ್ರಿಯಾಶಕ್ತಿ ಪ್ರದಾಯಿನಿ'ಆಗಿದ್ದಾಳೆ. 


ಅಂದರೆ ಧರ್ಮದರ್ಶಿಗಳಿಗೆ ಇಲ್ಲಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಮಾಡಬೇಕೆಂಬ ಉತ್ಕಟವಾದ ಇಚ್ಛೆಯೂ ಇದೆ, ಅವರಲ್ಲಿ ಅದಕ್ಕೆ ಬೇಕಾದ ಜ್ನಾನವೂ ಇದೆ,ಅದನ್ನು ಆ ಕೂಡಲೆ ಕ್ರಿಯಾರೂಪಕ್ಕೆ ಇಳಿಸುವ ಹುಮ್ಮಸ್ಸು, ದೃಢ ಮನಸ್ಸೂ ಇದೆ ಹಾಗು ಈಗಾಗಲೇ ಅದನ್ನು ಕ್ರಿಯಾರೂಪಕ್ಕೆ ಇಳಿಸಿ ಬೇರೆ ಕ್ಷೇತ್ರಗಳಿಗೆ ಮಾದರಿಯಾಗಿದ್ದಾರೆ. ಎಲ್ಲವೂ ದೈವೇಚ್ಛೆ ಎಂಬಂತೆ ಇಲ್ಲಿಯೂ ದೇವಿ ತನ್ನಿಚ್ಛೆಗೆ ಅನುಗುಣವಾಗಿ ಧರ್ಮದರ್ಶಿಗಳಿಗೆ ಹಾಗು ಅವರಿಗೆ ಸಹಕಾರ ನೀಡುತ್ತಿರುವ ಅವರ ಕುಟುಂಬದವರಿಗೆ ಜ್ನಾನ, ಕ್ರಿಯಾಶಕ್ತಿಯನ್ನು ಸಂಪೂರ್ಣವಾಗಿ ದಯಪಾಲಿಸಿದ್ದಾಳೆ ಎಂಬುದಕ್ಕೆ ಕ್ಷೇತ್ರದ ಸೌಂದರ್ಯವೇ ಸಾಕ್ಷಿ.

ಸುಮಾರು ಹದಿನೈದು ವರುಷಗಳ ನಂತರ ಕ್ಷೇತ್ರಕ್ಕೆ ದರ್ಶನವನ್ನು ನೀಡುವ ಅನಿವಾರ್ಯ ಸಂದರ್ಭವೊದಗಿ ಬಂತು. ನಾನು ಧರ್ಮದರ್ಶಿಗಳ ಹತ್ತಿರದ ಸಂಬಂಧಿಯಾದರೂ ಅವರಿಗೆ ಅಂದು ದಿಡೀರ್ ಭೇಟಿ ನೀಡುವ ವಿಚಾರವನ್ನು ತಿಳಿಸಿರಲಿಲ್ಲ. ಹಾಗೊಮ್ಮೆ ತಿಳಿಸಿದ್ದರೆ ದೇವಾಲಯಕ್ಕೆ ಅಂಟಿಕೊಂಡಂತಿರುವ ಅವರ ಮನೆಯಲ್ಲೇ ನನಗಾಗಿ ಅವರೊಡನೆ ಪ್ರತ್ಯೇಕ ಭೋಜನ,ವಸತಿ ವ್ಯವಸ್ಥೆ ಕಲ್ಪಿಸಿ ವಿಶೇಷವಾಗಿ ಉಪಚರಿಸುತ್ತಿದ್ದರು.ಆದರೆ ಎಲ್ಲರಂತೆ ನಾನೂ ಒಬ್ಬ ಸಾಮಾನ್ಯ ಭಕ್ತನಾಗಿ ಒಂದು ದಿನ ಕಳೆದು ಬಂದೆ.


ಹದಿನೈದು ವರುಷದ ಹಿಂದೆ ಹೇಗಿತ್ತೋ ಹಾಗೇ ಇದೆ ಕ್ಷೇತ್ರ(ಅಂದರೆ ಸುತ್ತಲಿನ ಪರಿಸರ). ಆದರೆ ಮೂಲಸೌಕರ್ಯಗಳ ಅಭಿವೃದ್ಧಿ ಆಶ್ಚರ್ಯಕರವಾಗಿ ವೃದ್ಧಿಗೊಂಡಿದೆ.ಭಕ್ತಾದಿಗಳ ವಸತಿಗಾಗಿಯೇ ದೇವಸ್ಥಾನದ ಪಕ್ಕದಲ್ಲಿ ಆಡಳಿತ ಮಂಡಳಿಯಿಂದ ನಿರ್ಮಾಣಗೊಂಡ ಬಹುಮಹಡಿಯ ಬೃಹತ್ ಕಟ್ಟಡ 'ಶ್ರೀ ಅನ್ನಪೂರ್ಣಾ ಭಕ್ತನಿವಾಸ' ಸುಮಾರು 125 ಸಣ್ಣಕೋಣೆಗಳು ಹಾಗು 16 ದೊಡ್ಡಕೋಣೆಗಳಿಂದ ಕೂಡಿದ್ದು ಒಟ್ಟು 800 ಜನ ಯಾತ್ರಾರ್ಥಿಗಳು ಏಕಕಾಲಕ್ಕೆ ಉಳಿದುಕೊಳ್ಳಬಹುದಾಗಿದೆ.


ಲಿಫ್ಟ್ ಕೂಡ ಹೊಂದಿರುವ ಇದನ್ನು ಯಾವುದೇ ಲಾಡ್ಜ್‌ಗಳಿಗೂ ಕಡಿಮೆ ಇಲ್ಲದಂತೆ ಆಧುನಿಕ ಶೈಲಿಯಲ್ಲಿ ನಿರ್ಮಿಸಲಾಗಿದೆ. ಪ್ರತಿಯೊಂದು ಕೋಣೆಯಲ್ಲೂ ಪ್ರತ್ಯೇಕವಾಗಿ ನಿತ್ಯಕರ್ಮಕ್ಕೆ ವ್ಯವಸ್ಥೆ ಇದ್ದೂ, ಒಂದೆಡೆ ಬಿಸಿನೀರಿಗಾಗಿ ಸಾಮೂಹಿಕ ಸ್ನಾನದ ಕೋಣೆಗಳೂ ಇವೆ. ಇಲ್ಲಿ ಗಮನಿಸಬೇಕಾದ ಒಂದು ಸಂಗತಿಯೆಂದರೆ ನಮ್ಮ ನಾಡಿನ ಎಷ್ಟೊಂದು ದೊಡ್ಡ ದೊಡ್ಡ ಕ್ಷೇತ್ರಗಳಲ್ಲೂ ಸ್ನಾನ, ಶೌಚಾಲಯಗಳು ಕಳಪೆಯಾಗಿದ್ದು, ಸ್ವಚ್ಛತೆಯನ್ನೇ ಕಾಣದಾಗಿದೆ. ಭಕ್ತಾದಿಗಳಿಂದ ಸಂಗ್ರಹವಾದ ಅಪಾರ ಹಣವನ್ನು ಆಡಳಿತಮಂಡಳಿಯವರು ಏನು ಮಾಡುತ್ತಿರಬಹುದೆಂದು ನಮಗೇ ಅನುಮಾನ ಮೂಡಲಾರಂಭಿಸುತ್ತದೆ.ನಮ್ಮ ಮನೆಯಲ್ಲೇ ಸ್ವಚ್ಛತೆಯನ್ನು ಬಯಸುವ ನಾವು ಪುಣ್ಯಕ್ಷೇತ್ರಗಳಲ್ಲಿ ಅದನ್ನು ಇನ್ನೂ ಹೆಚ್ಚು ನಿರೀಕ್ಷಿಸುತ್ತೇವೆ. ನಿರೀಕ್ಷೆ ಹುಸಿಯಾದಾಗ ಸಹಜವಾಗಿ ಬೇಸರವಾಗುತ್ತದೆ. ಆದರೂ ಇದು ’ದೈವಸನ್ನಿಧಿ’ಯೆಂದು ನಾವು ಯಾರನ್ನೂ ನಿಂದಿಸದೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕೆಂದು ವಿರೋಧಿಮನೋಭಾವದಿಂದ ಹಿಂದೆಸರಿದು ಸುಮ್ಮನಾಗಿಬಿಡುತ್ತೇವೆ. ಅಂತರಂಗಕ್ಕೆ ಸೀಮಿತವಾಗುವ ಕೋಪ ದೇವರ ದರ್ಶನದಿಂದ ಶಾಂತವಾಗಿ ಬಿಡುತ್ತದೆ.ಆದರೆ ಒಳಮನಸ್ಸಿನಲ್ಲೂ ಕೋಪಿಸಿಕೊಳ್ಳುವ ಸಂದರ್ಭ ಹೊರನಾಡಿನಲ್ಲಿ ಬರುವುದೇ ಇಲ್ಲ ಎಂಬುದೇ ಆ ಕ್ಷೇತ್ರದ ಅನನ್ಯತೆಗೆ ಸಾಕ್ಷಿ.


ಯಾವುದೇ ಒಂದು ಕ್ಷೇತ್ರಕ್ಕೆ ಅದರದೇ ಆದ ಶಕ್ತಿ ಇದ್ದೇ ಇರುತ್ತದೆ. ಆ ವಿಚಾರದಲ್ಲಿ ಸಂಶಯವೇ ಇಲ್ಲ. ಆದರೆ ಆ ಅಸಾಮಾನ್ಯ ಅಗೋಚರಶಕ್ತಿಯ ಅನುಭವವನ್ನು ಸಾಮಾನ್ಯರಾದ ನಾವು ನಮ್ಮೊಳಗೆ ಇಳಿಸಿಕೊಳ್ಳಲು ನಮ್ಮ ಚಿತ್ತ ಚಿನ್ಮಯವಾಗಿ ಪ್ರಸನ್ನಗೊಂಡಿರಬೇಕಾಗುತ್ತದೆ.ಚಿತ್ತ ಪ್ರಸನ್ನವಾಗಿರಲು ಕ್ಷೇತ್ರದ ಸುತ್ತಲಿನ ವಾತಾವರಣವೂ ಅದಕ್ಕೆ ಪೂರಕವಾಗಿರಬೇಕಾಗುತ್ತದೆ.’ತೀರ್ಥವನ್ನು ಎಲ್ಲಿ ಕೊಡುತ್ತಾರೆ?’ಎಂದು ಕೇಳಿದರೆ ಅರ್ಥವಿಲ್ಲದಂತೆ ಅರ್ಚಕನೊಬ್ಬ ಸಿಡುಕಿದರೆ ಆಗಷ್ಟೇ ದರ್ಶನದಿಂದಾದ ಆನಂದಾನುಭವ ನಿರಂತರವಾಗದೆ ಕ್ಷಣಮಾತ್ರದಲ್ಲಿ ಮನಸ್ಸು ಕಲಕಿಬಿಡುತ್ತದೆ. ತನುಮನದಲ್ಲಿ ಆಗ ತಾನೇ ಅರಳಿದ ಭಕ್ತಿಯೆಂಬ ಹೂವನ್ನು ಅಲ್ಲೇ ದೇವಾಲಯದ ಸಿಬ್ಬಂದಿವರ್ಗ ಹೊಸಕಿ ಬಿಡುತ್ತಾರೆ.ಒಳಗೆ ದೇವರಿಗೆ ಮಂಗಳಾರತಿ ಮಾಡುವ ಅರ್ಚಕ ಹೊರಗೆ ಭಕ್ತಾದಿಗಳಿಗೂ ಮಂಗಳಾರತಿ ಮಾಡುವುದು ತನ್ನದೇ ಕೆಲಸವೆಂದು ಭಾವಿಸಿಬಿಟ್ಟಿರುತ್ತಾನೆ. 


ದರ್ಶನಮಾತ್ರದಿಂದ ನಮ್ಮ ಆಂತರ್ಯದಲ್ಲಿ ಹಚ್ಚಿಸಿಕೊಂಡ ಆಧ್ಯಾತ್ಮದ ದೀಪವನ್ನು ಆರಿಸಿ ಅರ್ಚಕನ ಸಹಾಯಕ ಕಿಚ್ಚನ್ನು ಹಚ್ಚಿಬಿಡುತ್ತಾನೆ.ಇಂತಹ ಅನಾರೋಗ್ಯಕರ,ಅಹಿತಕರ ಘಟನೆಗಳಿಂದ ಭಕ್ತಾದಿಗಳಿಗೆ ಬೇಸರವಾಗಬಾರದೆಂದು ಹೊರನಾಡಿನ ಧರ್ಮದರ್ಶಿಗಳು ಸಿಬ್ಬಂದಿವರ್ಗದವರಿಗೂ ಒಂದು ಶಿಸ್ತು, ನೀತಿಸಂಹಿತೆಯನ್ನು ಜಾರಿಗೆ ತಂದಿದ್ದಾರೆ.ಭಕ್ತರನ್ನು ಹೇಗೆ ಪ್ರೀತಿಯಿಂದ ಉಪಚರಿಸಬೇಕೆಂಬ ಸಾಮಾನ್ಯಸಂಸ್ಕಾರವನ್ನು ಸಿಬ್ಬಂದಿಗಳಿಗೆ ಪ್ರೀತಿಯಿಂದ ಹೇಳಿಕೊಟ್ಟಿದ್ದಾರೆ. ಅಂತೆಯೇ ಅವರೆಲ್ಲ ಇದನ್ನು ಪಾಲಿಸುತ್ತಾ ಧರ್ಮದರ್ಶಿಗಳ ಅಣತಿಯಂತೆ ಕ್ಷೇತ್ರದಲ್ಲಿ ಒಂದು ಹಿತಕರವಾದ ಆಧ್ಯಾತ್ಮಿಕ ವಾತಾವರಣವನ್ನು ನಿರ್ಮಿಸಿದ್ದಾರೆ.


’ಅನ್ನಪೂರ್ಣೇಶರಿ ಅನ್ನದಾಯಿನಿ’ಎಂಬ ಮಾತಿಗೆ ಅನ್ವರ್ಥವಾಗಿ ಹಗಲು-ರಾತ್ರಿ ದಿನದ 24 ಗಂಟೆಗಳ ಕಾಲವೂ ಹಸಿದವರ ಹಸಿವ ನೀಗಿಸಲು ಅನ್ನದಾಸೋಹ ನಡೆಯುತ್ತಿದೆ.’ನಿಮ್ಮದು ಊಟ ಆಯಿತಾ?...ಬನ್ನಿ ಊಟ ಮಾಡಿ’ಎಂದು ಸಿಬ್ಬಂದಿಯವರೇ ಊಟಕ್ಕೆ ಕರೆದುಕೊಂಡುಹೋಗಿ ಅನ್ನವನಿಕ್ಕುವ ಪದ್ಧತಿ ಈ ನಾಡಿನಲ್ಲಿ ಪ್ರಾಯಶಃ ಅನ್ನಪೂರ್ಣೇಶ್ವರಿಯ ಕ್ಷೇತ್ರ ಹೊರನಾಡಿನಲ್ಲಿ ಮಾತ್ರ.’ಅದೇನು ಮಹಾ ಬಿಡಿ ದೇವಾಲಯಕ್ಕೆ ಉತ್ತಮ ಆದಾಯವಿದೆ ಮಾಡುತ್ತಿದ್ದಾರೆ’ ಎಂದು ನೀವು ಸುಲಭವಾಗಿ ಹೇಳಬಹುದು ಆದರೆ ಅನ್ನಪ್ರಸಾದವನ್ನು ವ್ಯವಸ್ಥಿತವಾಗಿ ಭಕ್ತಕೋಟಿಗೆ ನಿತ್ಯ ಸಮರ್ಪಣೆ ಮಾಡುವುದಕ್ಕೂ ಆಡಳಿತವರ್ಗಕ್ಕೆ ಒಂದು ಒಳ್ಳೆಯ ಮನಸ್ಸಿರಬೇಕು.ಮನಸ್ಸಿಟ್ಟು ಆ ಕಾರ್ಯವನ್ನು ಲೋಪವಿಲ್ಲದಂತೆ ಮುನ್ನಡೆಸುವ ಆ ಮಹಾಯಜ್ನದಲ್ಲಿ ಅವರೂ ಭಾಗಿಗಳಾಗಬೇಕು.


ಅದನ್ನು ನೀವು ಹೊರನಾಡಿನಲ್ಲಿ ಕಣ್ಣಾರೆ ನೋಡಬಹುದು.ಏಕೆಂದರೆ ರಾಜ್ಯದ ಮೂಲೆಮೂಲೆಯಿಂದ ಬರುವ ಭಕ್ತಾದಿಗಳಿಂದ ಅಪಾರ ಆದಾಯವಿದ್ದೂ ಶಕ್ತಿಕ್ಷೇತ್ರವೊಂದರಲ್ಲಿ ಇಂದಿಗೂ ಮಧ್ಯಾಹ್ನ ಒಂದು ಹೊತ್ತು ಕೂಡ ಪ್ರಸಾದಭೋಜನದ ವ್ಯವಸ್ಥೆ ಮಾಡದಿರುವುದು ಭಕ್ತರ ಬಗ್ಗೆ ಆ ಕ್ಷೇತ್ರದ ಆಡಳಿತಮಂಡಳಿಗೆ ಇರುವ ನಿರ್ಲ್ಯಕ್ಷ್ಯತನವನ್ನು ತೋರಿಸುತ್ತಿದೆ. ದೇವಾಲಯದ ಎದುರಿನಲ್ಲೇ ಇರುವ ತನ್ನ ಸಂಬಂಧಿಯ ಹೋಟೆಲ್ ಲಾಭಗಳಿಸಲಿ, ಆ ಮೂಲಕ ಹಣ ಮಾಡೋಣ, ಎಂಬ ಆಡಳಿತ ಮಂಡಳಿಯ ಅರ್ಚಕರ ವಿಪರೀತ ಹಣದ ದಾಹಕ್ಕೆ ಏನನ್ನಬೇಕು?ಅವರ ಅರ್ಥಕಳೆದುಕೊಂಡ ಸ್ವಾರ್ಥಭರಿತ ಆರ್ಥಿಕ ಮನೋಭಾವಕ್ಕೆ ಆ ದೇವಿಯೇ ಮತಿ ನೀಡಬೇಕು. ಇದೇನು ವಿಷಯಾಂತರವಾಯಿತಲ್ಲ ಅನ್ನ ಬೇಡಿ, ಭಕ್ತರ ಸಂಖ್ಯೆ ಅಧಿಕವಿದ್ದೆಡೆಯೆಲ್ಲಾ ಕ್ಷೇತ್ರದ ಅಭಿವೃದ್ಧಿ ಅಧಿಕವಾಗಿದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿಯೆಂಬುದು ಮೇಲಿನ ಒಂದು ಉದಾಹರಣೆಯಿಂದ ಸಾಬೀತಾದಂತಾಯಿತು.


ಅಂದಹಾಗೆ ನೀವೆಲ್ಲಾ ಒಮ್ಮೆ ಹೊರನಾಡಿಗೆ ಹೋಗಿಬನ್ನಿ. ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಸಲಹೆ ಕೊಡಬೇಕೆನಿಸಿದರೆ ನೇರವಾಗಿ ಧರ್ಮದರ್ಶಿಗಳನ್ನು ಭೇಟಿಮಾಡಿ. ಅಹಂಕಾರವಿಲ್ಲದ, ಗಾಂಭೀರ್ಯಪೂರ್ಣ ವ್ಯಕ್ತಿತ್ವದ ಶ್ರೀ ಭೀಮೇಶ್ವರ ಜೋಶಿ ಅವರಿಗೆ ಒಳ್ಳೆಯ ಸಲಹೆಸೂಚನೆಗಳನ್ನು ಸದಾ ಸ್ವಾಗತಿಸುವ ಔದಾರ್ಯಮನೋಭಾವವಿದೆ. ಹಾಗು ಅವರ ಈ ಮನೋಭಾವವೇ ಕ್ಷೇತ್ರದ ಇಂದಿನ ಔನ್ನತ್ಯಕ್ಕೆ ಕಾರಣವಾಗಿದೆ. ಅನ್ನಪೂರ್ಣೆ ಅವರ ಸಂಪೂರ್ಣಸೇವೆಯನ್ನು ಇನ್ನೂ ನೂರಾರು ಕಾಲ ಸ್ವೀಕರಿಸಲಿ ಎಂಬುದೇ ಭಕ್ತರ ಆಶಯ.
-ಚಿನ್ಮಯ.ಎಂ.ರಾವ್, ಹೊನಗೋಡು

ಬೆಂಗಳೂರು ಕ್ಷೌರಿಕನೊಬ್ಬನ ಬಳಿ ಲಕ್ಷುರಿ ಕಾರುಗಳ ಸಂತೆ

|
ಮಣ್ಣಲ್ಲಿ ಬಿದ್ದೊನು
ಮುಗಿಲಲ್ಲಿ ಎದ್ದನು
ಕತ್ಲಲ್ಲಿ ಇದ್ದನು
ಬಂಗಾರ ಗೆದ್ದನು
ಹೇಗಿದ್ದ ಹೇಗಾದ ಗೊತ್ತಾ
ನಮ್ಮ ಚಿನ್ನಾರಿ ಮುತ್ತ
ನಮ್ಮ ಚಿನ್ನಾರಿ ಮುತ್ತ ...
     ಆ ಸುದ್ದಿ ಓದಿದ ತಕ್ಷಣ ಈ ಹಾಡು ಪದೇ ಪದೇ ಕಾಡಲಾರಂಬಿಸಿತ್ತು. ಅದು ನಿನ್ನೆಯ ಬೆಂಗಳೂರು ಮಿರರ್ ನಲ್ಲಿ ಪ್ರಕಟಗೊಂಡ ಲೇಖನ. ಅದನ್ನು ಓದಿದಾಗ ಅಚ್ಚರಿ, ಖುಷಿ, ಹೀಗೂ ಉಂಟೆ ಎಂಬೆಲ್ಲ ಪದಗಳು ಮನಸ್ಸಿನಲ್ಲಿ ಮೂಡಿದ್ದೂ ಸುಳ್ಳಲ್ಲ. 
     ಬೆಂಗಳೂರಿನಲ್ಲಿರುವ ಬಾರ್ಬರ್ ಒಬ್ಬರ ಬಳಿ ಕೋಟ್ಯಾಧಿಪತಿಗಳಲ್ಲಿ ಮಾತ್ರ ಕಾಣ ಸಿಗುವ ರೋಲ್ಸ್ ರಾಯ್ಸಿ ಮತ್ತು ಬಿಎಂಡಬ್ಲ್ಯು ಕಾರುಗಳಿವೆ ಎಂಬ ಸುದ್ದಿ ಓದಿದಾಗ "ಅಬ್ಬಾ" ಅನಿಸಿದ್ದು ಮಾತ್ರ ನಿಜ. ಉದ್ಯಾನನಗರಿಯ ಶ್ರೀಮಂತ ಭಾಗವೊಂದಾದ "ಬ್ರಿಗೆಡ್ ಇನ್ಶುಟ್ಯೂಟ್" ಬಳಿಯಿರುವ ಬಾರ್ಬರ್ ರಮೇಶ್ ಬಾಬು ಎಂಬವರ ಬಳಿ ಲಕ್ಷುರಿ ಕಾರುಗಳು ಸಾಕಷ್ಟಿವೆ. ರಮೇಶ್ ವೃತ್ತಿಪರ ಬಾರ್ಬರ್. ಐಷಾರಾಮಿ ಕಾರುಗಳ ಸಂಗ್ರಹದ ಹವ್ಯಾಸವೂ ಇವರಿಗಿದೆ. ಅವರ ವಯಸ್ಸು 40. 
       ತಾನು ಕಷ್ಟಪಟ್ಟು ಗಳಿಸಿ ಕೂಡಿಟ್ಟ ಹಣವನ್ನು ಐಷಾರಾಮಿ ಕಾರುಗಳಿಗೆ ಸುರಿದಿದ್ದಾರೆ. ಇದಕ್ಕಾಗಿ ದೊಡ್ಡ ಮೊತ್ತದ ಬ್ಯಾಂಕ್ ಸಾಲವನ್ನೂ ಪಡೆದಿದ್ದಾರೆ. ಬ್ಯಾಂಕ್ ಗೆ ಪ್ರತಿತಿಂಗಳೂ ಸುಮಾರು 7 ಲಕ್ಷ ರೂಪಾಯಿಯಷ್ಟು ಪಾವತಿಸುತ್ತಿದ್ದಾರಂತೆ. ಅವರಿಗೆ ಸಾಕಷ್ಟು ಶ್ರೀಮಂತ ಗ್ರಾಹಕರಿದ್ದಾರೆ. ಬಾಲಿವುಡ್, ಟಾಲಿವುಡ್ ನ ಸಾಕಷ್ಟು ಗ್ರಾಹಕರೂ ಇವರಲ್ಲಿಗೆ ಬರುತ್ತಾರೆ. ಇವರು ರೆಗ್ಯುಲರ್ ಗ್ರಾಹಕರಿಗೆ ಹೇರ್ ಕಟ್ಟಿಂಗ್ ಗೆ ಜಾಸ್ತಿ ದುಡ್ಡು ತೆಗೆದುಕೊಳ್ಳುತ್ತಾರೆ ಎಂದು ಭಾವಿಸಬೇಡಿ. ಅವರಿಂದ ಕ್ಷೌರಕ್ಕೆ ಈಗಲೂ ಅವರು ತೆಗೆದುಕೊಳ್ಳುವುದು 65 ರೂಪಾಯಿಯಂತೆ. 
ಅಂದಹಾಗೇ ತನ್ನ ರೋಲ್ಸ್ ರಾಯ್ಸಿ ಕಾರನ್ನು ಟ್ರಾವೆಲ್ ಏಜೆನ್ಸಿಯೊಂದರ ಮೂಲಕ ಬಾಡಿಗೆಗೆ ನೀಡುತ್ತಾರೆ. ಇದರಿಂದ ದಿನಕ್ಕೆ ಸುಮಾರು 75 ಸಾವಿರ ರೂಪಾಯಿ ಬಾಡಿಗೆ ದೊರಕುತ್ತದೆಯಂತೆ! ಇಂತಹ ಕಾರನ್ನು ಬೆಂಗಳೂರಿನಲ್ಲಿ ಹೊಂದಿರುವುದು ಕೇವಲ ನಾಲ್ಕೇ ಜನ. ದಯಾನಂದ ಪೈ, ರಾಯಲ್ ಆರ್ಕಿಡ್ ಹೋಟೆಲ್ ನ ಮಾಲೀಕರಾದ ಬಾಲ್ಜಿ ಮತ್ತು ಗೋಲ್ಡ್ ಪಿಂಚ್ ಹೋಟೆಲ್ ನ ಪ್ರಕಾಶ್ ಶೆಟ್ಟಿಯಲ್ಲೂ ಇಂತಹ ಕಾರುಗಳಿವೆ. ಮೊನ್ನೆ ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ಸಂದರ್ಭದಲ್ಲಿ ಹೀರೋ ಹೋಂಡಾ ಚೇರ್ಮನ್ ರೋಲ್ಸ್ ರಾಯ್ಸಿ ಘೋಸ್ಟ್ ಕಾರನ್ನು ಬಾಡಿಗೆಗೆ ತೆಗೆದುಕೊಂಡಿದ್ದರಂತೆ.
     ಮುಂದಿನ ವರ್ಷ ಸುಮಾರು 8ರಿಂದ 9 ಕೋಟಿ ರೂಪಾಯಿಯ ಐಷಾರಾಮಿ ಕಾರೊಂದನ್ನು ಖರೀದಿಸುವ ಯೋಚನೆಯೂ ಇವರಿಗಿದೆಯಂತೆ! ಈಗ ಇವರಲ್ಲಿ ಇಎಸ್ ಮತ್ತು ವಿಯಾನೊ ಸರಣಿಯ ಮರ್ಸಿಡಿಸ್ ಬೆಂಝ್ ಮತ್ತು 5, 7 ಸೀರಿಸ್ ನ ಬಿಎಂಡಬ್ಲ್ಯು ಕಾರುಗಳಿವೆ. ಜೊತೆಗೆ ಸುಮಾರು 16 ಲಕ್ಷ ರೂಪಾಯಿಯ ಸುಜುಕಿ ಇಂಟ್ರಡರ್ ಎಂಬ ಬೈಕ್ ಕೂಡ ಇದೆ. ಅದನ್ನು ತನ್ನ ಸ್ನೇಹಿತರೊಂದಿಗೆ ವಾರಾಂತ್ಯದ ರೈಡ್ ಗೆ ಬಳಸುತ್ತಾರಂತೆ. 1979ರಲ್ಲಿ ಇವರ ತಂದೆ ಸತ್ತ ನಂತರ ಬ್ರಿಗೆಡ್ ರಸ್ತೆಯಲ್ಲಿರುವ ಬಾರ್ಬರ್ ಷಾಪ್ ನಿಂದ ಇವರು ಗಳಿಸುತ್ತಿದ್ದದ್ದು ದಿನಕ್ಕೆ ಕೇವಲ 5 ರೂಪಾಯಿ. ಈಗ ಇವರ ಬಳಿ 5 ಕೋಟಿ ರೂ.ಗೆ ಹತ್ತಿರವಿರುವ ಐಷಾರಾಮಿ ಕಾರುಗಳು ಬಾಡಿಗೆಗಿದೆ. ಮಿರರ್ ನಲ್ಲಿ ಬಂದ ಆ ಸುದ್ದಿ ಓದಿದ ನಂತರ ಚಿನ್ನಾರಿ ಮುತ್ತಾ ಹಾಡು ಮತ್ತೆ ಮತ್ತೆ ಕಾಡುತ್ತಿದೆ. ಹೇಗಿದ್ದ ಹೇಗಾದ ಗೊತ್ತಾ...
-ಚಂದ್ರ ಶಾಂತಿನಗರ

ನಡೆದಾಡುವ ದೇವರಿಗೆ 104ನೇ ಹುಟ್ಟುಹಬ್ಬ

| 02 April 2011

ತುಮಕೂರು, ಏ.1: ತ್ರಿವಿಧ ದಾಸೋಹಿ, ನಡೆದಾಡುವ ದೆವರೆಂದೇ ವಿಶ್ವಖ್ಯಾತಿ ಗಳಿಸಿರುವ ಸಿದ್ದಗಂಗಾ ಮಠಾಧ್ಯಕ್ಷ, ಕರ್ನಾಟಕ ರತ್ನ ಡಾ. ಶಿವಕುಮಾರ ಸ್ವಾಮೀಜಿ ಅವರು ಇಂದು ತಮ್ಮ 104ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಮುಂಜಾನೆಯಿಂದಲೇ ಸಿದ್ದಗಂಗಾ ಮಠಕ್ಕೆ ಭಕ್ತಸಮೂಹ ಹರಿದು ಬರುತ್ತಿದ್ದು, ಸ್ವಾಮೀಜಿಗಳ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸೋಮಣ್ಣ ಸೇರಿದಂತೆ ಹಲವಾರು ಮುಖಂಡರು ತಮ್ಮ ಕುಟುಂಬ ಸಮೇತ ಶ್ರೀಗಳ ಪಾದಗೆರಗಿ ಆಶೀರ್ವಾದ ಬೇಡಿದರು.

ಇಂದು ಮುಂಜಾನೆ 5 ಗಂಟೆಗೆ ವಿವಿಧ ಮಠಾಧಿಪತಿಗಳ ದಿವ್ಯ ಸಾನಿಧ್ಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಿತು. ನಾಡಿನ ವಿವಿಧೆಡೆಗಳಿಂದ ಬಂದಿರುವ ಭಕ್ತಾದಿಗಳು ಶ್ರೀಗಳ ಪಾದ ಪೂಜೆ ನೆರವೇರಿಸಿ ಆಶೀರ್ವಾದ ಪಡೆದರು. ಲಕ್ಷಾಂತರ ಭಕ್ತಾದಿಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆಯಿದ್ದು, ಎಲ್ಲವೂ ಅಚ್ಚುಕಟ್ಟಾಗಿ ಸಾಗಿದೆ. ತುಮಕೂರು ಸೇರಿದಂತೆ ವಿವಿಧೆಡೆ ಸ್ವಾಮೀಜಿಗಳ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದು ತುಮಕೂರು ರೋಟರಿ ಅಧ್ಯಕ್ಷ ಎಚ್ ಆರ್ ವಿಶ್ವನಾಥ್ ಹೇಳಿದರು.

12ನೇ ಶತಮಾನದ ಶರಣರ ಸಾಮಾಜಿಕ, ಧಾರ್ಮಿಕ ಮತ್ತು ನೈತಿಕ ಕ್ರಾಂತಿಯ ಪ್ರತೀಕವಾಗಿರುವ ಸಿದ್ಧಗಂಗಾ ಮಠದ ಕೀರ್ತಿಯನ್ನು ಹೆಚ್ಚಿಸಿದವರು ಶಿವಕುಮಾರ ಸ್ವಾಮೀಜಿಗಳು ಎಂದರೆ ತಪ್ಪಾಗಲಾರದು. ಚಿರಯೌವನದ ಪ್ರತೀಕದಂತಿರುವ ಕ್ರೀಯಾಶೀಲ ಸ್ವಾಮೀಜಿಗಳು, ಮಠದ ಸುಮಾರು 8 ಸಾವಿರ ಮಕ್ಕಳಿಗೆ ಅನ್ನ, ಶಿಕ್ಷಣ ಹಾಗೂ ವಸತಿ ನೀಡುವ ಮೂಲಕ ಅವರ ಭವಿಷ್ಯ ರೂಪಿಸುತ್ತಿದ್ದಾರೆ.
 

Copyright © 2010 ರಾಜ್ಯ ಸುದ್ದಿ